ಬೆಂಗಳೂರು: ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಕೂಡ ರಾಜಕಾರಣಿಗಳಿಗೆ ಅತಿ ಮುಖ್ಯವಾಗಿವೆ. ಲಕ್ಷಾಂತರ ಜನರನ್ನು ಸುಲಭವಾಗಿ ತಲುಪಬಹುದಾದ ವಿಧಾನವು ಕೂಡ ಇದಾಗಿದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಬೆಳಗಾವಿ ಗ್ರಾಮೀಣ ಶಾಸಕಿ ಹಾಗೂ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಈಗ ಫೇಸ್ ಬುಕ್ ಫಾಲೋವರ್ಸ್ ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.
ಈಗ ಎರಡು ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ ಸಂತಸವನ್ನು ಹಂಚಿಕೊಂಡಿರುವ ಲಕ್ಷ್ಮಿ ಹೆಬ್ಬಾಳಕರ್ "ಫೇಸ್ಬುಕ್ ಪುಟದ ಎಲ್ಲ ಆತ್ಮೀಯರಿಗೆ ಧನ್ಯವಾದಗಳು.. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಮಹತ್ತರವಾದದ್ದು" ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಈಗ ಅತಿ ಹೆಚ್ಚು ಫೇಸ್ ಬುಕ್ ಫಾಲೋವರ್ಸ್ ಗಳನ್ನು ಹೊಂದಿರುವ ಕರ್ನಾಟಕದ ಮಹಿಳಾ ರಾಜಕಾರಣಿ ಎನ್ನುವ ಶ್ರೇಯಕ್ಕೆ ಲಕ್ಷ್ಮಿ ಹೆಬ್ಬಾಳಕರ್ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು ಅಗ್ರಸ್ಥಾನದಲ್ಲಿದ್ದ ಬಿಜೆಪಿ ಶೋಭಾ ಕರಂದ್ಲಾಜೆ ಈಗ 1.83 ಲಕ್ಷ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನೊಂದೆಡೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ 1.72 ಲಕ್ಷ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.