ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಗುರು ಪರಪಂರೆಯಲ್ಲಿ ಎಪ್ಪತ್ತೆರಡನೇ ಪೀಠಾಧ್ಯಕ್ಷರಾಗಿ ಶ್ರೀಮಠದ ಸಿದ್ದ ಸಿಂಹಾಸನವನ್ನು ಅಲಂಕರಿಸಿರುವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಲೆಂದೇ ಅವತರಿಸಿದವರು.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಪುಟ್ಟ ಗ್ರಾಮ ಚೀರನಹಳ್ಳಿ ಇವರ ಜನ್ಮ ಸ್ಥಳ. ಇವರ ಪೂರ್ವಾಶ್ರಮದ ಹೆಸರು ನಾಗರಾಜು. ಇವರು 1969 ರ ಜುಲೈ 20ರಂದು ಶ್ರೀ ನರಸಯ್ಯ ಮತ್ತು ಶ್ರೀಮತಿ ನಂಜಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಚಿಕ್ಕಂದಿನಲ್ಲಿ ಗ್ರಾಮದ ಎಲ್ಲ ಮಕ್ಕಳಂತೆಯೇ ಆಡುತ್ತಾ, ನಲಿಯುತ್ತಾ, ಓದುತ್ತಾ ಎಲ್ಲರೊಳಗೊಂದಾಗಿ ಬೆಳೆದ ಇವರು ಪ್ರಾಥಮಿಕ ಶಿಕ್ಷಣವನ್ನು ಚೀರನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ, ಮಾಧ್ಯಮಿಕ ಶಾಲಾ ಶಿಕ್ಷಣವನ್ನು ನೆಟ್ಟೆಕರೆಯ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಪಡೆದರು. ಅದೇ ತಾಲ್ಲೂಕಿನ ಮಾವಿನಹಳ್ಳಿಯ ಪ್ರಗತಿಪರ ಗಣಪತಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು, ನಂತರ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮೊ ವ್ಯಾಸಂಗ ಮಾಡಿ ಏಳನೇ ರಾಂಕ್ ಪಡೆಯುವುದರೊಂದಿಗೆ ಡಿಪ್ಲೊಮೊ ಶಿಕ್ಷಣ ಮುಗಿಸಿದರು. ಮೈಸೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪಡೆದರು. ನಂತರ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಚನ್ನೈನ ಐ. ಐ. ಟಿ ಯಲ್ಲಿ ಎಂ. ಟೆಕ್ಗೆ ಸೇರ್ಪಡೆಗೊಂಡು ಸ್ಟಕ್ಟರಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವುದರೊಂದಿಗೆ ಎಂ. ಟೆಕ್. ಪದವಿ ಪಡೆದರು.
ಯಾವೊಂದು ಸೌಲಭ್ಯವೂ ಇಲ್ಲದೆ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಯೊಬ್ಬ ಸ್ವಯಂ ಪರಿಶ್ರಮದಿಂದ ಅತ್ಯುನ್ನತ ದರ್ಜೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಸ್ನಾತಕೋತ್ತರ ಪದವಿಯಲ್ಲಿ ಮೊದಲಿಗರಾಗಿ ಬರುವುದು, ಚಿನ್ನದ ಪದಕಗಳಿಂದ ಶೋಭಿತರಾಗುವುದು ಸುಲಭ ಸಾಧ್ಯವಲ್ಲ. ಆದರೆ ಕ್ರಿಯಾಶೀಲರೂ, ಪ್ರತಿಭಾನ್ವಿತರೂ ಆಗಿದ್ದ ನಾಗರಾಜುರವರಿಗೆ ಈ ಎಲ್ಲವೂ ಸಲಭ ಸಾಧ್ಯವಾಗಿಯೇ ಇತ್ತು. ನಾಗರಾಜುರವರು ಎಂ. ಟೆಕ್ ಪದವಿಯನ್ನು