ಉಪ ಚುನಾವಣೆಗೆ ದಿನಾಂಕ‌ ಮರು ನಿಗದಿ: ಪಕ್ಷಗಳಿಗೆ ತಳಮಳ, ಅನರ್ಹರಿಗೆ ಆತಂಕ

ದಿಢೀರ್ ಎಂದು ಬಂದಿದ್ದ ಉಪ ಚುನಾವಣೆಯಿಂದ ಪ್ರಮುಖವಾಗಿ ಅನರ್ಹರು ಮತ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಪತರುಗುಟ್ಟಿ ಹೋಗಿದ್ದವು. ಚುನಾವಣೆಗೆ ಹುರಿಯಾಳುಗಳನ್ನು‌ ಅಣಿಗೊಳಿಸಲು ನಿರತವಾಗಿದ್ದವು. ಇದಾದ ಬಳಿಕ ಸೆಪ್ಟೆಂಬರ್‌ 26ರಂದು ಸುಪ್ರೀಂ ಕೋರ್ಟ್ ಉಪ ಚುನಾವಣೆಗೆ ತಡೆ ನೀಡಿ ಎಲ್ಲರಲ್ಲೂ ನಿರಾಳ ಉಂಟುಮಾಡಿತ್ತು‌.   

Last Updated : Sep 28, 2019, 12:41 PM IST
ಉಪ ಚುನಾವಣೆಗೆ ದಿನಾಂಕ‌ ಮರು ನಿಗದಿ: ಪಕ್ಷಗಳಿಗೆ ತಳಮಳ, ಅನರ್ಹರಿಗೆ ಆತಂಕ title=

ನವದೆಹಲಿ: ಸುಪ್ರೀಂ ಕೋರ್ಟ್ ತಡೆ ನೀಡಿದ್ದ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಶುಕ್ರವಾರ ರಾತ್ರಿ ಕೇಂದ್ರ ಚುನಾವಣಾ ಆಯೋಗ ಮರು ಉಪ ಚುನಾವಣೆ ಘೋಷಿಸಿರುವುದರಿಂದ ಕರ್ನಾಟಕದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. 

ದಿಢೀರ್ ಎಂದು ಬಂದಿದ್ದ ಉಪ ಚುನಾವಣೆಯಿಂದ ಪ್ರಮುಖವಾಗಿ ಅನರ್ಹರು ಮತ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಪತರುಗುಟ್ಟಿ ಹೋಗಿದ್ದವು. ಚುನಾವಣೆಗೆ ಹುರಿಯಾಳುಗಳನ್ನು‌ ಅಣಿಗೊಳಿಸಲು ನಿರತವಾಗಿದ್ದವು. ಇದಾದ ಬಳಿಕ ಸೆಪ್ಟೆಂಬರ್‌ 26ರಂದು ಸುಪ್ರೀಂ ಕೋರ್ಟ್ ಉಪ ಚುನಾವಣೆಗೆ ತಡೆ ನೀಡಿ ಎಲ್ಲರಲ್ಲೂ ನಿರಾಳ ಉಂಟುಮಾಡಿತ್ತು‌. ಆದರೀಗ ಕೇಂದ್ರ ಚುನಾವಣಾ ಆಯೋಗವು ಉಪ ಚುನಾವಣೆಯ ದಿನಾಂಕವನ್ನು ಮರು ನಿಗದಿ ಮಾಡಿರುವುದರಿಂದ ರಾಜ್ಯದ ಮೂರು ಪಕ್ಷಗಳಲ್ಲಿ ಮತ್ತೆ ತಳಮಳ ಶುರುವಾಗಿದೆ. ಅದಕ್ಕಿಂತ ಹೆಚ್ಚಾಗಿ ಅನರ್ಹ ಶಾಸಕರಿಗೆ ಮತ್ತೆ ಆತಂಕ ಶುರುವಾಗಿದೆ.

ತಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರ ಆದೇಶ ರದ್ದುಗೊಳಿಸಿಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿಕೊಂಡಿರುವ ಅನರ್ಹ ಶಾಸಕರಿಗೆ ಮುಂದಿನ‌ ತಿಂಗಳು ನಿರ್ಣಾಯಕವಾಗಿದೆ. ಇವರ ಅರ್ಜಿಯ‌ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 22ಕ್ಕೆ ಆರಂಭಿಸಲಿದೆ. ಇನ್ನೊಂದೆಡೆ‌ ನವೆಂಬರ್ 18ಕ್ಕೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಇದರಿಂದಾಗಿ ಅಕ್ಟೋಬರ್ 22ರಿಂದ ನವೆಂಬರ್ 18ರೊಳಗೆ ಅನರ್ಹರ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಬೇಕು. ಆದರೆ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಹಲವು ರೀತಿಯ ಸಂವಿಧಾನಿಕ ಅಂಶಗಳು ಅಡಕವಾಗಿರುವುದರಿಂದ ಹೆಚ್ಚಿನ ವಿಚಾರಣೆ ಅಗತ್ಯ ಎಂದು ಹೇಳಿದೆ. ಈ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆಂದು ಪ್ರಕರಣದ ಪ್ರತಿವಾದಿ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಈ ಎಲ್ಲಾ ಸಂಗತಿಗಳು ಅನರ್ಹರ ಪಾಲಿಗೆ ಆತಂಕದ ವಿಷಯಗಳೇ ಆಗಿವೆ.

ಚುನಾವಣಾ ಆಯೋಗದ ನೂತನ ಪ್ರಕರಣೆಯ ಪ್ರಕಾರ ನವೆಂಬರ್ 11ರಂದು ನಾಮಪತ್ರ ಸಲ್ಲಿಕೆ ಆರಂಭ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನವೆಂಬರ್ 19ರಂದು ನಾಮಪತ್ರ ಪರಿಶೀಲನೆ. ನವೆಂಬರ್ 21ಕ್ಕೆ ನಾಮಪತ್ರ ಹಿಂಪಡೆಯಲು ಕೊನೆ ದಿನ. ಡಿಸೆಂಬರ್ 5ರಂದು ಮತದಾನ. ಡಿಸೆಂಬರ್‌ 11ಕ್ಕೆ ಇಡೀ ಚುನಾವಣಾ ಪ್ರಕ್ರಿಯೆ ಮುಗಿಯಬೇಕು. ಮತದಾನ ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ‌. ವಿಶೇಷ ಅಂದರೆ ಚುನಾವಣಾ ಆಯೋಗವು ಫಲಿತಾಂಶದ ದಿನಾಂಕವನ್ನು ಮಾತ್ರ ಅಧಿಕೃತವಾಗಿ ಪ್ರಕಟಿಸಿಲ್ಲ. ಅದು ಡಿಸೆಂಬರ್ 9ರಂದು ಎಂದು ತಿಳಿದುಬಂದಿದೆಯಷ್ಟೇ.
 

Trending News