ಭಾವನಾತ್ಮಕ ಮತಯಾಚನೆ ಮತ್ತು ಧ್ರುವೀಕರಣ: ಕರ್ನಾಟಕದಲ್ಲಿ ತಿರುಮಂತ್ರವಾಯಿತೇ ಬಿಜೆಪಿಯ ಗೆಲುವಿನ ತಂತ್ರ?

Written by - Girish Linganna | Edited by - Manjunath N | Last Updated : May 14, 2023, 10:05 PM IST
  • ಮೋದಿಯವರಿಗೆ 2024ರ ಲೋಕಸಭಾ ಚುನಾವಣೆಯ ಮುನ್ನ ತನ್ನ ಯೋಚನೆ - ಯೋಜನೆಗಳನ್ನು ಬದಲಾಯಿಸಲು ಅವಕಾಶಗಳಿವೆ.
  • ಕಾರ್ಯಕ್ರಮಗಳ ಹೆಸರು ಬದಲಾಯಿಸುವುದರಿಂದ‌ ಅವುಗಳ ರೀತಿ ನೀತಿ ಬದಲಾಗುವುದಿಲ್ಲ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ
  • ಕಳೆದ 70 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಅಭಿವೃದ್ಧಿ ಎನ್ನುವುದು ಸಹಜವಾಗಿ, ಹಂತ ಹಂತವಾಗಿ ನಡೆದುಬಂದಿದೆ
ಭಾವನಾತ್ಮಕ ಮತಯಾಚನೆ ಮತ್ತು ಧ್ರುವೀಕರಣ: ಕರ್ನಾಟಕದಲ್ಲಿ ತಿರುಮಂತ್ರವಾಯಿತೇ ಬಿಜೆಪಿಯ ಗೆಲುವಿನ ತಂತ್ರ? title=
file photo

ಮೇ 13ರಂದು ಪ್ರಕಟವಾದ ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಕೇವಲ ಭಾರತೀಯ ಜನತಾ ಪಾರ್ಟಿಯ ಸೋಲು ಎಂದು ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಯಾರಾದರೂ ವ್ಯಕ್ತಿ ವೈಫಲ್ಯ ಕಂಡಿದ್ದರೆ ಅದು ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ. ಕರ್ನಾಟಕದ ಚುನಾವಣಾ ಫಲಿತಾಂಶ ಮೋದಿಯವರು ಗೆಲುವು ಸಾಧಿಸಲು ವಿಫಲರಾಗಿದ್ದಾರೆ ಎಂಬ ಸಂದೇಶವನ್ನೇ ನೀಡಿದೆ.

ಕರ್ನಾಟಕದ ಚುನಾವಣೆಯನ್ನು ಮುಂದಿನ 2024ರ ಲೋಕಸಭಾ ಚುನಾವಣಾ ಮುನ್ಸೂಚನೆ ನೀಡುವ ಚುನಾವಣೆ ಎಂದೇ ಪರಿಗಣಿಸಲಾಗಿತ್ತು. ಅಂದರೆ, ಪ್ರಸ್ತುತ ಫಲಿತಾಂಶದ ಆಧಾರದಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲು ಕಾಣುತ್ತಾರೆ ಎನ್ನಲು ಸಾಧ್ಯವೇ?

ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ತನ್ನ ಪರಮೋಚ್ಚ ನಾಯಕ ನರೇಂದ್ರ ಮೋದಿಯವರ ಹೆಸರನ್ನು ಮುಂದಿಟ್ಟುಕೊಂಡು. ಆದರೆ ಇದನ್ನು ನಾವು ತಿರಸ್ಕರಿಸಿದ್ದೇವೆ ಎಂಬ ಜನಾದೇಶ ಬಿಜೆಪಿಗೆ ಲಭ್ಯವಾಗಿದೆ.

