ಉತ್ತರ ಕನ್ನಡ ಜಿಲ್ಲೆ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿಂದು ಗುರುವಾರ ಕಾಳಿ ನದಿಯಿಂದ 46 ಕೆರೆಗಳು ಹಾಗೂ 19 ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ವಿವಿಧ 94 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಮುನ್ನಡೆದಿದೆ ಎಂದು ರಾಜ್ಯದ ಅಭಿವೃದ್ಧಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ @siddaramaiah ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದರು. pic.twitter.com/RONKjz0clK
— CM of Karnataka (@CMofKarnataka) December 7, 2017
ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದಷ್ಟು ಪ್ರಗತಿ ಕಾರ್ಯಗಳು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆಗಿವೆ. ಅಭಿವೃದ್ಧಿಯ ಪರ್ವ ಮುನ್ನಡೆದಿದೆ. ನಮ್ಮ ಕೆಲಸಗಳನ್ನು ಜನರು ಗುರುತಿಸುತ್ತಿದ್ದಾರೆ. ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿರುವ ಕರ್ನಾಟಕವನ್ನು ಇಡೀ ದೇಶಕ್ಕೆ ಮಾದರಿಯಾಗುವಂತೆ ರೂಪಿಸುವ ಕಾರ್ಯಕ್ಕೆ ಜನತೆಯ ಆಶೀರ್ವಾದ ಸದಾಕಾಲ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ವಿವಿಧ 6 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ದಿನಗಳ ಅವಧಿಯಲ್ಲಿ 3500 ಕೋಟಿ ರೂಪಾಯಿ ಮೊತ್ತದ ವಿವಿಧ 543 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡ ಉದಾಹರಣೆಗಳು ಇತಿಹಾಸದಲ್ಲಿಯೇ ಇಲ್ಲ ಇದು ದಾಖಲೆಯಾಗಿದೆ ಎಂದು ವಿವರಿಸಿದ ಸಿಎಂ, ಹಳಿಯಾಳ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಆರ್.ವಿ.ದೇಶಪಾಂಡೆ, ಸದಾ ಅಭಿವೃದ್ಧಿಪರ ಚಿಂತನೆ ಮಾಡುವ ಅಪರೂಪದ ರಾಜಕಾರಣಿಯಾಗಿದ್ದಾರೆ. ಹಿಡಿದ ಕೆಲಸವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವ ಛಲ ಅವರಲ್ಲಿದೆ. ಅವರ ಕೊಡುಗೆ ಹಳಿಯಾಳ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯಕ್ಕೆ ಅವರ ಮಹತ್ವದ ಸೇವೆ ದೊರಕಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಬಗ್ಗೆ ಉತ್ತಮ ಮಾತುಗಳನ್ನು ಆಡಿದರು.
ಬಂಡವಾಳ ಹೂಡಿಕೆಯಲ್ಲಿ 11 ನೇ ಸ್ಥಾನದಲ್ಲಿದ್ದ ಕರ್ನಾಟಕ ಸಚಿವ ದೇಶಪಾಂಡೆ ಅವರ ಪ್ರಯತ್ನದಿಂದಾಗಿಯೇ ಇಂದು ಮೊದಲ ಸ್ಥಾನಕ್ಕೇರಿದೆ. ಕೈಗಾರಿಕಾ ರಂಗದಲ್ಲಿ 14 ಲಕ್ಷಕ್ಕೂ ಅಧಿಕ ಉದ್ಯೋಗ ಸೃಜನೆ ಮಾಡಿದ್ದಾರೆ. ಹಳಿಯಾಳ ಪಟ್ಟಣದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ನೋಡಿದರೆ, ಮುಖ್ಯಮಂತ್ರಿಯಾಗಿರುವ ನನಗೂ ಸಹ ನನ್ನ ಕ್ಷೇತ್ರದಲ್ಲಿ ಇಷ್ಟು ಕೆಲಸಗಳನ್ನು ಮಾಡಲಾಗಿಲ್ಲವಲ್ಲ ಎಂದು ಆಶ್ಚರ್ಯವಾಗುತ್ತಿದೆ ಎಂದು ದೇಶಪಾಂಡೆ ಅವರ ಶ್ರಮದ ಬಗ್ಗೆ ಸಿದ್ದರಾಮಯ್ಯ ಶ್ಲಾಘಿಸಿದರು.
ಕಾಳಿ ನದಿಯಿಂದ ನೀರಾವರಿ ಸೌಲಭ್ಯ ಪಡೆಯುವ ಕಾರ್ಯ ಅನುಷ್ಠಾನಗೊಳಿಸಿದ್ದು ಸಾಮಾನ್ಯ ಸಾಧನೆಯಲ್ಲ. ಬರುವ ದಿನಗಳಲ್ಲಿ 15 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ತಾಲ್ಲೂಕು ಪುನರ್ವಿಂಗಡಣೆ ಕುರಿತು ರಚಿಸಲಾಗಿದ್ದ ಯಾವ ಸಮಿತಿಯೂ ಸಹ ಶಿಫಾರಸ್ಸು ಮಾಡಿರದ ದಾಂಡೇಲಿ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿಸುವಲ್ಲಿ ಅವರು ಶ್ರಮಿಸಿದ್ದಾರೆ. 24*7 ಕುಡಿಯುವ ನೀರು ಪೂರೈಕೆ ಸೌಲಭ್ಯ ಪಡೆದಿರುವ ರಾಜ್ಯದ ಏಕೈಕ ಪುರಸಭೆ ಎಂಬ ಹಿರಿಮೆಗೆ ಇಂದು ಹಳಿಯಾಳ ಪಾತ್ರವಾಗಿದೆ.
ಅನೇಕ ವೃತ್ತಿಪರ ಕಾಲೇಜುಗಳು, ಶೈಕ್ಷಣಿಕ ಸೌಲಭ್ಯಗಳಿಂದಾಗಿ ಈ ತಾಲ್ಲೂಕು ಅಭಿವೃದ್ಧಿಯಲ್ಲಿ ಸಾಕಷ್ಟು ಮುಂದೆ ಸಾಗಿದೆ ಎಂದು ಮುಕ್ತ ಕಂಠದಿಂದ ಶ್ಲಾಘನೆ ಮಾಡಿದರು.
ಈ ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಹಾಗೂ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ರಾಜಕೀಯ ಮನೋಭಾವದವರಿಗೆ ಬೆಲೆ ಸಿಗುವಂತಾಗಬೇಕು. ರಾಜಕಾರಣದಲ್ಲಿ ಧರ್ಮ ಇರಬೇಕು ಆದರೆ ಅಧಿಕಾರ, ಸ್ವಾರ್ಥಕ್ಕೋಸ್ಕರ ಅದರ ದುರ್ಬಳಕೆಯಾಗಬಾರದು. ಹಸಿವು, ಗುಡಿಸಲು, ಭ್ರಷ್ಟಾಚಾರ ಹಾಗೂ ಅಪೌಷ್ಟಿಕತೆ ಮುಕ್ತ ನಾಡು ಕಟ್ಟುವದು ನಮ್ಮ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ನುಡಿದಂತೆ ನಡೆದು ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಸರ್ಕಾರ ಅಳವಡಿಸಿಕೊಂಡು ,ಅನುಷ್ಠಾನಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.