Karnataka Assembly Election 2023: ಹಾಸನ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿದ್ದು, ಗದ್ದೆ ಗೆಲ್ಲುತ್ತೇವೆ, ಗೆದ್ದು ತೋರಿಸುತ್ತೇವೆ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಅವರು ಹೇಳುವ ಮೂಲಕ ಸ್ವರೂಪ್ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಸುಳಿವು ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೆದುರು ಪ್ರತಿಕ್ರಿಯಿಸಿರುವ ಭವಾನಿ ರೇವಣ್ಣ ಅವರು, ಈ ಹಿಂದಿನ ಚುನಾವಣೆಯಲ್ಲಿ ಹೇಗೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೋ ಅದೇ ರೀತಿ ಈ ಬಾರಿಯೂ ಮಾಡುತ್ತೇವೆ. ಹಾಸನ ಕ್ಷೇತ್ರದಲ್ಲೂ ಪ್ರಚಾರ ನಡೆಸುವುದಾಗಿ ಭವಾನಿ ರೇವಣ್ಣ ಅವರು ತಿಳಿಸಿದ್ದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಸಮಾಧಾನ ತಣ್ಣಗಾದಂತೆ ಕಾಣುತ್ತಿದೆ.
ಇದನ್ನೂ ಓದಿ- ವಿಜಯನಗರದಲ್ಲಿ ಬಿಜೆಪಿಯ ಮತ್ತೆರಡು ವಿಕೆಟ್ ಪತನ
ಹಾಸನ ಕ್ಷೇತ್ರ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಸಿದ್ದ ಭವಾನಿ ರೇವಣ್ಣ ಅವರು ಚುನಾವಣೆ ಘೋಷಣೆಗೂ ಮುನ್ನವೇ ಕಾರ್ಯಕ್ರಮವೊಂದರಲ್ಲಿ ನಾನೇ ಅಭ್ಯರ್ಥಿಯಾಗಲಿದ್ದೇನೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಟಿಕೆಟ್ ಗೊಂದಲಕ್ಕೆ ಕಿಡಿ ಹೊತ್ತಿಸಿದ್ದರು. ಜೊತೆಗೆ ತಮ್ಮ ಕುಟುಂಬದೊಂದಿಗೆ ಮೂರು ದಿನಗಳ ಕಾಲ ಬಿಡುವಿಲ್ಲದಂತೆ ಪ್ರತಿ ಗ್ರಾಮ ಪಂಚಾಯಿತಿವಾರು ಚುನಾವಣೆ ಪ್ರಚಾರ ನಡೆಸುವ ಮೂಲಕ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದರು. ಅಲ್ಲದೆ ಅಭಿಮಾನಿಗಳು ಭವಾನಿ ಅವರಿಗೆ ಟಿಕೆಟ್ ನೀಡಬೇಕೆಂದು ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ, ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವರೂಪ್ ಬೆಂಬಲಕ್ಕೆ ನಿಂತು ಭವಾನಿ ಅವರ ಸ್ಪರ್ಧೆ ಅನಿವಾರ್ಯವಿಲ್ಲ, ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಮಾಡಿಕೊಡುವುದಾಗಿ ದೃಢ ನಿಲುವು ತಾಳಿದ್ದರು. ಇದರಿಂದ ರೇವಣ್ಣ ಅವರ ಕುಟುಂಬ ಟಿಕೆಟ್ಗಾಗಿ ಎಷ್ಟೇ ಹಲವು ರೀತಿಯಲ್ಲಿ ಕಸರತ್ತು ನಡೆಸಿದರೂ, ಈ ವಿಚಾರವಾಗಿ ಹೆಚ್.ಡಿ.ದೇವೇಗೌಡರು ಮಧ್ಯೆ ಪ್ರವೇಶ ಮಾಡಿ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಅವರ ಪುತ್ರ ಹೆಚ್.ಪಿ.ಸ್ವರೂಪ್ ಅವರಿಗೆ ಟಿಕೆಟ್ ದೊರಕಿಸಿಕೊಟ್ಟಿದ್ದಾರೆ. ಇದರಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಟಿಕೆಟ್ ಕೈ ತಪ್ಪಿದ್ದರಿಂದ ಭವಾನಿ ರೇವಣ್ಣ ಅವರು ಸ್ವರೂಪ್ ಪರ ಪ್ರಚಾರಕ್ಕಿಳಿಯುವುದು ಅನುಮಾನ ಎಂದು ಭಾವಿಸಲಾಗುತ್ತು. ಆದರೆ, ಭವಾನಿ ಅವರೇ ಸ್ವತಃ ಮಾಧ್ಯಮಗಳಿಗೆ ಹಾಸನ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಪ್ರಚಾರ ಕಾರ್ಯ ರಂಗೇರಲಿದೆ.
ಈಗಾಗಗಲೇ ಹೆಚ್.ಪಿ.ಸ್ವರೂಪ್ ಅವರು ಟಿಕೆಟ್ ಘೋಷಣೆಯಾಗುತ್ತಿದ್ದಂತೆ ರೇವಣ್ಣ ಅವರ ನಿವಾಸಕ್ಕೆ ತೆರಳಿ ಅಸಮಾಧಾನ ಮರೆತು ಆಶೀರ್ವದಿಸಿ, ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಏ.20ರಂದು ಕ್ಷೇತ್ರದ ಜೆಡಿಎಸ್ ಬಲ ಪ್ರದರ್ಶನ ಮತ್ತು ನಾಮಪತ್ರ ಸಲ್ಲಿಕೆ ವೇಳೆ ರೇವಣ್ಣ ಅವರ ಇಡೀ ಕುಟುಂಬ, ಕುಮಾರಸ್ವಾಮಿ ಅವರು ಭಾಗವಹಿಸಲಿದ್ದು, ಸ್ವರೂಪ್ಗೆ ಬಲ ತುಂಬಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ- ರಂಗೇರಿದ ವಿಧಾನಸಭೆ ಚುನಾವಣೆ ಅಖಾಡ; ಒಂದೇ ದಿನ 842 ನಾಮಪತ್ರ ಸಲ್ಲಿಕೆ
ಗುರುವಾರ ಜೆಡಿಎಸ್ ಬಲ ಪ್ರದರ್ಶನ:
ಜೆಡಿಎಸ್ ಅಭ್ಯರ್ಥಿ ಹೆಚ್.ಪಿ.ಸ್ವರೂಪ್ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿ, ನಮ್ಮ ನಾಯಕರಾದ ದೇವೇಗೌಡರು, ಕುಮಾರಣ್ಣ, ರೇವಣ್ಣ, ಪ್ರಜ್ವಲ್, ಸೂರಜ್, ಭವಾನಿ ಮೇಡಂ ಆಶೀರ್ವಾದದೊಂದಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಏ.20 ರಂದು ಬೃಹತ್ ಮೆರವಣಿಗೆಯೊಂದಿಗೆ ಮತ್ತೊಮ್ಮೆ ಸಲ್ಲಿಕೆ ಮಾಡುತ್ತೇನೆ. ಅಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಸೇರಿ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಚುನಾವಣೆ ಪ್ರಚಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾಗವಹಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಹೆಚ್.ಡಿ.ರೇವಣ್ಣ ಅವರು ಕೂಡ ಹಾಸನ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.