ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ತಯಾರಿಸಿರುವ ಅಭ್ಯರ್ಥಿಗಳ ಪಟ್ಟಿ ಕೇಂದ್ರ ಚುನಾವಣೆ ಸಮಿತಿ ಕೈ ಸೇರಿದ್ದು, ದೆಹಲಿಯಲ್ಲಿ ಇಂದು(ಏ. 13) ನಡೆಯಲಿರುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರಿಗೆ ಅಂತಿಮ ಮುದ್ರೆ ಬೀಳಲಿದೆ. ಇಂದೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮೊದಲ ಹಂತದ ಈ ಪಟ್ಟಿಯಲ್ಲಿ ಹಾಲಿ ಶಾಸಕರು, ಬೇರೆ ಪಕ್ಷದಿಂದ ಬಂದವರು ಹಾಗೂ ಯಾವುದೇ ಗೊಂದಲ ಇಲ್ಲದಿರುವ ಕ್ಷೇತ್ರಗಳು ಸೇರಿದಂತೆ ಸುಮಾರು 150 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುವ ಲಕ್ಷಣಗಳಿವೆ.
ತೀವ್ರ ವಿರೋಧದ ನಡುವೆಯೂ ನಾಲ್ವರು ಮಕ್ಕಳಿಗೆ ಟಿಕೆಟ್
ಗೆಲುವೇ ಮಾನದಂಡ ಎಂದು ಮನವರಿಕೆ ಮಾಡಿಕೊಟ್ಟ ಸಿಎಂ ಸಿದ್ದರಾಮಯ್ಯ, ತೀವ್ರ ವಿರೋಧದ ನಡುವೆಯೂ ತಮ್ಮ ಆಪ್ತರ ಮಕ್ಕಳಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ, ಟಿ. ನರಸೀಪುರ ಕ್ಷೇತ್ರದಿಂದ ಹೆಚ್.ಸಿ ಮಹಾದೇವಪ್ಪ ಪುತ್ರ ಸುನೀಲ್ ಬೋಸ್, ಕೆಜಿಎಫ್ ಕ್ಷೇತ್ರದಿಂದ ಸಂಸದ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಹಾಗೂ ಜಯನಗರ ಕ್ಷೇತ್ರದಿಂದ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಲು ಕಾಂಗ್ರೆಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.