ಬೆಂಗಳೂರು: ಅನಾರೋಗ್ಯ ನಿಮಿತ್ತ ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಮಂಗಳವಾರ ರಾತ್ರಿ ದಾಖಲಾಗಿದ್ದ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದೆ ಮನೆಗೆ ತೆರಳಿದ್ದಾರೆ.
ಮಂಗಳವಾರ ಸಂಜೆ ಫುಡ್ ಪಾಯ್ಸನ್ ಹಾಗೂ ತೀವ್ರ ವಾಂತಿಯಿಂದ ತೀವ್ರ ಅಸ್ವಸ್ಥರಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಮನೆಯಲ್ಲೇ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ ಆರೋಗ್ಯದಲ್ಲಿ ಚೇತರಿಕೆಯಾಗದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಮಂಗಳವಾರ ರಾತ್ರಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ, ಇನ್ನೂ ಮೂರು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಉಳಿಯಲಿದ್ದಾರೆ ಎಂದು ವೈದ್ಯರು ಹೇಳಿದ್ದರು.
ಆದರೆ, ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು, ಈ ಕಾರಣದಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದೆಯೇ ಮನೆಗೆ ತೆರಳಿದ್ದಾರೆ. ಮೂಲಗಳ ಪ್ರಕಾರ, ಆರೋಗ್ಯದಲ್ಲಿ ಚೇತರಿಕೆಯಾಗದ ಕಾರಣ ಆಸ್ಪತ್ರೆಯಿಂದ ಡಿಕೆಶಿ ಡಿಸ್ಚಾರ್ಜ್ ಆಗಿಲ್ಲ, ಕೆಲ ಸಮಯದ ಅನುಮತಿ ಪಡೆದು ಸುದ್ದಿಗೋಷ್ಠಿ ನಡೆಸಲು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಸೆಪ್ಟೆಂಬರ್ 18ರಂದು ಜಾರಿ ನಿರ್ದೇಶನಾಲಯವು ಸಚಿವ ಡಿ.ಕೆ.ಶಿವಕುಮಾರ್ ಅವರ ದೆಹಲಿ ಫ್ಲ್ಯಾಟ್'ಗಳಲ್ಲಿ ಕೋಟ್ಯಂತರ ರೂ. ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಹವಾಲ ಹಣ ಸಾಗಣೆ, ತೆರಿಗೆ ವಂಚನೆ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಿತ್ತು. ಈ ಪ್ರಕರಣದಲ್ಲಿ ಡಿಕೆಶಿಯವರನ್ನು ಬಂಧಿಸುವ ಸಾಧ್ಯತೆಗಳೂ ಇವೆ ಎನ್ನಲಾಗಿತ್ತು. ಈ ಎಲ್ಲಾ ಕಾನೂನು ಬೆಳವಣಿಗೆಗಳ ಬೆನ್ನಲ್ಲೇ ಆರೋಗ್ಯದಲ್ಲಿ ಏರುಪೇರಾದ್ದರಿಂದ ಡಿ.ಕೆ.ಶಿವಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು.