ಬೆಂಗಳೂರು: ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ನಡೆಯನ್ನು ಖಂಡಿಸಿ ನಾಳೆ(ಬುಧವಾರ) ರಾಜ್ಯಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕಳೆದ ನಾಲ್ಕು ದಿನಗಳ ಸುದೀರ್ಘ ವಿಚಾರಣೆಯ ಬಳಿಕವೂ ವಿಚಾರಣೆಗೆ ಡಿ.ಕೆ.ಶಿವಕುಮಾರ್ ಅವರು ಸ್ಪಂದಿಸುತ್ತಿಲ್ಲ ಎಂಬ ಕಾರಣ ನೀಡಿ ಬಂಧಿಸಿರುವ ಇಡಿ ಕ್ರಮಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಪಕ್ಷ ನಿರ್ಧರಿಸಿದೆ.
"ಆರ್ಥಿಕ ಮುಗ್ಗಟ್ಟಿನ ಸುದ್ದಿಯನ್ನು ಮರೆಮಾಚಲು ಡಿ.ಕೆ.ಶಿವಕುಮಾರ್ ಅಂತಹ ಕಾಂಗ್ರೆಸ್ ನ ಪ್ರಬಲ ನಾಯಕರ ಬಂಧನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯಿಂದ ಕಾಂಗ್ರೆಸ್ ಪಕ್ಷವು ಎಂದಿಗೂ ಧೃತಿಗೆಡುವುದಿಲ್ಲ. ಬದಲಿಗೆ ದ್ವೇಷ ರಾಜಕಾರಣದ ವಿರುದ್ಧ ನಮ್ಮ ಹೋರಾಟ ಇನ್ನು ತೀವ್ರಗೊಳ್ಳಲಿದೆ" ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಆರ್ಥಿಕ ಮುಗ್ಗಟ್ಟಿನ ಸುದ್ದಿಯನ್ನು ಮರೆಮಾಚಲು ಡಿ.ಕೆ.ಶಿವಕುಮಾರ್ ಅಂತಹ ಕಾಂಗ್ರೆಸ್ ನ ಪ್ರಬಲ ನಾಯಕರ ಬಂಧನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯಿಂದ ಕಾಂಗ್ರೆಸ್ ಪಕ್ಷವು ಎಂದಿಗೂ ಧೃತಿಗೆಡುವುದಿಲ್ಲ.
ಬದಲಿಗೆ ದ್ವೇಷ ರಾಜಕಾರಣದ ವಿರುದ್ಧ ನಮ್ಮ ಹೋರಾಟ ಇನ್ನು ತೀವ್ರಗೊಳ್ಳಲಿದೆ !#bjpvendettapolitics
— Karnataka Congress (@INCKarnataka) September 3, 2019
ಈಗಾಗಲೇ ಕೆಪಿಸಿಸಿಯಿಂದ ಎಲ್ಲಾ ಜಿಲ್ಲಾ ಘಟಕಗಳಿಗೆ ಪ್ರತಿಭಟನೆಗೆ ಸಂಬಂಧಿಸಿದಂತೆ ಆದೇಶ ರವಾನೆಯಾಗಿದ್ದು, ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಜಾರಿ ನಿರ್ದೇಶನಾಲಯದ ಕ್ರಮ ಹಾಗೂ ಬಿಜೆಪಿಯ ದ್ವೇಷದ ರಾಜಕೀಯವನ್ನು ಖಂಡಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.