ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ನಾನಾ ಯೋಜನೆಗಳ ಅಡಿ ನೀಡುತ್ತಿರುವ ಪಡಿತರವನ್ನು ಮಾರಾಟ ಮಾಡಲು ಮುಂದಾದವರ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸಿರುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ (K Gopalaiah) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಕೆ. ಗೋಪಾಲಯ್ಯ, ಸಾಕಷ್ಟು ಮಂದಿ ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರು ಬಂದಿದೆ. ನಾವು ನೀಡುತ್ತಿರುವ ಅಕ್ಕಿಯನ್ನು ಕೆಜಿಗೆ 12ರಿಂದ 15 ರೂಪಾಯಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಬಡವರಿಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಪಡಿತರ ಒದಗಿಸುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ಇದಕ್ಕೆ ಸಂಬಂಧಿಸಿ ಕಾನೂನು ತರಲು ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಜತೆ ಕೂಡ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ನಿಮಗೆ ಪಡಿತರ (Ration) ಹೆಚ್ಚಾದರೆ ಅದನ್ನು ಅಂಗಡಿಯಲ್ಲೇ ಬಿಡಿ. ಬಡವರಿಗೆ ಅನುಕೂಲ ಆಗುತ್ತದೆ. ಅದನ್ನು ಬಿಟ್ಟು ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಇಂಥವರ ಪಡಿತರ ರದ್ದು ಮಾಡಲೂ ಸಹ ಕಾನೂನನಿನಲ್ಲಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.
ಮೇಲ್ನೋಟಕ್ಕೆ ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗೆ ನೋಟಿಸ್ ನೀಡಿದ್ದೇವೆ. 33 ಲೈಸೆನ್ಸ್ ಗಳನ್ನು ರದ್ದು ಮಾಡಿದ್ದೇವೆ. ಗುಲ್ಬರ್ಗ, ಮೈಸೂರು ಮತ್ತು ದಾವಣಗೆರೆಗಳ ಖಾಸಗಿ ಗೋದಾಮುಗಳ ಮೇಲೆ ನಮ್ಮ ಅಧಿಕಾರಿಗಳು ನಡೆಸಿ ಸಾವಿರಾರು ಕ್ಚಿಂಟಾಲ್ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಇದು ನಮ್ಮ ಸರಕಾರದ ಅಕ್ಕಿಯಾ ಇಥವಾ ಬೇರೆ ರಾಜ್ಯದ ಅಕ್ಕಿಯಾ? ಎಂದು ತನಿಖೆ ನಡೆಸಿ ವರದಿ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಪಡಿತರವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ಎಷ್ಟೇ ಪ್ರಭಾವಿ ಇದ್ದರೂ ಅವರನ್ನು ಕ್ಷಮಿಸುವುದಿಲ್ಲ ಎಂದು ಗೋಪಾಲಯ್ಯ ಹೇಳಿದ್ದಾರೆ.