ಪಡೆದ ನಂತರ ಪುಣೆಯಲ್ಲಿರುವ ಭಾರತ ಸರ್ಕಾರದ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ನೇಮಕಗೊಂಡರು. ಆದೇಶ ಪತ್ರವೂ ಇವರ ಕೈ ತಲುಪಿತು. ಕೈ ತುಂಬಾ ವೇತನ, ವಿಜ್ಞಾನಿಯಾಗುವ ಹೆಗ್ಗಳಿಕೆ ಇವರನ್ನು ಪ್ರಾಪಂಚಿಕ ಜೀವನದ ಹೊಸ್ತಿಲಿಗೆ ತಂದು ನಿಲ್ಲಿಸಿತ್ತು. ಆದರೆ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಲೆಂದೇ ಅವತರಿಸಿದ ಇವರ ಕಿವಿಯಲ್ಲಿ ಶ್ರೀಗುರುವಿನ ಉನ್ನತ ಆದರ್ಶದ ಕರೆಯೊಂದು ಬಹಳ ಹಿಂದಿನಿಂದ ಅನುಕರಣಿಸುತ್ತಲೇ ಇತ್ತು. ಡಾ||ಬಾಲಗಂಗಾಧರನಾಥ ಮಹಾಸ್ವಾಮಿಗಳವರಿಂದ ತೆರವಾಗುವ ಧರ್ಮಪೀಠವನ್ನಲಂಕರಿಸಲೆಂದೇ ಅವತರಿಸಿದ ಇವರನ್ನು ಉನ್ನತ ಉದ್ಯೋಗವಾಗಲೀ, ಹೆಚ್ಚು ವೇತನವಾಗಲಿ, ಮತ್ತಿತರ ಯಾವ ಪ್ರಾಪಂಚಿಕ ಪ್ರಲೋಭನೆಗಳೂ ಸೆಳೆಯಲಾರದಾದವು. ಪ್ರಾಪಂಚಿಕ ಪ್ರಲೋಭನೆಗಳಿಗೆ ಒಳಗಾಗದ ಇವರು ಶ್ರೀಗುರುವಿನ ಪ್ರೀತಿಯ ಕರೆಗೆ ಓಗೋಡುತ್ತೇನೆ ಎಂಬ ದೃಢ ಮನಸ್ಸು ಮಾಡಿದರು. ಶ್ರೀಗುರುವಿನ ಕರೆಗೆ ಓಗೊಟ್ಟ ಫಲ ಶ್ರೀಗುರುವಿನ ಕೃಪಾಶೀರ್ವಾದ ಇವರನ್ನು ಅಧ್ಯಾತ್ಮಿಕ ಲೋಕದರಮನೆಯ ಮಹಾಯೋಗಿಯನ್ನಾಗಿಸಿತು.
ಪ್ರತಿಭಾವಂತ ನಾಗರಾಜುರವರು ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಜಗದ್ಗುರು ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಸಂಪರ್ಕಕ್ಕೆ ಬಂದರು. ಪ್ರಾರಂಭದ ದಿನಗಳಲ್ಲಿ ಪೂಜ್ಯ ಗುರೂಜಿರವರ ಅಣತಿಯಂತೆ ರಾಮನಗರದ ಅರ್ಚಕರ ಹಳ್ಳಿಯಲ್ಲಿರುವ ಅಂಧರ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಈ ಶಾಲೆಯ ಅಂಧ ಮಕ್ಕಳ ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದ ಇವರ ಸೇವಾ ಮನೋಭಾವ ಮತ್ತು ಅದೇ ಸಮಯದಲ್ಲಿ ಬಾನಂದೂರಿನಲ್ಲಿ ನಿರ್ಮಾಣವಾಗುತ್ತಿದ್ದ ಶ್ರೀ ಮಠದ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಇವರು ತೋರಿದ ಕಾರ್ಯಶ್ರದ್ದೆ ಹಾಗೂ ಜನಮನದೊಂದಿಗಿನ ಮಾನವೀಯ ಕಳಕಳಿ ಇವರ ಬಗ್ಗೆ ಶ್ರೀಗುರು ಬಾಲಗಂಗಾಧರನಾಥ ಮಹಾಸ್ವಾಮಿಗಳವರು ತಳೆದಿದ್ದ ನಂಬುಗೆಯನ್ನು ನೂರಡಿಗೊಳಿಸಿದ್ದವು. ತತ್ಥಲವಾಗಿ ಪೂಜ್ಯ ಗುರೂಜಿರವರು ಇವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳೆಂಬ ಅಭಿದಾನವನ್ನಿತ್ತು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಶಾಖಾಮಠಗಳ ಉಸ್ತುವಾರಿಯನ್ನು ವಹಿಸಿದರು.
