ಬೆಂಗಳೂರು : ವಿಧಾನಸಭೆ ಚುನಾವಣೆ ಹತ್ತಿವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೂರೂ ಪಕ್ಷಗಳು ಮತದಾರರ ಮನವೊಲಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಮ್ಮದೇ ಆದ ಸ್ಟಾಟರ್ಜಿಗಳನ್ನು ಸಹ ಬಳಸುತ್ತಿದ್ದಾರೆ. ತಂತ್ರದ ಮೇಲೆ ರಣತಂತ್ರ ಹೆಣೆದು ಶತಾಗತಾಯ ಗೆಲ್ಲಲೇ ಬೇಕು ಎಂದು ಪಣತೊಟ್ಟಂತೆ ಓಡಾಡುತ್ತಿದ್ದಾರೆ. ಇದೀಗ ರಾಜ್ಯ ರಾಜಕೀಯದಲ್ಲಿ ಸದಾ ಹೈಲೈಟ್ ಆಗುವ ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಮುಖ್ಯ ಬೆಳವಣಿಗೆ ಸುದ್ದಿಯಾಗ್ತಿದೆ.
ಇತ್ತೀಚೆಗೆ ಪ್ರಧಾನಿ ಮೋದಿ ಬಂದಾಗ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಸಪೋರ್ಟ್ ಮಾಡುವ ಮೂಲಕ ಕಮಲ ಮುಡಿಯುವ ಮುನ್ಸೂಚನೆ ಕೊಟ್ಟರು. ಇದೀಗ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಭಾನುವಾರ ಮತ್ತೆ ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಅನೌನ್ಸ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಶಿವರಾಮೇಗೌಡರು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳಲ್ಲೂ ರಾಜಕಾರಣ ಮಾಡಿದ್ದಾರೆ.
ಇತ್ತೀಚೆಗೆ ಪಕ್ಷದ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದ ಕಾರಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಹಲವು ತಿಂಗಳಿಂದ ಮಂಡ್ಯದ ನಾಗಮಂಗಲ ಕ್ಷೇತ್ರದಲ್ಲಿ ಶಿವರಾಮೇಗೌಡರು ಸಕ್ರಿಯರಾಗಿದ್ದರು. ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ : ಎಕ್ಸ್ಪ್ರೆಸ್ ಹೆದ್ದಾರಿಯೋ, ಹೆಮ್ಮಾರಿಯೋ..?: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ
ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಇದೀಗ ಮತ್ತೆ ಬಿಜೆಪಿಯತ್ತ ವಾಲುತ್ತಿದ್ದಾರೆ. ಜೆಡಿಎಸ್ನಿಂದ ಉಚ್ಚಾಟನೆಗೊಂಡ ಒಂದು ವರ್ಷದ ಬಳಿಕ ಬಿಜೆಪಿ ಸೇರುತ್ತಿರುವುದು ಅಚ್ಚರಿ ಮೂಡಿಸಿದೆ. ಭಾನುವಾರ ಬೆಂಗಳೂರಿನಲ್ಲಿ ನೆಲೆಸಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮತದಾರರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಬಿಜೆಪಿ ಪಕ್ಷದ ಸಚಿವರನ್ನುಶಿವರಾಮೇಗೌಡರು ಆಹ್ವಾನಿಸಿದ್ದಾರೆ. ಸಭೆಗೆ ಸಚಿವ ಸಚಿವರಾದ ಎಸ್ ಟಿ ಸೋಮಶೇಖರ್, ಸುಧಾಕರ್ ಹಾಗೂ ಸೋಮಣ್ಣರಿಗೂ ಆಹ್ವಾನ ನೀಡಲಾಗಿದೆ. ಇದೇ ಕಾರಣಕ್ಕೆ ಸಚಿವರ ಮುಂದೆಯೇ ಬಿಜೆಪಿ ಸೇರುವ ಬಗ್ಗೆ ಅಧಿಕೃತ ಘೋಷಣೆ ಮಾಡ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪಕ್ಷೇತರರಾಗಿ ಒಮ್ಮೆ ವಿಧಾನಸಭೆಗೆ ಆಯ್ಕೆ ಶಿವರಾಮೇಗೌಡರು ಆಯ್ಕೆಯಾಗಿದ್ದರು. ಇದನ್ನು ಬಿಟ್ಟರೆ ರಾಜಕೀಯ ಪಕ್ಷಗಳಿಂದ ವಿಧಾನಸಭೆಗೆ ಆಯ್ಕೆಯಾಗುವ ಭಾಗ್ಯ ಇದುವರೆಗೂ ದೊರೆತಿಲ್ಲ. ಶಿವರಾಮೇಗೌಡರು ಜೆಡಿಎಸ್ - ಕಾಂಗ್ರೆಸ್ ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿ 2018ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಎಲೆಕ್ಷನ್ನಲ್ಲಿ ಗೆಲುವು ಸಾಧಿಸಿ, ಆರು ತಿಂಗಳ ಸಂಸದರಾಗಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ : ಅಪ್ಪ-ಮಗ ಬರೀ ತರ್ಲೆ, ರೌಡಿಸಂ ಮಾಡಿಸ್ತಾರೆ : ಸಚಿವ ಸೋಮಣ್ಣ
ಶಿವರಾಮೇಗೌಡರಿಗೆ ಪಕ್ಷಾಂತರ ಮಾಡುವುದು ಹೊಸದೇನಲ್ಲ. 1996 ರಲ್ಲಿ ಜನತಾ ದಳದಲ್ಲಿದ್ದರು. 1999ರ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಬಂದರು. 2009ರಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ಸೇರಿದ ಬಳಿಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, 1,60,000 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಆ ಬಳಿಕ ಒಂದೇ ವರ್ಷದಲ್ಲಿ ಮತ್ತೆ ಕಾಂಗ್ರೆಸ್ ಸೇರಿದರು. 2014ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅದರಲ್ಲಿಯೂ ಸೋಲುಂಡರು.
ಆ ಬಳಿಕ 2018ರ ಚುನಾವಣೆ ವೇಳೆ ಶಿವರಾಮೇಗೌಡರು ಮತ್ತೆ ಜೆಡಿಎಸ್ಗೆ ಬಂದರು. ಆಗ ಸಂಸದರಾಗಿದ್ದ ಸಿ ಎಸ್ ಪುಟ್ಟರಾಜು ರಾಜೀನಾಮೆ ನೀಡದ್ದರು. ಇದರಿಂದ ತೆರವಾದ ಸ್ಥಾನಕ್ಕೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ - ಕಾಂಗ್ರೆಸ್ ಮಿತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಗೆಲುವು ಕಂಡರು.
ಆ ಬಳಿಕ ಮಾಜಿ ಸಂಸದ ಜಿ ಮಾದೇಗೌಡರ ವಿರುದ್ಧ ಲಘುವಾಗಿ ಮಾತನಾಡಿದ ಕಾರಣಕ್ಕೆ ಜೆಡಿಎಸ್ ಪಕ್ಷದಿಂದ ಶಿವರಾಮೇಗೌಡರನ್ನು ಉಚ್ಚಾಟನೆ ಮಾಡಲಾಯಿತು. ಒಂದು ವರ್ಷ ಅಜ್ಞಾತವಾಸದಲ್ಲಿದ್ದ ಶಿವರಾಮೇಗೌಡರು ಇದೀಗ ಬಿಜೆಪಿ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.