ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಸುದ್ದಿ ಆಘಾತ ಉಂಟು ಮಾಡಿದೆ. ಇದು ಅತ್ಯಂತ ಹೇಯವಾದ ಕೃತ್ಯ. ಮಾನವೀಯತೆ ಇರುವವರು ಇಂತಹ ಕೃತ್ಯಕ್ಕೆ ಕೈ ಹಾಕುವುದಿಲ್ಲ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಗೌರಿ ಲಂಕೇಶ್ ಅವರ ಹತ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಗೌರಿ ಲಂಕೇಶ್ ಪತ್ರಕರ್ತರಾಗಿದ್ದರು. ಜೊತೆಗೆ ವಿಚಾರವಾದಿ, ಸಾಹಿತಿಯೂ ಆಗಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರಿಸಿದ್ದರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುತ್ತಿದ್ದರು ಎಂದು ಸಿಎಂ ತಿಳಿಸಿದರು.
ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ವುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸುವಂತೆ ಸೂಚಿಲಾಗಿದೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ವಿವರ ಒದಗಿಸಿದರು.
ದುಷ್ಕರ್ಮಿಗಳನ್ನು ಪತ್ತೆ ಹಚ್ವಿ ಶಿಕ್ಷೆಗೆ ಗುರಿಪಡಿಸುವ ವಿಚಾರದಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದ ಸಿಎಂ ಪೊಲೀಸರ ವರದಿ ಗಮನಿಸಿದ ಬಳಿಕ ಯಾವ ರೀತಿಯ ತನಿಖೆ ನಡೆಸಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗೃಹ ಸಚಿವರು, ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಮಗೆ ಪ್ರಾಣ ಬೆದರಿಕೆ ಇದೆ. ರಕ್ಷಣೆ ಕೊಡಿ ಎಂದು ಗೌರಿ ಅವರು ಪೊಲೀಸರನ್ನು ಕೇಳಿರಲಿಲ್ಲ. ಗೌರಿ ಲಂಕೇಶ್ ಅವರು ಅನೇಕ ಬಾರಿ ನನ್ನನ್ನು ಭೇಟಿಯಾಗಿದ್ದರು. ಆಗಲೂ ಜೀವ ಬೆದರಿಕೆಯ ಬಗ್ಗೆ ಏನನ್ನೂ ಹೇಳಿರಲಿಲ್ಲ ಎಂದು ಸಿಎಂ ವಿಷಾದ ವ್ಯಕ್ತಪಡಿಸಿದರು.