ಶ್ರೀ ಗುರುವಿನ ಆಶೀರ್ವಾದವನ್ನು ಶ್ರೀಗುರು ಪ್ರಸಾದವೆಂದು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಚಿಕ್ಕಬಳ್ಳಾಪುರ ಶಾಖಾಮಠಕ್ಕೆ ತೆರಳಿದ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳವರು ಸುಮಾರು ಹದಿಮೂರು ವರ್ಷಗಳಿಗೂ ಹೆಚ್ಚು ಕಾಲ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಾದ್ಯಂತ ಸಂಚರಿಸಿ ತಮ್ಮ ಸಾರ್ಥಕ ಸೇವೆಯ ಮೂಲಕ ಜನಮಾನಸದಲ್ಲಿ ವಿರಾಜಮಾನರಾದರು. ಈ ಜಿಲ್ಲೆಗಳಲ್ಲಿ ಹತ್ತು ಹಲವು ವಿದ್ಯಾಸಂಸ್ಥೆಗಳನ್ನು ತೆರೆದು ಗ್ರಾಮೀಣ ಮಕ್ಕಳ ಬಾಳಿಗೆ ಜ್ಞಾನದೀವಿಗೆಯಾದರು. ಜೊತೆ ಜೊತೆಗೆ ಸಂಸ್ಕೃತ ವೇದ, ಆಗಮಗಳನ್ನು ಕುರಿತು ಸತತ ಅಧ್ಯಯನ ಮಾಡಿ ಸಂಸ್ಕೃತ ವಿದ್ವತ್ ಪದವಿಯನ್ನೂ ಗಳಿಸಿದರು. ಪೂಜ್ಯ ಗುರುಗಳು ತೋರಿದ ಮಾರ್ಗದಲ್ಲಿಯೇ ಹೆಜ್ಜೆ ಹಾಕಿ ಶ್ರೀಗುರು ಅಣತಿಯಂತೆ ಊರು ಕೇರಿ ಸುತ್ತಿದರು. ಗ್ರಾಮ ಸಂದರ್ಶನ ಮಾಡಿದರು, ಭಕ್ತಗಣದ ಮನವನ್ನರಿತರು, ದೇಶ ವಿದೇಶಗಳ ಪ್ರವಾಸ ಕೈಗೊಂಡು ಧರ್ಮ ಕರ್ಮಗಳನ್ನು ತಿಳಿದು, ಸಮಾಜದ ಸಮಸ್ಯೆಗಳನ್ನೆಲ್ಲ ಮನದುಂಬಿಕೊಂಡು ಅವುಗಳನ್ನೆಲ್ಲ ಶೀಗುರು ಮಾರ್ಗದರ್ಶನವೆಂಬ ಪ್ರಸಾದದಿಂದ ಪರಿಹರಿಸತೊಡಗಿದರು.
ದಿನಾಂಕ 14.01.2013 ರ ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲದಲ್ಲಿ ಪಡುವಣ ದಿಕ್ಕಿನಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯನ್ನು ಬೆಳಗಿದ ಶ್ರೀ ಬಾಲಗಂಗಾಧರನಾಥರೆಂಬ 'ಜ್ಞಾನಸೂರ್ಯ ಅಸ್ತಂಗತವಾಗುತ್ತಿದ್ದಂತೆಯೇ ಇಡೀ ಶ್ರೀಕ್ಷೇತ್ರ ಕಾರ್ಗತ್ತಲಿನಲ್ಲಿ ಮುಳಗಿತು. ಶ್ರೀ ಕ್ಷೇತ್ರದ ಗಿರಿ ಶಿಖರ, ಗುಡ್ಡ ಬೆಟ್ಟ, ಶಿಲೆ ಮೂರ್ತಿ, ಗಿಡ ಮರ, ತರು ಲತೆಗಳಲೆಲ್ಲಾ ಜಡತ್ವದಿಂದ ಕೂಡಿ ತಮ್ಮೆಲ್ಲಾ ಚೈತನ್ಯವನ್ನು ಕಳೆದುಕೊಂಡಂತಾದವು. ನಾಲ್ಕು