ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಮಳೆ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಹೇಳಲಾಗಿದೆ.
ನಾಳೆ ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಆಗಸ್ಟ್ 29ಕ್ಕೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 30ರಂದು ಸಹ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳುವ ಯಕಶ್ಚಿತ್ ರಾಜಕಾರಣಿ: ಸಿದ್ದರಾಮಯ್ಯ
ವರುಣನ ಅಬ್ಬರಕ್ಕೆ ಸಿಲಿಕಾನ್ ಸಿಟಿ ತತ್ತರ..!
ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯ ಹೊಡೆತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿ ಹೋಗಿದೆ. ಶಾಂತಿನಗರ, ವಿಲ್ಸನ್ ಗಾರ್ಡನ್ ಮತ್ತು ಜೆಸಿ ರೋಡ್ ಬಳಿ ರಸ್ತೆ ಮೇಲೆ ಮಳೆ ನೀರು ನಿಂತು ದೊಡ್ಡ ಅವಾಂತರವೇ ಸೃಷ್ಟಿಯಾಗಿತ್ತು. ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಬೇಕಾಯಿತು. ಬಿಟಿಎಂ ಲೇಔಟ್ನ ಬಿಳೇಕಹಳ್ಳಿ ವಾರ್ಡ್ನ ಅನುಗ್ರಹ ಬಡವಾಣೆಯ ಮೊದಲನೇ ಹಂತದ 2 ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.
1 ಗಂಟೆ ಸತತವಾಗಿ ಮಳೆ ಸುರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತಿದೆ. ಚರಂಡಿಯಲ್ಲಿ ನೀರು ಸಮರ್ಪಕವಾಗಿ ಹರಿದು ಹೋಗದೆ ಇರುವುದರಿಂದ ರಸ್ತೆ ಮೇಲೆ ನೀರು ನಿಂತಿದೆ. ಮಳೆ ಬಿರುಸಾದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಪಂಪ್ ಮೂಲಕ ರಸ್ತೆಯ ಮೇಲೆ ನಿಂತಿರುವ ನೀರನ್ನು ಚರಂಡಿಗೆ ಬಿಟ್ಟಿದ್ದಾರೆ. ಮಳೆ ಜೋರಾದ ಕೂಡಲೆ ಬಿಬಿಎಂಪಿ ಕಂಟ್ರೋಲ್ ರೂಮ್ಗೆ ಸ್ಥಳೀಯರು ಕರೆ ಮಾಡಿ ವಿಷಯ ತಿಳಿಸಿದ್ದರು.
ಇದನ್ನೂ ಓದಿ: ಅಧಿಕೃತವಾಗಿ ಲೋಕಾಯುಕ್ತ ಕಾರ್ಯಾರಂಭ: ದೂರು ಸ್ವೀಕರಿಸಿ ತನಿಖೆ ನಡೆಸಲು ಆದೇಶ!
ಬೆಂಗಳೂರಿನಲ್ಲಿ ಒಂದು ದಿನ ಮಳೆ, ಮತ್ತೊಂದು ದಿನ ಮೋಡ, ಇನ್ನೊಂದು ದಿನ ಬಿಸಿಲು ಹೀಗೆ ಹವಾಮಾನ ಬದಲಾವಣೆ ಹಿನ್ನೆಲೆ ಹಲವರ ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದ ರಾಜಧಾನಿಯಲ್ಲಿ ವೈರಲ್ ಜ್ವರ ಹೆಚ್ಚಾಗಿದೆ. ಕೆಮ್ಮು, ಜ್ವರ, ಶೀತ, ತಲೆನೋವು ಹೀಗೆ ಜನರು ನಾನಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ವೈರಲ್ ಜ್ವರದ ಜೊತೆಗೆ ಹೆಚ್1ಎನ್1, ಡೆಂಗ್ಯೂ ಅನಾರೋಗ್ಯ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಈ ವರ್ಷ 1 ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರನ್ನು ಗುರುತಿಸಿ ಪರೀಕ್ಷೆ ನಡೆಸಲಾಗಿದೆ. ಕಳೆದ 20 ದಿನದಲ್ಲಿ 914 ಪ್ರಕರಣ ಪತ್ತೆಯಾಗಿದ್ದು, ಒಟ್ಟು ಡೆಂಗ್ಯೂ ಪ್ರಕರಣ ಈ ವರ್ಷ 5,138ಕ್ಕೆ ಏರಿಕೆಯಾಗಿದೆ. ಕಳೆದ ವರ್ಷವೂ 7,189 ಪ್ರಕರಣಗಳು ಪತ್ತೆಯಾಗಿದ್ದವು. ಹವಾಮಾನ ಬದಲಾವಣೆಯಿಂದ ಚಿಕೂನ್ ಗುನ್ಯಾ ಹಾಗೂ ಡೆಂಗ್ಯೂ ಹೆಚ್ಚಳವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.