ಉಡುಪಿ: ನನಗೆ ಮಗಳಿರುವುದು ಸಾಬೀತುಪಡಿಸಿದರೆ ಪೀಠ ತ್ಯಾಗಕ್ಕೂ ಸಿದ್ಧ ಎಂದು ಪೇಜಾವರ ಸ್ವಾಮೀಜಿ ಬಹಿರಂಗ ಸವಾಲು ಹಾಕಿದ್ದಾರೆ.
ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಸಾವಿಗೂ ಕೆಲ ದಿನಗಳ ಮುನ್ನ ಆಡಿದ್ದ ಮಾತುಗಳ ಆಡಿಯೋ ಇತ್ತೀಚೆಗೆ ಮಾದ್ಯಮಗಳಿಗೆ ಬಿಡುಗಡೆಯಾಗಿತ್ತು. ಆ ಆಡಿಯೋದಲ್ಲಿ ಶಿರೂರು ಶ್ರೀಗಳು ಪೇಜಾವರ ಸ್ವಾಮಿಜಿಗಳ ಬಗ್ಗೆಯೂ ಮಾತನಾಡಿದ್ದರು. ಅದರಲ್ಲಿ "ಪೇಜಾವರ ಶ್ರೀಗಳಿಗೆ ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಡಾ. ಉಷಾ ಅಂತ. ಅವರು ಚೆನ್ನೈನಲ್ಲಿ ವೈದ್ಯರಾಗಿದ್ದಾರೆ. ಶ್ರೀಗಳು ತಮಿಳುನಾಡಿನಲ್ಲಿ ಮಹಿಳೆಯೊಬ್ಬರ ಜತೆ ಸಂಬಂಧ ಹೊಂದಿದ್ದು ಅವರ ಇತ್ತೀಚೆಗಷ್ಟೇ ತೀರಿಕೊಂಡಿದ್ದರು" ಎಂದು ಹೇಳಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಇಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಚೆನೈನಿಂದ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
"ನನ್ನ ತಾರುಣ್ಯದಲ್ಲಿ ನನಗೆ ಸ್ತ್ರೀ ಸಂಗವಿತ್ತು ಎಂಬುದೂ ಮತ್ತು ತಮಿಳುನಾಡಿನಲ್ಲಿ ನನಗೆ ಮಗಳಿದ್ದಾಳೆ ಎಂಬುದೆಲ್ಲವೂ ಶುದ್ಧ ಸುಳ್ಳು. ಇವೆಲ್ಲ ಕೇವಲ ಕಲ್ಪನೆ. ದೇಶದಲ್ಲಿ ಯಾರೂ ಈ ವಿಷಯವನ್ನು ನಂಬುವುದಿಲ್ಲ. ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪರೀಕ್ಷೆ, ವಿಚಾರಣೆ ಎದುರಿಸಲು ನಾನು ಸಿದ್ಧ. ನನ್ನ ಮೇಲಿನ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ಸಾಬೀತಾದರೆ ಪೀಠ ತ್ಯಾಗ ಮಾಡುವೆ" ಎಂದು ಪೇಜಾವರ ಶ್ರೀಗಳು ಹೇಳಿಕೆಯಲ್ಲಿ ಸವಾಲು ಹಾಕಿದ್ದಾರೆ.