ನವದೆಹಲಿ: ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಕಗ್ಗಂಟಾಗಿ ಉಳಿದಿರುವ ಮಹಾದಾಯಿ ನದಿ ನೀರಿನ ವಿಚಾರವಾಗಿ ಮಹಾದಾಯಿ ನ್ಯಾಯಾಧಿಕರಣ ಇಂದಿನಿಂದ ಅಂತಿಮ ಹಂತದ ವಿಚಾರಣೆ ಕೈಗೊಳ್ಳಲಿದೆ .ಇಂದು ಆರಂಭವಾಗುವ ಅಂತಿಮ ಹಂತದ ವಿಚಾರಣೆಯಲ್ಲಿ ಮೊದಲಿಗೆ ಗೋವಾ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.
ಇಂದು ಮಹಾದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸಬೇಕಾಗಿದ್ದ ಹಿರಿಯ ವಕೀಲ ಪಾಲಿ ನಾರಿಮನ್ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಗೈರು ಹಾಜರಾಗಲಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಅಶೋಕ ದೇಸಾಯಿಯವರು ರಾಜ್ಯದ ಪರವಾಗಿ ವಾದ ಮಂಡಿಸಲಿದ್ದಾರೆ ಎನ್ನಲಾಗಿದೆ. ಇಂದಿರಾ ಜೈಸಿಂಗ್ ರೈತರ ಸಮಸ್ಯೆಯ ಕುರಿತು ವಾದ ಮಾಡಿದರೆ, ಅಶೋಕ ದೇಸಾಯಿಯವರು ನೀರಿನ ಹಂಚಿಕೆಯ ಕುರಿತಾಗಿ ವಾದ ಮಂಡಿಸಲಿದ್ದಾರೆ.
ಈಗಾಗಲೇ ಸುದೀರ್ಘ 97 ದಿನಗಳ ಕಾಲ ವಿಚಾರಣೆಯನ್ನು ನಡೆಸಲಾಗಿದೆ.ಅದರಲ್ಲಿ 50 ದಿನಗಳು ಸಾಕ್ಷಿ ವಿಚಾರಣೆಗೆ ಮೀಸಲಿಡಲಾಗಿತ್ತು. ಈ ವಿಚಾರಣೆಯಲ್ಲಿ ಕರ್ನಾಟಕದಿಂದ 4 ಗೋವಾದಿಂದ 5 ಪರಿಣಿತರ ಸಾಕ್ಷಿಯನ್ನು ನ್ಯಾಯಾಧಿಕರಣ ಈಗಾಗಲೇ ಪಡೆದಿದೆ. ಒಟ್ಟು ಎರಡು ತಿಂಗಳು ಈ ಅಂತಿಮ ಹಂತದ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಅಗಷ್ಟ 20 ರಂದು ನ್ಯಾಯಾಧಿಕರಣಕ್ಕೆ ಐದು ವರ್ಷಗಳು ತುಂಬಲಿರುವುದರಿಂದ ಈ ಅಂತಿಮ ಹಂತದ ವಿಚಾರಣೆಯ ತೀರ್ಪನ್ನು ಅಷ್ಟರೊಳಗಾಗಿ ನೀಡಬೇಕಾದ ಅನಿವಾರ್ಯತೆ ನ್ಯಾಯಾಧಿಕರಣದ ಮುಂದಿದೆ.