ಪೂರಕ ವಸ್ತುಗಳನ್ನು ಒದಗಿಸುವ ಪ್ರಲೋಭನೆ, ಅವುಗಳನ್ನು ಸ್ವೀಕರಿಸುವವರ ಹೊಸ ಗುಂಪು, ಚುನಾವಣಾ ಪ್ರಕ್ರಿಯೆಯನ್ನೇ ರಾಜಕೀಯಗೊಳಿಸುವುದು, ಆರ್ಥಿಕ ಮತ್ತು ದೈಹಿಕ ಬಲದ ಬಳಕೆ, ಹೀಗೆ ಎಲ್ಲಾ ರೀತಿಯ ಪ್ರಯತ್ನಗಳೂ ಕರ್ನಾಟಕದಲ್ಲಿ ವಿಫಲವಾದವು.

ಬಜರಂಗ ಬಲಿ ಹನುಮಂತನ ಹೆಸರನ್ನು ಬಳಸಿಕೊಂಡು, ಧಾರ್ಮಿಕ ವಾಕ್ಚಾತುರ್ಯ ಪ್ರದರ್ಶಿಸಿದರೂ, ಧ್ರುವೀಕರಣದ ಚುನಾವಣೆ ನಡೆಸುವ ಬಿಜೆಪಿಯ ಪ್ರಯತ್ನಗಳು ಅಂತಿಮವಾಗಿ ಕೈ ಹಿಡಿಯಲಿಲ್ಲ.

2024ರ ದೊಡ್ಡ ಯುದ್ಧದಲ್ಲಿ ಮೋದಿ ಸೋಲಬಹುದೇ?

ಆರಂಭಿಕವಾಗಿ, ಮೋದಿ ಆಡಳಿತದ ಕುರಿತು ಜನರಲ್ಲಿ ವೈಯಕ್ತಿಕವಾಗಿ ಹತಾಶೆ, ಭಯ, ಹಾಗೂ ಮೋಸ ಹೋದೆವು ಎಂಬ ಭಾವನೆಗಳು ಮಡುಗಟ್ಟಿವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಈಗಾಗಲೇ ಒಂಬತ್ತು ವರ್ಷಗಳಾಗಿವೆ. ಆದರೆ ಬಿಜೆಪಿ ತಾನು ನೀಡಿದ ಆಶ್ವಾಸನೆಗಳನ್ನು ಪೂರೈಸಿಲ್ಲ ಎಂಬ ಭಾವನೆ ಸಾಮಾನ್ಯ ನಾಗರಿಕರಲ್ಲಿದೆ. ಅದರ ಬದಲಾಗಿ, ಕುಶಲ ಚುನಾವಣಾ ತಂತ್ರಗಾರ ನರೇಂದ್ರ ಮೋದಿಯವರೂ ಸೇರಿದಂತೆ, ಬಿಜೆಪಿ ನಾಯಕರು ಮತ ಗಳಿಸಲು ಭಾವನಾತ್ಮಕ ಮಾತುಗಳು, ಕೋಮುವಾದಿ ಧ್ರುವೀಕರಣದಂತಹ ಕಾರ್ಯತಂತ್ರಗಳ ಮೊರೆ ಹೋದರು.

ಭ್ರಷ್ಟಾಚಾರ, ಬಂಡವಾಳಶಾಹಿ ನೀತಿ, ಹಾಗೂ ಭಾರತದ ಮೇಲಿನ ಚೀನೀ ಅತಿಕ್ರಮಣವನ್ನು ಕೊನೆಗಾಣಿಸುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ತನ್ನ ಮತದಾರರಿಗಾಗಲಿ, ದೇಶದ ನಾಗರಿಕರಿಗಾಗಲಿ ನೀಡಿದ ಮಾತನ್ನು ಪೂರೈಸಲಿಲ್ಲ.

ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಬ್ಬರು ಪಕ್ಷದಲ್ಲಿನ ಭ್ರಷ್ಟಾಚಾರದಿಂದ ನೊಂದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಅದರೊಡನೆ, ಇತ್ತೀಚೆಗೆ ರಾಹುಲ್ ಗಾಂಧಿಯವರು ಮೋದಿ ಆಡಳಿತದ ಕುರಿತು ಮಾತನಾಡುತ್ತಾ, ಪಾಕಿಸ್ತಾನ ಮತ್ತು ಚೀನಾ ಕುರಿತು ಭಾರತದ ರಕ್ಷಣಾ ನೀತಿಯನ್ನು ಪ್ರಶ್ನಿಸಿದ್ದೂ ಜನರ ಗಮನ ಸೆಳೆದಿದೆ. ರಾಷ್ಟ್ರೀಯ ಭದ್ರತೆಯೇ ಮುಖ್ಯ ಎಂದು ಭಾವಿಸಿರುವ ಜನರಿಗೆ ಚೀನಾದ ಆಕ್ರಮಣಕಾರಿ ನೀತಿಗೆ ಉತ್ತರಿಸುವಲ್ಲಿ ಮೋದಿ ಆಡಳಿತದ ನಿಧಾನಗತಿ ಅಸಮಾಧಾನ ಉಂಟುಮಾಡಿದೆ.

ಇನ್ನು ಅದಾನಿ ವಿಚಾರದ ಕುರಿತಾಗಿ ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ್ದ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅಮಾನ್ಯಗೊಳಿಸಿದ್ದೂ ಮೋದಿಯವರ ದ್ವೇಷ ರಾಜಕಾರಣದ ಅಂಗ ಎಂದೇ ಪರಿಗಣಿಸಲಾಗಿದೆ. ಅದರೊಡನೆ, ಮೋದಿ ಸರ್ಕಾರ ತನ್ನ ವಿರೋಧಿಗಳನ್ನು ಮಣಿಸಲು ಸಿಬಿಐ, ಇಡಿಯಂತಹ ಸಂಸ್ಥೆಗಳನ್ನು ಬಳಸಿಕೊಂಡಿದೆ ಎಂಬ ಆರೋಪಗಳನ್ನೂ ಜನರು ಗಮನಿಸುತ್ತಾ ಬಂದಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅಮಾಯಕತೆ, ಕಠಿಣ ಪರಿಶ್ರಮ, ಪ್ರೀತಿ ಹಾಗೂ ಜನರೆಡೆಗಿನ ಕಾಳಜಿಯನ್ನು ಪ್ರದರ್ಶಿಸಿದ್ದರು. ಅವರು ಜನಸಾಮಾನ್ಯರೊಡನೆ ಹಾದಿ ಬೀದಿಗಳಲ್ಲಿ ನಡೆದುದೂ ಜನರ ಗಮನ ಸೆಳೆದಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿಯ ನಾಯಕರುಗಳು ವಿಮಾನ ಹತ್ತಿ ಕುಳಿತು ಸಂದರ್ಶನಗಳನ್ನು ನೀಡಿದ್ದೂ ನಡೆಯುತ್ತಿತ್ತು.

ಕೃಷಿ ಪ್ರಧಾನ ರಾಷ್ಟ್ರವಾಗಿರುವ ಭಾರತದಲ್ಲಿ ಸತತವಾಗಿ ರೈತರ ಪ್ರತಿಭಟನೆ, ಪ್ರತಿಭಟನಾ ನಿರತ ರೈತರ ಸಾವುಗಳೂ ಜರುಗಿದವು. ಬಂಡವಾಳಶಾಹಿಗಳಿಗೆ ಅನುಕೂಲಕರವಾಗಬಹುದು ಎಂಬ ಆರೋಪದಿಂದ ರೈತರು ಸತತವಾಗಿ ನೂತನ ಕೃಷಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಸರ್ಕಾರ ಅವರ ಬೇಡಿಕೆಗಳೆಡೆಗೆ ಕುರುಡಾಗಿರುವಂತೆ ನಡೆದುಕೊಂಡಿತ್ತು. ತಾನು ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ರಾಷ್ಟ್ರವನ್ನು ಬಂಡವಾಳಶಾಹಿಗಳಿಂದ ರಕ್ಷಿಸುವ ಮಾತನಾಡುತ್ತಿತ್ತು!

