ಬೆಂಗಳೂರು: ದಿನಕ್ಕೊಂದು ಬೆಳವಣಿಗೆ ನಡೆಯುತ್ತಿರುವ ಚುನಾವಣಾ ರಣಕಣದಲ್ಲೀಗ ಬಹುಭಾಷಾ ನಟ ಪ್ರಕಾಶ್ ರೈ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರೊಂದಿಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
ಇತ್ತೀಚಿಗಷ್ಟೇ ಬಿಜೆಪಿ ಕ್ಯಾನ್ಸರ್, ಉಳಿದ ಪಕ್ಷಗಳು ನೆಗಡಿ, ಕೆಮ್ಮು ಎಂದಿದ್ದ ಪ್ರಕಾಶ್ ರೈ ಬಿಜೆಪಿಗೆ ಮತ ಹಾಕಬೇಡಿ ಎಂದಿದ್ದರು. ಜೊತೆಗೆ ಒಕ್ಕೂಟ ವ್ಯವಸ್ಥೆ ಬಲಯುತಗೊಳ್ಳಬೇಕಾದರೆ, ದೇಶಕ್ಕೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆಯೇ ಹೊರತು, ರಾಷ್ಟ್ರೀಯ ಪಕ್ಷಗಳ ಅವಶ್ಯಕತೆ ಅಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಅವರು ತೆಲಂಗಾಣ ಸಿಎಂ ರೊಂದಿಗೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಮುಖ್ಯಸ್ಥ ಎಚ್ಡಿಡಿ ಅವರನ್ನು ಭೇಟಿಯಾಗಿರುವುದು ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಏತನ್ಮಧ್ಯೆ, 2019ರ ಲೋಕಸಭೆ ಚುನಾವಣೆಯಲ್ಲಿ ತೃತೀಯ ರಂಗ ರಚಿಸುವ ವಿಷಯವಾಗಿ ವಾರದ ಹಿಂದೆಯಷ್ಟೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದ ಕೆಸಿಆರ್, ಇಂದು ಎಚ್ಡಿಡಿ ಅವರನ್ನು ಭೇಟಿಯಾಗಿರುವುದರಿಂದ ಜೆಡಿಎಸ್, ರಾವ್ ಮೂಲಕ ತೆಲುಗು ಭಾಷಿಕರ ಮತಗಳನ್ನು ಸೆಳೆಯಲು ಮುಂದಾಗಿದೆ ಎನ್ನಲಾಗುತ್ತಿದೆ.