ನವದೆಹಲಿ: ಅಕ್ರಮ ಆಸ್ತಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ರಕ್ತದೊತ್ತಡ, ಹೃದಯ ಸಂಬಂಧ ತೊಂದರೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಯ ಆರ್ಎಂಎಲ್ ಆಸ್ಪತ್ರೆಯಿಂದ ತಿಹಾರ್ ಜೈಲಿಗೆ ಕರೆದೊಯ್ಯಲಾಗಿದೆ.
ಡಿ.ಕೆ. ಶಿವಕುಮಾರ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಆದೇಶ ನೀಡಿದ್ದರು. ಆದರೆ ತೀವ್ರ ರಕ್ತದೊತ್ತಡ ಹಾಗೂ ಹೃದಯ ಬೇನೆಯಿಂದ ಬಳಲುತ್ತಿದ್ದ ಡಿಕೆಶಿ ಅವರನ್ನು ದೆಹಲಿಯ ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ವರದಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ತಿಹಾರ್ ಜೈಲಿಗೆ ಕರೆದೊಯ್ದಿದ್ದಾರೆ.
ಮಂಗಳವಾರದಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ತಿಹಾರ್ ಜೈಲು ಉಸ್ತುವಾರಿಯನ್ನೂ ಹೊಂದಿರುವ ದೆಹಲಿ ಪೊಲೀಸರ ಥರ್ಡ್ ಬಟಾಲಿಯನ್ ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದ ಕಡೆ ಗಮನ ಹರಿಸಬೇಕೆಂದು ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಸೂಚನೆ ನೀಡಿದ್ದರು. ಡಿ.ಕೆ. ಶಿವಕುಮಾರ್ ಅವರಿಗೆ ರಕ್ತದ ಒತ್ತಡ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಡಾ. ರಾಮಮನೋಹರ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಆರೋಗ್ಯ ತಪಾಸಣೆ ಬಳಿಕ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ವರದಿ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ ವಶದಲ್ಲಿ ವಿಚಾರಣೆಗೆ ಸರಿಯಾಗಿ ಸ್ಪಂದಿಸಿಲ್ಲ. ಎರಡನೇ ಬಾರಿ ವಶಕ್ಕೆ ಪಡೆದಾಗಲೂ ವಿಚಾರಣೆ ಸಾಧ್ಯವಾಗಿಲ್ಲ. ಡಿಕೆ ಶಿವಕುಮಾರ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಸರಿಯಾಗಿ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಹಾಗೂ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಬೇಕು ಎಂದು ಜಾರಿ ನಿರ್ದೇಶನಾಲಯದ ಪರವಾಗಿ ಕೆ.ಎಂ.ನಟರಾಜ್ ವಾದ ಮಂಡಿಸಿದ್ದರು.
ಇನ್ನು ಡಿಕೆಶಿ ವಿಚಾರಣೆಗೆ ಸ್ಪಂದಿಸುತ್ತಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸದೇ ಜಾಮೀನು ನೀಡಿ. ಅವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಯಾವಾಗ ವಿಚಾರಣೆಗೆ ಕರೆದರೂ ಲಭ್ಯವಿರುತ್ತಾರೆ. ಡಿಕೆಶಿ ಅವರ ಹೆಸರು ಹಾಳು ಕೆಡಿಸುವುದೇ ಇಡಿ ಉದ್ದೇಶ. ಇದ್ಯಾವುದಕ್ಕೂ ನ್ಯಾಯಾಲಯ ಆಸ್ಪದ ಕೊಡದೆ ಡಿಕೆಶಿ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಮಂಜೂರು ಮಾಡಬೇಕೆಂದು ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ ಮನವಿ ಮಾಡಿದ್ದರು.
ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಈ ಕುರಿತ ವಿಚಾರಣೆಯನ್ನು ಗುರುವಾರ ಮಧ್ಯಾಹ್ನಕ್ಕೆ ಮುಂದೂಡಿದ್ದು, ಡಿ.ಕೆ. ಶಿವಕುಮಾರ್ ಅವರಿಗೆ ಇಂದಾದರೂ ಜಾಮೀನು ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.