ನವದೆಹಲಿ: ಕರ್ನಾಟಕದ 17 ಮಂದಿ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷದ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮತ್ತೆ ನಡೆಸಲಿದೆ.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಎದುರು ಬುಧವಾರ ಕಾಂಗ್ರೆಸ್ ಪರ ಕಪಿಲ್ ಸಿಬಲ್ ಮತ್ತು ಅನರ್ಹ ಶಾಸಕರ ಪರ ಮುಕುಲ್ ರೋಹಟಗಿ ವಾದ ಮಂಡಿಸಿದರು. ಜೊತೆಗೆ ಇನ್ನೂ ಹೆಚ್ಚಿನ ವಾದ ಮಂಡನೆಯ ಇಂಗಿತ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಗುರುವಾರಕ್ಕೆ ವಿಚಾರಣೆ ಮುಂದೂಡಲಾಗಿತ್ತು.
ಹಿಂದಿನ ಕಾಂಗ್ರೆಸ್ ಮತ್ತು ಜೆಡಿಸ್ ಮೈತ್ರಿ ಸರ್ಕಾರದಲ್ಲಿ ಬಂಡೆದ್ದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಶಾಸಕರನ್ನು ಅಂದಿನ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅನರ್ಹ ಗೊಳಿಸಿದ್ದರು. ತಮ್ಮನ್ನು ಅನರ್ಹಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹಾಗೇ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ಅನರ್ಹ ಶಾಸಕರ ಅರ್ಜಿ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ 15 ಕ್ಷೇತ್ರಗಳ ಉಪಚುನಾವಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಲಾಗಿತ್ತು. ಮಂಗಳವಾರವೇ ಅರ್ಜಿ ವಿಚಾರಣೆ ನಿಗದಿಯಾಗಿದ್ದರೂ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಕೋರ್ಟ್ಗೆ ಆಗಮಿಸಲು ಸಾಧ್ಯವಾಗದ ಕಾರಣ ಬುಧವಾರಕ್ಕೆ ಮುಂದೂಡಲಾಗಿತ್ತು. ಬೆಳಗ್ಗೆಯೇ ನಡೆಯಬೇಕಿದ್ದ ವಿಚಾರಣೆಯನ್ನು ಮಧ್ಯಾಹ್ನ 2ಗಂಟೆಗೆ ನಿಗದಿಪಡಿಸಲಾಗಿತ್ತು.
ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಸಂಬಂಧಪಟ್ಟಂತೆ ಎಲ್ಲ ವಾದ-ಪ್ರತಿವಾದಗಳನ್ನೂ ಬುಧವಾರವೇ ಮುಗಿಸಬೇಕು ಎಂದು ನ್ಯಾಯಮೂರ್ತಿ ಎನ್.ವಿ. ರಮಣ ಸೂಚನೆ ನೀಡಿದ್ದರು. ಹಾಗೇ 15 ಕ್ಷೇತ್ರಗಳಿಗೆ ಉಪಚುನಾವಣೆ ಸಂಬಂಧ ರಾಜ್ಯ ಹೈಕೋರ್ಟ್ಗೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು, ಅನರ್ಹ ಶಾಸಕರು ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿ ವಿಚಾರಣೆ ನಿಗದಿಯಾಗಿರುವಾಗ ನೀವೇಕೆ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದೀರಿ ಎಂದು ಪ್ರಶ್ನಿಸಿದ್ದರು.