ಬಿಜೆಪಿ ನಾಯಕ, ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರು ಪುಲ್ವಾಮಾ ದಾಳಿಯ ಕುರಿತು ಮಾತನಾಡಿ, ಸರ್ಕಾರದ ಸಿದ್ಧತೆ ಎಷ್ಟು ಕೆಟ್ಟದಾಗಿತ್ತು ಎಂದಿದ್ದರು. ಮಹಿಳಾ ಕುಸ್ತಿಪಟುಗಳು ಅವರ ಮೇಲಿನ ಶೋಷಣೆಯ ಕುರಿತು ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಅದರೆಡೆಗೆ ದಿವ್ಯ ನಿರ್ಲಕ್ಷ್ಯ ತೋರಿತ್ತು.

ಕೆಲವು ವಿಧೇಯಕಗಳನ್ನಂತೂ ಸಮುದಾಯಗಳ ನಡುವೆ ಜಗಳ ನಡೆಯುವಂತೆ ಮಾಡುವ ಉದ್ದೇಶದಿಂದಲೇ ಅನುಮೋದನೆ ಪಡೆದಿರುವಂತೆ ಕಾಣುತ್ತಿದ್ದು, ಇದರ ಪರಿಣಾಮವಾಗಿ ಪ್ರತಿಭಟನೆಗಳು, ಜಗಳಗಳು, ಬಂಧನಗಳು, ಕೊಲೆಗಳೂ ಸಂಭವಿಸಿವೆ.

ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ, ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳನ್ನು, ಸರ್ಕಾರಿ ಅನುದಾನಿತ ವೇದಿಕೆಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳನ್ನು ದ್ವೇಷ ಹರಡಲು, ಸಮುದಾಯಗಳ ಮಧ್ಯೆ ಕಂದಕ ಸೃಷ್ಟಿಸಲು ಬಳಸಿಕೊಂಡದ್ದನ್ನೂ ಜನರು ಗಮನಿಸಿದ್ದಾರೆ.

ಜನರಿಗೆ ಉಚಿತ ಕೊಡುಗೆಗಳನ್ನು ನೀಡಿ, ಅವಲಂಬಿತರ ಸಮೂಹವನ್ನೇ ಸೃಷ್ಟಿಸುವ ಪ್ರಯತ್ನವೂ ಫಲ ನೀಡಿಲ್ಲ. ಭಾರತೀಯರಿಗೆ ಕೆಲಸ ಮಾಡುವ ಹಂಬಲವಿದ್ದು, ಅವರು ಸುಮ್ಮನೆ ಹಣ ನೀಡುವ ಭರವಸೆಗಳನ್ನು ನಂಬಲು ಸಿದ್ಧರಾಗಿಲ್ಲ. ಕಳೆದ ಕೆಲ ವರ್ಷಗಳಿಂದ ಸ್ಟಾರ್ಟಪ್‌ಗಳು ಉಳಿಯುವುದೇ ಕಷ್ಟಕರವಾಗಿದೆ. ಕೇವಲ ಕೆಲವು ಸ್ಟಾರ್ಟಪ್‌ಗಳು ಮಾತ್ರವೇ ಯುನಿಕಾರ್ನ್‌ಗಳಾಗಿವೆ. ಬಹುತೇಕ ಸ್ಟಾರ್ಟಪ್‌ಗಳಿಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ.

