ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಅಸಮಾಧಾನಿತ ಶಾಸಕರನ್ನು ಸಮಾಧಾನಗೊಳಿಸಲು ಸಿಎಂ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು ಜೂನ್ 12ರಂದು ಬೆಳಿಗ್ಗೆ 11.30ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಬೆಳಿಗ್ಗೆಯೇ ರಾಜ್ಯಪಾಲರನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ ಅವರುಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ್ದರು. ಇದಕ್ಕೆ ಸಮ್ಮತಿಸಿದ ರಾಜ್ಯಪಾಲರು ಜೂನ್ 12 ರಂದು ಬೆಳಿಗ್ಗೆ 11.30ಕ್ಕೆ ಸಮಯ ನಿಗದಿ ಮಾಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಗೌರವಾನ್ವಿತ ರಾಜ್ಯಪಾಲರನ್ನು ಇಂದು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ.
ಅವರು ಪ್ರಮಾಣ ವಚನ ಬೋಧನೆಗೆ ಬುಧವಾರ ಜೂನ್ 12ರಂದು ಬೆಳಿಗ್ಗೆ 11.30 ಕ್ಕೆ ಸಮಯ ನಿಗದಿ ಪಡಿಸಿದ್ದಾರೆ.
— CM of Karnataka (@CMofKarnataka) June 8, 2019
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳಲ್ಲಿ ತಲಾ ಒಬ್ಬೊಬ್ಬ ಪಕ್ಷೇತರ ಶಾಸಕರು ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರಿಗೆ ಕಾಂಗ್ರೆಸ್ ಕೋಟಾದಡಿ ಹಾಗೂ ಮುಳಬಾಗಿಲು ಶಾಸಕ ನಾಗೇಶ್ ಅವರಿಗೆ ಜೆಡಿಎಸ್ ಕೋಟಾದಡಿ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಮತ್ತೊಂದು ಸ್ಥಾನ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.