ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನಾ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ.
ತನ್ನ 'ಸಾಮನಾ' ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ತೀವ್ರ ಟೀಕಿಸಿರುವ ಶಿವಸೇನೆ, ಭಾರತೀಯ ಜನತಾಪಕ್ಷದ ನಾಯಕ ಪ್ರಧಾನ ಮೋದಿ ಇನ್ನೂ ಏಕೆ ಅಯೋಧ್ಯೆಗೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದೆ.
ಈಗಾಗಲೇ ಮೂರು ಬಾರಿ ಕೇದಾರನಾಥಕ್ಕೆ ಭೇಟಿ ನೀಡಿರುವ ಮೋದಿ, ತಮ್ಮ ಲೋಕಸಭಾ ಕ್ಷೇತ್ರಕ್ಕೂ ಹಲವು ಬಾರಿ ತೆರಳಿದ್ದಾರೆ. ಅಷ್ಟೇ ಏಕೆ ವಿದೇಶದ ಹಲವು ಮಸೀದಿಗಳಿಗೂ ಮೋದಿ ಭೇಟಿ ನೀಡಿದ್ದಾರೆ. ಆದರೆ ಪವಿತ್ರವಾದ ರಾಮ ಜನ್ಮ ಭೂಮಿಯಾದ ಅಯೋಧ್ಯೆಗೆ ಒಮ್ಮೆಯೂ ಏಕೆ ಭೇಟಿ ನೀಡಿಲ್ಲ ಎಂಬುದು ಜನರಲ್ಲಿ ಅಚ್ಚರಿ ಮೂಡಿಸಿದೆ ಎಂದು ಶಿವಸೇನಾ ಹೇಳಿದೆ.
2014ರ ಲೋಕಸಭಾ ಚುನಾವಣೆಯನ್ನು ರಾಮ್ ಎಂಬ ಹೆಸರಿನಲ್ಲಿ ಗೆದ್ದು, ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಅವರಿಗೆ "ಅಯೋಧ್ಯೆ ಮತ್ತು ರಾಮನ ಬಗ್ಗೆ ನೆನಪಿಲ್ಲವೇ?, ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ, ಆದರೆ ಭಾರತದಲ್ಲಿ ನಿರ್ಮಾಣ ಯಾವಾಗ? ಎಂದು ಲೇಖನದಲ್ಲಿ ಪ್ರಶ್ನಿಸಲಾಗಿದೆ.