ಭಾರತದಲ್ಲಿ ಉತ್ಪಾದನೆ ಮಾಡುವ ಮಾತನ್ನಾಡುತ್ತಾ, ವಿದೇಶದಿಂದ ಬಿಡಿಯಾಗಿ ತಂದು, ಭಾರತದಲ್ಲಿ ಅವುಗಳನ್ನು ಜೋಡಿಸಿ, ಭಾರತದ ಹೆಸರು ಹಾಕುವುದು 'ಮೇಡ್ ಇನ್ ಇಂಡಿಯಾ' ಎನಿಸಿಕೊಳ್ಳುವುದಿಲ್ಲ ಎನ್ನುವುದು ವಾಸ್ತವಾಂಶ. ಚೀನಾದೊಡನೆ ಮಿಲಿಟರಿ ಸಂಘರ್ಷದ ಹೊರತಾಗಿಯೂ ವ್ಯಾಪಾರ ದಿನೇ ದಿನೇ ಹೆಚ್ಚಾಗುತ್ತಿದೆ. ಅದರೊಡನೆ ಇತಿಹಾಸದ ಪಠ್ಯಗಳು ಹೇಗೆ ಬದಲಾಗಿವೆ ಮತ್ತು ವಿಜ್ಞಾನ ವಿಚಾರಗಳನ್ನು ಹೇಗೆ ಕಿತ್ತುಹಾಕಲಾಗಿದೆ ಎನ್ನುವುದೂ ಜನರ ಮುಂದಿದೆ.

ಬಿಜೆಪಿಯ ಆಡಳಿತದಲ್ಲಿ ಕಾನೂನುಗಳು ಸಮುದಾಯದಿಂದ ಸಮುದಾಯಕ್ಕೆ ಭಿನ್ನವಾಗಿದೆ. ಇಂದು ಯಾರಿಗಾದರೂ, ಏನಾದರೂ ತೊಂದರೆ ಉಂಟಾದರೆ ನಾಳೆ ಅದು ನಮಗೂ ಆಗಬಹುದು ಎಂದು ಜನರು ತಿಳಿದಿದ್ದಾರೆ. ಆದ್ದರಿಂದಲೇ ಜನರು ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದಾರೆ. ಆದರೆ ಈ ಜಾಗೃತಿ ಅವರ ಯೋಜನೆಗಳಲ್ಲಿ ಪ್ರತಿಫಲಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ.