ದಶಕಗಳಿಂದ ಕೇಕೆ ಹಾಕಿ ನರ್ತಿಸುತ್ತಿದ್ದ ನವಿಲುಗಳು, ಚಿಲಿಪಿಲಿಗುಟ್ಟುತ್ತಿದ್ದ ಪಕ್ಷಿ ಸಂಕುಲ ದಿಕ್ಕು ತೋಚದಂತಾದವು. ತಾಯಿಯನ್ನು ಕಳೆದುಕೊಂಡ ಕರುಗಳಂತೆ ಗೋವುಗಳೆಲ್ಲಾ ಅಂಬಾ.... ಎಂದು ಕಣ್ಣೀರು ಹಾಕತೊಡಗಿದ್ದವು. "ಬಾಲಗಂಗಾಧರ" ಎಂಬ "ಪರುಷ ಮಣಿ" ಯ ಸ್ಪರ್ಶ ಮಾತ್ರದಿಂದಲೇ ನಳ ನಳಿಸುತ್ತಿದ್ದ ಹಸಿರಿನ ಮೈ ಸಿರಿ ಹಾಗೂ ವಿಧ ವಿಧ ಹೂ ಬಳ್ಳಿಗಳು ಬಾಡಿ ಹೋದಂತಾದವು. ಶ್ರೀ ಕ್ಷೇತ್ರದ ಶ್ರೀ ಗುರುವಿನಾಶ್ರಮದಲ್ಲಿ ವಿದ್ಯೆ ಅರಸಿ ಬಂದ ದೂರದೂರಿನ ಪುಟ್ಟ ಹೃದಯಗಳ ಕಂದಮ್ಮಗಳು ನಾವು ನಿಜಕ್ಕೂ ಅನಾಥರಾದೆವು ಎಂದು ರೋದಿಸುತ್ತಿದ್ದವು. ಒಟ್ಟಿನಲ್ಲಿ ನಾಲ್ಕು ದಶಕಗಳ ಕಾಲ ದೇಶ ಬಾಂಧವರಿಗೆ ಚಿನ್ನದ ಗಿರಿಯಾಗಿ ಪ್ರಕಾಶಿಸಿದ ಶ್ರೀಗಿರಿಯ ಮೇಲೆ ಶ್ರೀಗುರುದೇವರ ಅಗಲಿಕೆಯ ಕಾರ್ಮೋಡ ಮುಸುಕಿದಂತಾಯಿತು.
ಶ್ರೀ ಕಾಲಭೈರವನಲ್ಲಿ ಲೀನರಾಗಿ ಹೋದ ಬಾಲಗಂಗಾಧರ ಶ್ರೀಗುರು ಎಲ್ಲವನ್ನೂ ಬಲ್ಲವರೇ ಆಗಿದ್ದರು. ತಾವು ಭಗವಂತನೆಡೆಗೆ ಸಾಗಿದ ನಂತರ ತಮ್ಮ ಅನುಪಸ್ಥಿತಿಯಲ್ಲಿ ಮುಸುಕುವ ಕಾರ್ಮೋಡವನ್ನು ದೂರ ಸರಿಸಿ ಶ್ರೀಕ್ಷೇತ್ರವನ್ನು ಮತ್ತಷ್ಟು ಪ್ರಜ್ವಲ್ಯಮಾನವಾಗಿ ಬೆಳಗಲು ಸಮರ್ಥರಾದ, ತಮ್ಮೆಲ್ಲಾ "ಗುರು ಗುಣ" ಸಂಭೂತವಾದ 'ಶಕ್ತಿ'ಯೊಂದನ್ನು ಆಗಲೇ ಅಣಿಗೊಳಿಸಿದ್ದರು. ಆ ಶಕ್ತಿಗೆ "ಶ್ರೀ ನಿರ್ಮಲಾನಂದನಾಥಸ್ವಾಮಿ" ಎಂದು ನಾಮಾಂಕಿತವಿಟ್ಟು ಶಿಷ್ಯನನ್ನಾಗಿ ಸ್ವೀಕರಿಸಿ ತಮ್ಮ ಗುಣಾಂಶಗಳನ್ನೆಲ್ಲ ಧಾರೆಯೆರೆದಿದ್ದರು. ಪ್ರಿಯ ಶಿಷ್ಯನಿಗೆ "ನನ್ನಂತೆಯೇ ನೀನಾಗು" ಎಂದು ಅಂತರಾಳದಿಂದ ಹರಸಿದ್ದರು. ಶ್ರೀಗುರು ಪ್ರಸಾದವನ್ನು ಶಿಷ್ಯ "ನಿರ್ಮಲಾಂತ:ಕರಣ"ದಿಂದ ಭಕ್ತಿಪೂರ್ವಕವಾಗಿ ಸ್ವೀಕರಿಸಿದ್ದರು. ಪೂಜ್ಯರು ತೋರಿದ ಮಾರ್ಗದಲ್ಲಿ ಹೆಜ್ಜೆ ಹಾಕಿದರು. ಪ್ರಿಯಶಿಷ್ಯನ ಬೆಳವಣಿಗೆಯನ್ನು, ಕಾರ್ಯಶೈಲಿಯನ್ನು