'ಸುಷ್ಮಾ ಸ್ವರಾಜ್' ಎನ್ನುವ ಹೆಸರೇ ಒಂದು ಶಕ್ತಿಯ ಸ್ವರೂಪ; ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

ಈಗ ಮತ್ತೊಮ್ಮೆ ಅನಂತ್ ಕುಮಾರ್ ನೆನಪಾಗುತ್ತಿದ್ದಾರೆ. ಸುಷ್ಮಾರವರನ್ನು ಕರ್ನಾಟಕ ರಾಜಕೀಯಕ್ಕೆ ಕರೆತರುವಲ್ಲಿ ತೋರಿಸಿದ ಆಸ್ಥೆ  ಅವರನ್ನು ಕನ್ನಡಿಗರ ಇನ್ನಷ್ಟು ಹತ್ತಿರ ಬರುವಂತೆ ಮಾಡಿತು . ನಮ್ಮೆಲ್ಲರ ಸಹೋದರಿಯಾಗಿ ಚಿರಕಾಲ ನಿಲ್ಲುವಂತೆ ಆಯಿತು- ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ  

Last Updated : Aug 7, 2019, 10:27 AM IST
'ಸುಷ್ಮಾ ಸ್ವರಾಜ್' ಎನ್ನುವ ಹೆಸರೇ ಒಂದು  ಶಕ್ತಿಯ ಸ್ವರೂಪ; ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ title=
Pic Courtesy: Social media

ನವದೆಹಲಿ: ಸುಷ್ಮಾ ಸ್ವರಾಜ್ ಎನ್ನುವ ಹೆಸರೇ ಒಂದು  ಶಕ್ತಿ ಯ ಸ್ವರೂಪ. ನಮ್ಮ ನಾಡಿನ ಸಹೋದರಿಯಾಗಿ ಕರ್ನಾಟಕ ಕನ್ನಡಿಗರ ಮೇಲೆ ವಿಶೇಷ ಅನುಬಂಧ ಇಟ್ಟುಕೊಂಡಿದ್ದರು. ಕನ್ನಡವನ್ನು ಸುಲಲಿತವಾಗಿ ಮಾತನಾಡುವುದನ್ನು ಕಲಿತ್ತಿದ್ದರು. ಇಂದು ಅವರು ನಮ್ಮೊಂದಿಗಿಲ್ಲ ಅನ್ನೋದನ್ನು ಊಹಿಸಲೂ ಅಸಾಧ್ಯ. ಅವರಿಗೆ ಸದ್ಗತಿ ದೊರಕಲಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಸುಷ್ಮಾ ಸ್ವರಾಜ್ ಅವರು ಇಂದು ನಮ್ಮೊಂದಿಗಿಲ್ಲ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿರುವ ಡಿ.ವಿ. ಸದಾನಂದ ಗೌಡರು, ನಮ್ಮದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿಗಳಲ್ಲಿ ಸುಷ್ಮಾರ ಹೆಸರು ಅಗ್ರ ಸ್ಥಾನದಲ್ಲಿದೆ. ಅವರ ವಾಕ್ ಚಾತುರ್ಯ, ವಿಚಾರ ವಿಮರ್ಶೆ. ಬುದ್ದಿವಂತಿಕೆ. ದೈವ ಭಕ್ತಿ . ಸರಳ ಜೀವನ. ಎಲ್ಲವೂ ಅನುಕರಣೀಯ. ರಾಜಕೀಯವಾಗಿ ಅನೇಕ ಸ್ಥಾನ ಮಾನ ಪಡೆದ ಅವರು ವಿದೇಶಾಂಗ ಸಚಿವೆಯಾಗಿ ಸಲ್ಲಿಸಿದ ಸೇವೆ ಜನ ಮಾನಸದಲ್ಲಿ ಸ್ಥಿರ ಸ್ಥಾಯಿಯಾಗಿ ನಿಲ್ಲುವಂತದ್ದು.

ನನ್ನ ರಾಜಕೀಯ ಜೀವನದಲ್ಲಿ ಅವರನ್ನು ತುಂಬಾ ಸಮೀಪದಿಂದ ಬಲ್ಲೆ. ತಾವು ನಂಬಿಕೊಂಡಿದ್ದ ಸಿದ್ಧಾಂತದಲ್ಲಿ ಎಂದಿಗೂ ರಾಜಿ ಮಾಡಿ ಕೊಂಡವರಲ್ಲ. ಸಾಮಾನ್ಯರ ಸಂಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ, ಭಾರತದಿಂದ ತನಗರಿವಿಲ್ಲದೆ ಪಾಕಿಸ್ತಾನಕ್ಕೆ ಹೋಗಿ ಸೇರಿದ್ದ ಕಿವುಡ ಮತ್ತು ಮೂಕಿ ಬಾಲಕಿ ಗೀತಾಳನ್ನು ಮತ್ತೆ ನಮ್ಮ ದೇಶಕ್ಕೆ ಕರೆ ತರುವಲ್ಲಿ ತೋರಿಸಿದ ಮಾತೃಹೃದಯ, ಎಲ್ಲವೂ ನೆನಪಿನಂಗಳದಿಂದ ಎದ್ದು ನಿಲ್ಲುತ್ತಿವೆ. 

ದೇಶ ಕಂಡ ತುರ್ತು ಪರಿಸ್ಥಿತಿಯಲ್ಲಿ ಅವರು ಸಿಡಿದ್ದೆದ್ದ ರೀತಿ, ತಮ್ಮ ಕಿರಿ ವಯಸ್ಸಿನಲ್ಲೇ ಹರಿಯಾಣದ ಸಂಪುಟ ದರ್ಜೆ ಸಚಿವರಾಗಿ, ಮೊದಲ ಮಹಿಳಾ ವಕ್ತಾರರಾಗಿ, ದೆಹಲಿಯ ಮುಖ್ಯಮಂತ್ರಿಯಾಗಿ ಎಲ್ಲವೂ ಸಾಧನೆಯ ಪುಟಗಳಲ್ಲಿ ಸೇರಬೇಕಾದವು. ಈಗ ಮತ್ತೊಮ್ಮೆ ಅನಂತ್ ಕುಮಾರ್ ನೆನಪಾಗುತ್ತಿದ್ದಾರೆ. ಸುಷ್ಮಾರವರನ್ನು ಕರ್ನಾಟಕ ರಾಜಕೀಯಕ್ಕೆ ಕರೆತರುವಲ್ಲಿ ತೋರಿಸಿದ ಆಸ್ಥೆ  ಅವರನ್ನು ಕನ್ನಡಿಗರ ಇನ್ನಷ್ಟು ಹತ್ತಿರ ಬರುವಂತೆ ಮಾಡಿತು . ನಮ್ಮೆಲ್ಲರ ಸಹೋದರಿಯಾಗಿ ಚಿರಕಾಲ ನಿಲ್ಲುವಂತೆ ಆಯಿತು.

ಅಮ್ಮಾ ನಿಮ್ಮ ದೇಹ ಇಲ್ಲಿ ಇಲ್ಲದೇ ಇರಬಹುದು ನೀವು ಬಿಟ್ಟು ಹೋದ ಆದರ್ಶಗಳು ಮುಂದಿನ ಪೀಳಿಗೆಯ ಜನತೆಗೆ ದಾರಿದೀಪ. ಅಮ್ಮ ಇದೇ ನನ್ನ ನಮನ ಎಂದು ಭಾವುಕರಾಗಿ ನುಡಿದಿದ್ದಾರೆ.
 

Trending News