ಬೆಂಗಳೂರು : ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ, ಧಾರ್ಮಿಕ ಅಲ್ಪಸಂಖ್ಯಾತರನ್ನಾಗಿ ಪರಿಗಣಿಸುವಂತೆ ಡಿ.30ರ ಒಳಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಲಿಂಗಾಯತ ಧರ್ಮ ಮಹಾಸಭಾ ಗಡುವು ನೀಡಿದೆ.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ 22ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಸಂಬಂಧ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿಯೂ ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂಧರ್ಭದಲ್ಲಿ ಮಾತನಾಡಿದ ಮಹಾಸಭಾ ಸಂಸ್ಥಾಪಕಿ ಮಾತೆ ಮಹಾದೇವಿ, ರಾಜ್ಯದಲ್ಲಿ ಚುನಾವಣೆ ದಿನಾಂಕ ನಿಗದಿಯಾಗಿ ನೀತಿ ಸಂಹಿತೆ ಜಾರಿಯಾಗುವ ಮುನ್ನ ಅಥವಾ ಡಿ.30ರ ಒಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.
ಲಿಂಗಾಯತ ಹಾಗೂ ವೀರಶೈವ ಎರಡೂ ಬೇರೆ ಬೇರೆಯಾಗಿದ್ದು, ಮೈಸೂರು ಮತ್ತು ಮದ್ರಾಸ್ ಪ್ರಾಂತ್ಯಗಳಿದ್ದ ಸಂದರ್ಭದಲ್ಲಿ ಮಾಡಿರುವ ಗೆಜೆಟ್ಗಳಲ್ಲಿ ಲಿಂಗಾಯತ ಒಂದು ಧರ್ಮವಾಗಿದೆ. ವೀರಶೈವ ಅದರ ಒಂದು ಉಪಜಾತಿ ಎಂದು ಹೇಳಲಾಗಿದೆ. ಲಿಂಗಾಯತ ಎಂಬುದು ಹಿಂದೂ ಧರ್ಮದ ಭಾಗವಾಗದೆ ಪ್ರತ್ಯೇಕ ಧರ್ಮವಾಗಿದ್ದು, ಲಿಂಗಾಯತ ಧರ್ಮದಲ್ಲಿನ ಆಚರಣೆಗಳು ಹಿಂದೂ ಧರ್ಮದಲ್ಲಿ ಇಲ್ಲ. ಲಿಂಗಾಯತ ಧರ್ಮವು ತನ್ನದೇ ಆದ ಸಿದ್ಧಾಂತ, ಸಂಪ್ರದಾಯ, ಆಚರಣೆಗಳನ್ನು ಹೊಂದಿದೆ ಎಂದು ತಿಳಿಸಿದರು.
ದೆಹಲಿಯಲ್ಲಿ ರ್ಯಾಲಿ :
ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಕೂಡಲೇ ದೆಹಲಿಯಲ್ಲಿ ಬೃಹತ್ ರ್ಯಾಲಿ ನಡೆಸಲಾಗುವುದು. ಈ ಮೂಲಕ ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಲಾಗುವುದು. ಜತೆಗೆ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಸರ್ಕಾರ ಹಣ ನೀಡುತ್ತಿದೆ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದು, ಜನರಿಂದ ದೇಣಿಗೆ ರೂಪದಲ್ಲಿ ಪಡೆದ ಹಣವನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಶತಾಯುಷಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಸಚಿವರಾದ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ವಿನಯ್ ಕುಲಕರ್ಣಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್, ನಟ ಚೇತನ್, ಹಿಂದುಳಿದ ವರ್ಗಗಳ ಆರೋಗ್ಯ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಹಾಸಭೆಯ ನಿರ್ಣಯಗಳು
- ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ.
- ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ಮಾನ.
- ರಾಜ್ಯದಲ್ಲಿ ಬಸವಣ್ಣ ಸಾಂಸ್ಕೃತಿಕ ನಾಯಕನಾಗಬೇಕು.
- ಕಲಬುರಗಿ ವಿವಿಗೆ ಬಸವೇಶ್ವರರ ಹೆಸರು.
- ಜಾತಿ ಪ್ರಮಾಣ ಪತ್ರದಲ್ಲಿ ವೀರಶೈವ-ಲಿಂಗಾಯತ ಪದ ಬಳಕೆ ರದ್ದು.