ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸುವಂತೆ ತಾಕೀತು ಮಾಡಿರುವ ಹೈಕೋರ್ಟ್, ಸೆಪ್ಟೆಂಬರ್ 24ರೊಳಗೆ ಗುಂಡಿ ಮುಕ್ತ ನಗರಗೊಳಿಸಲು ಗುರುವಾರ ಆದೇಶ ನೀಡಿದೆ.
ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ಬಿಬಿಎಂಪಿಗೆ ರಸ್ತೆಗಳಲ್ಲಿ ಬಿದ್ದಿರುವ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಬುಧವಾರ ತಾಕೀತು ಮಾಡಿದ್ದರು. ಈ ಕುರಿತಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದ ಬಿಬಿಎಂಪಿ ನಗರದ 8 ಪ್ರದೇಶಗಳಲ್ಲಿ 898 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ 2,172 ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.
ಇಂದು ಮುಂದುವರೆದ ವಿಚಾರಣೆಯಲ್ಲಿ ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಪೀಠ ಸೆ.24ರೊಳಗಾಗಿ ನಗರವನ್ನು ಗುಂಡಿ ಮುಕ್ತ ನಗರವಾಗಿಸುವಂತೆ ಬಿಬಿಎಂಪಿಗೆ ಆದೇಶ ನೀಡಿದ್ದಾರೆ.