ಬೆಂಗಳೂರು : ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಬೆಂಗಳೂರು ಹೈಕೋರ್ಟ್ ಮುಂದೆ ನಡೆಸುತ್ತಿದ್ದ ಸರಣಿ ಉಪವಾಸ ಸತ್ಯಾಗ್ರಹವನ್ನು ವಕೀಲರು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಒಪ್ಪಿಗೆ ಸಿಕ್ಕಿದ ಹಿನ್ನೆಲೆಯಲ್ಲಿ ಕಳೆದ ಮೂರೂ ದಿನಗಳಿಂದ ಬೆಂಗಳೂರು ವಕೀಲರ ಸಂಘ, ಬಾರ್ ಕೌನ್ಸಿಲ್ ಹಾಗೂ ಹಿರಿಯ ವಕೀಲರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಹೈಕೋರ್ಟ್ ನಲ್ಲಿ ಖಾಲಿ ಇರುವ 47 ನ್ಯಾಯಮೂರ್ತಿಗಳ ಸ್ಥಾನಗಳನ್ನು ಕೂಡಲೇ ಭರ್ತಿಮಾಡಬೇಕು ಎಂದು ಒತ್ತಾಯಿಸಿ ಫೆ.5ರಿಂದ ಉಪವಾಸ ಸತ್ಯಾಗ್ರಹವನ್ನು ವಕೀಲರು ಆರಂಭಿಸಿದ್ದರು.
ವಕೀಲರ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ, ಈ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರೂ ಸಹ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ ಇಂದು ತಮ್ಮ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ.