ಚಾಮರಾಜನಗರ: ಮದುವೆ ಅಂದರೆ ವರನ ಐಷಾರಾಮಿ ಕಾರು, ಬೈಕ್ ತಂದು ನಿಲ್ಲಿಸುವುದು ಸಾಮಾನ್ಯ. ಆದರೆ ಇಲ್ಲೋರ್ವ ಯುವ ರೈತ ತನ್ನ ನೆಚ್ಚಿನ ಜೋಡೆತ್ತುಗಳಿಗೆ ವಿಶೇಷ ವೇದಿಕೆ ನಿರ್ಮಿಸಿ ವಿಶಿಷ್ಟವಾಗಿ ತನ್ನ ಮದುವೆಯನ್ನು ನೆರವೇರಿಸಿಕೊಂಡಿದ್ದಾರೆ.
ಹೌದು, ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ಇಂದು ವಿಶೇಷ ಮದುವೆಯೊಂದು ನಡೆದಿದ್ದು, ಕೃಷಿ ಚಟುವಟಿಕೆಗೆ ನೆರವಾಗುವ ತಮ್ಮ ಎತ್ತುಗಳನ್ನು ಮದುವೆ ಛತ್ರಕ್ಕೆ ಕರೆತಂದು ಅದಕ್ಕಾಗಿಯೇ ವೇದಿಕೆ ನಿರ್ಮಿಸಿ ಗೋಪ್ರೀತಿ ತೋರುವ ಮೂಲಕ ಮದುವೆ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಕಾಡಾನೆ ದಾಳಿಯಿಂದಾದ ಜೀವ ಹಾನಿ-ಬೆಳೆಹಾನಿ ಪರಿಹಾರ ದ್ವಿಗುಣ: ಸಚಿವ ಕೆ.ಗೋಪಾಲಯ್ಯ
ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರೊಟ್ಟಿಗೆ ತೊರವಳ್ಳಿ ಗ್ರಾಮದ ಯೋಗಿತಾ ಸಪ್ತಪದಿ ತುಳಿದಿದ್ದಾರೆ. ಮದುವೆ ಸಮಾರಂಭಕ್ಕೆ ತಾವು ಸಾಕಿದ ಎತ್ತುಗಳನ್ನು ಕರೆತಂದು ಅವುಗಳು ಕೂಡ ವಿವಾಹಕ್ಕೆ ಸಾಕ್ಷಿಯಾಗಬೇಕೆಂಬ ವರನ ಆಸೆಯನ್ನು ಇಲ್ಲ ಅನ್ನದ ಕುಟುಂಬಸ್ಥರು ಎತ್ತುಗಳನ್ನು ಸಿಂಗರಿಸಿ- ಅದಕ್ಕಾಗಿಯೇ ವಿಶೇಷ ವೇದಿಕೆಯನ್ನು ನಿರ್ಮಿಸಿ ವಧು-ವರರಿಗೆ ಜೋಡೆತ್ತುಗಳಿಂದ ಆಶೀರ್ವಾದ ಕೊಡಿಸಿ ಮದುವೆ ನಡೆಸಿದ್ದಾರೆ.
ಈ ಎತ್ತುಗಳು 2 ಲಕ್ಷ ರೂ. ಮೌಲ್ಯದ್ದಾಗಿದ್ದು, ಅವುಗಳಿಂದಲೇ ಕೃಷಿ ಚಟುವಟಿಕೆ ನಡೆಸುತ್ತೇವೆ. ಮದುವೆ ಸಮಾರಂಭಕ್ಕೆ ಎತ್ತುಗಳನ್ನು ಕರೆತರೋಣವೆಂದು ಪುತ್ರ ಮಹೇಶ್ ಆಸೆ ಪಟ್ಟಿದ್ದರಿಂದ ಛತ್ರಕ್ಕೆ ಕರೆತಂದೆವು ಎಂದು ವರನ ತಂದೆ ಬಸವರಾಜಪ್ಪ ಖುಷಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮ್ಯಾಂಡೋಸ್ ಪರಿಣಾಮ, ಸಿಎಂ ಬೊಮ್ಮಾಯಿ ಕಾರ್ಯಕ್ರಮದ ಸ್ಥಳ ಕೆಸರುಮಯ!
ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಯುವಕನೋರ್ವ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಾನು ಸಾಕಿದ ಎತ್ತುಗಳ ಮೇಲೆ ಅಪಾರ ಪ್ರೀತಿ ಇಟ್ಟಿರುವುದು ಶ್ಲಾಘನೀಯ. ವ್ಯವಸಾಯದಿಂದ ವಿಮುಖರಾಗುವವರು ಇವರನ್ನು ನೋಡಿ ಕಲಿಯಬೇಕೆಂದು ಸ್ಥಳೀಯರಾದ ಲಿಂಗರಾಜು ಹರ್ಷ ವ್ಯಕ್ತಪಡಿಸಿದ್ದಾರೆ.
ಮದುವೆ ಎಂದರೆ ನೆನಪಿನಲ್ಲಿ ಉಳಿಯುವ ಜೀವನದ ಮಹತ್ವದ ಘಳಿಗೆಯಾಗಿದ್ದು, ಅದನ್ನು ಮತ್ತಷ್ಟು ಸ್ಮರಣೀಯ ಮಾಡಿಕೊಂಡಿರುವ ಯುವ ರೈತ ಮಹೇಶ್ ಅವರ ಗೋಪ್ರೀತಿ ಮಾದರಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.