ಮೋದಿಯವರಿಗೆ 2024ರ ಲೋಕಸಭಾ ಚುನಾವಣೆಯ ಮುನ್ನ ತನ್ನ ಯೋಚನೆ - ಯೋಜನೆಗಳನ್ನು ಬದಲಾಯಿಸಲು ಅವಕಾಶಗಳಿವೆ. ಕಾರ್ಯಕ್ರಮಗಳ ಹೆಸರು ಬದಲಾಯಿಸುವುದರಿಂದ‌ ಅವುಗಳ ರೀತಿ ನೀತಿ ಬದಲಾಗುವುದಿಲ್ಲ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಕಳೆದ 70 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಅಭಿವೃದ್ಧಿ ಎನ್ನುವುದು ಸಹಜವಾಗಿ, ಹಂತ ಹಂತವಾಗಿ ನಡೆದುಬಂದಿದೆ. ಆದರೆ ಮೋದಿಯವರು ಇದ್ದಕ್ಕಿದ್ದ ಹಾಗೇ ಏಣಿಯ ತುದಿಯಲ್ಲಿ ನಿಂತು ಮಾತನಾಡಲಾರಂಭಿಸಿದರು. ದೇಶದ ಜನರೂ ಅವರನ್ನು ನಂಬಿದರು. ಆದರೆ ಮೋದಿಯವರು ತನಗಿಂತ ಮೊದಲು ಆಡಳಿತ ನಡೆಸಿದ ಸರ್ಕಾರಗಳು ಹಾಗೂ ಜನರಿಗೆ ದೇಶವನ್ನು ಈ ಹಂತಕ್ಕೆ ತಂದಿದ್ದಕ್ಕೆ ಕೃತಜ್ಞರಾಗಿರಬೇಕು. ಆದರೆ ಮೋದಿ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಸಾಮಾನ್ಯ ನಾಗರಿಕರೂ ಮಾತನಾಡುತ್ತಿದ್ದು, ಆ ಭರವಸೆಗಳು ಈಗ ಖಾಲಿ ಖಾಲಿಯಾಗಿ ಕಂಡುಬರುತ್ತಿವೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ. ಈ ಸೋಲಿಗೆ ಬಿಜೆಪಿ ಸತತವಾಗಿ, ಅನಗತ್ಯವಾಗಿ, ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ ಕುಟುಂಬವನ್ನು ಟೀಕಿಸಿದ್ದು, ವೈಯಕ್ತಿಕ ದಾಳಿ ನಡೆಸಿದ್ದೂ ಒಂದು ಕಾರಣವಾಗಿದೆ. ಅದರೊಡನೆ ಕಾಂಗ್ರೆಸ್ ಮುಕ್ತ ಭಾರತ ಎಂಬ ಬಿಜೆಪಿಯ ಘೋಷಣೆಯೂ ಬಿಜೆಪಿಗೆ ತಿರುಗುಬಾಣವಾಗಿದೆ. ರಾಷ್ಟ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿ ಮೃತರಾದ ಮಾಜಿ ಪ್ರಧಾನಿಯವರ ಮಗನನ್ನು ಕುರಿತು ವಾಗ್ದಾಳಿ ನಡೆಸಿ, ಬಳಿಕ ಬಿಜೆಪಿಯಲ್ಲೂ ವಂಶಾಡಳಿತಕ್ಕೆ ಅನುವು ಮಾಡಿಕೊಟ್ಟಿರುವುದು ಇಬ್ಬಗೆಯ ನೀತಿಯ ಪ್ರದರ್ಶನವಲ್ಲದೆ ಇನ್ನೇನು?

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ, ಹಾಗೂ ರಾಜಸ್ಥಾನಗಳು ಬಿಜೆಪಿಗೆ ಪ್ರಾಮಾಣಿಕವಾಗಿ ದೇಶಸೇವೆ ಮತ್ತು ಜನಸೇವೆ ನಡೆಸಲು ಅವಕಾಶಗಳಾಗಿವೆ. ಆ ಮೂಲಕ ತಮ್ಮ ಭರವಸೆಗಳನ್ನು ಈಡೇರಿಸಲು ಬಿಜೆಪಿ ಗಮನ ಹರಿಸಬೇಕಿದೆ. ಒಂಬತ್ತು ವರ್ಷಗಳ ದೀರ್ಘಕಾಲ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿರುವ ಮೋದಿಯವರಿಗೆ ನಾನೊಬ್ಬ ಚಾಯ್ ವಾಲಾ ಆಗಿದ್ದೆ ಎಂಬ ಹೇಳಿಕೆಗಳು ಇನ್ನೂ ಪ್ರಯೋಜ‌ನಕಾರಿಯಾಗಲು ಸಾಧ್ಯವಿಲ್ಲ. ಭೌಗೋಳಿಕವಾಗಿ ಸಾಕಷ್ಟು ವಿಶಾಲವಾಗಿರುವ ಭಾರತದಲ್ಲಿ ಯೋಗ್ಯ ವಿರೋಧ ಪಕ್ಷಗಳ ನಾಯಕರುಗಳು ಮೂಡಿ ಬರುತ್ತಿದ್ದು, ತಮ್ಮ ಮಾತೃಭೂಮಿಯ ಅಭಿವೃದ್ಧಿಗಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲ, ಮಹತ್ವಾಕಾಂಕ್ಷೆ ಹೊತ್ತು ರಾಜಕೀಯಕ್ಕಿಳಿದು, ಪೈಪೋಟಿ ನೀಡುತ್ತಿದ್ದಾರೆ.

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News