ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಬೆಂಗಳೂರಿನ ಜಯನಗರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮತಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ 54,457 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ್ ಬಾಬು ವಿರುದ್ಧ 2,889 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು 51,568 ಮತಗಳನ್ನು ಗಳಿಸಿದರೆ, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,861 ಮತಗಳನ್ನು ಗಳಿಸಿದ್ದಾರೆ. ಅಲ್ಲದೆ, 848 ನೋಟಾ ಮತಗಳು ಚಲಾವಣೆಯಾಗಿವೆ.
ನಗರದ ಎಸ್.ಎಸ್.ಎಂ.ಆರ್.ವಿ.ಕಾಲೇಜಿನಲ್ಲಿ ಒಟ್ಟು 16 ಸುತ್ತಿನಲ್ಲಿ ಮತ ಎಣಿಕೆ ನಡೆಯಿತು. ಸೌಮ್ಯಾರೆಡ್ಡಿ ಗೆಲುವು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದ್ದು, ಪಟಾಕಿ ಸಿಡಿಸುವುದರ ಮೂಲಕ ಜಯವನ್ನು ಸಂಭ್ರಮಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆಯಿತಾದರೂ, ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್. ವಿಜಯಕುಮಾರ್ ನಿಧನದ ಹಿನ್ನೆಲೆಯಲ್ಲಿ ಮೇ 12ರಂದು ನಡೆಯಬೇಕಿದ್ದ ಚುನಾವಣೆಯು ಜೂ. 11ಕ್ಕೆ ಮುಂದೂಡಲ್ಪಟ್ಟಿತ್ತು. ಬಿಜೆಪಿಯು ಬಿ.ಎನ್.ವಿಜಯಕುಮಾರ್ ಅವರ ಸಹೋದರ ಬಿ.ಎನ್.ಪ್ರಹ್ಲಾದ್ ಬಾಬು ಅವರನ್ನೇ ಕಣಕ್ಕಿಳಿಸಿತ್ತು. ಕಾಂಗ್ರೆಸ್‌ನಿಂದ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಅಖಾಡದಲ್ಲಿದ್ದರು. ಅಂತಿಮ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರು ವರಿಷ್ಠರ ಸೂಚನೆಯಂತೆ ಕಣದಿಂದ ಹಿಂದೆ ಸರಿದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಹೀಗಾಗಿ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಂತೆ ಕಂಡರೂ ವಾಸ್ತವದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆಯೇ ತೀವ್ರ ಹಣಾಹಣಿ ಏರ್ಪಟ್ಟಿತ್ತು.