ಅರಿತ ಶ್ರೀಗುರುದೇವರು ಸಂತೋಷದಿಂದ ತಾವು ಭಗವಂತನೆಡೆಗೆ ನಡೆಯಲು ತೀರ್ಮಾನಿಸಿ, ಅದಕ್ಕಾಗಿ ಸಂಕ್ರಾಂತಿಯ ಉತ್ತರಾಯಣದ ಪುಣ್ಯಕಾಲವನ್ನು ನಿಗದಿ ಮಾಡಿಕೊಂಡೇಬಿಟ್ಟರು. ಆದರೆ ಇಡೀ ಭಕ್ತಕೋಟಿ ಶ್ರೀಗುರುವನ್ನು ಇನ್ನಷ್ಟು ಕಾಲ ಇದ್ದು ತಮ್ಮನ್ನೆಲ್ಲ ಉದ್ಧರಿಸಬೇಕೆಂದು ಬೇಡಿಕೊಂಡರು. ಆದರೆ ತಮ್ಮ ನಿರ್ಧಾರವನ್ನು ಬದಲಿಸಿದ ಶ್ರೀ ಗುರುವರ್ಯ ಭಕ್ತಕೋಟಿಯನ್ನು ಉದ್ದರಿಸಲು ತಮ್ಮ ಪ್ರಿಯಶಿಷ್ಯನನ್ನು ಸಿದ್ಧಗೊಳಿಸಿ ದಿನಾಂಕ 14.01.2013 ಸಂಕ್ರಾಂತಿಯ ಉತ್ತರಾಯಣದ ಪುಣ್ಯಕಾಲದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯಲ್ಲಿ ಲೀನರಾದರು. ಪೂಜ್ಯರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಶ್ರೀ ಗುರುವರ್ಯರ ಆದೇಶದಂತೆಯೇ ಅವರು ಭೂ ಮಾತೆಯ ಮಡಿಲಿನಲ್ಲಿ ಚಿರನಿದ್ರೆಗೆ ಜಾರುವ ಮೊದಲು ದಿನಾಂಕ 14.01.2013 ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜವಾಬ್ದಾರಿಯನ್ನು ವಹಿಸಿಕೊಂಡರು.
ಮಕರ ಸಂಕ್ರಮಣದ ಉತ್ತರಾಯಣ ಪುಣ್ಯಕಾಲದಲ್ಲಿ ಇಡೀ ಧರೆಯನ್ನೇ ಬೆಳಗಿದ "ಜ್ಞಾನಸೂರ್ಯ" ಪಶ್ಚಿಮದಲ್ಲಿ ಅಸ್ತಂಗತನಾಗುತ್ತಿದ್ದಂತೆಯೇ ಪುಷ್ಯ ಮಾಸ, ಶುಕ್ಲ ಪಕ್ಷದ ತದಿಗೆಯ "ಬಾಲಚಂದ್ರ" ಭುವಿಗೆ ತಂಪೆರೆಯಲು ನಾನು ಸಿದ್ಧನಾಗಿ ಬರುತ್ತಿದ್ದೇನೆಂದು ಮೂಡಣ ದಿಕ್ಕಿನಲ್ಲಿ ಉದಯಿಸತೊಡಗಿದ. ಆ ಸಮಯದಲ್ಲಿ ಶ್ರೀ ಆದಿಚುಂಚನಗಿರಿ ಪುಣ್ಯಕ್ಷೇತ್ರದಲ್ಲಿ ನೆರೆದಿದ್ದ ಭಕ್ತ ಸಾಗರ ಇಂದು ಉದಯಿಸುತ್ತಿರುವ "ಬಾಲಚಂದ್ರ" ನು "ನಿರ್ಮಲಾಕಾಶ"ದಲ್ಲಿ "ಪೂರ್ಣಚಂದ್ರ"ನಾಗಿ ಬೆಳೆದು ಭುವಿಗೆ ತಂಪರೆದು ಬೆಳಗಲೆಂದು ಶ್ರೀಗುರು ದೇವತೆಗಳಲ್ಲಿ ಬೇಡಿಕೊಂಡರು.
ದಿನಾಂಕ 14.01.2013 ರಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದರಾದರೂ ಶ್ರೀಮಠದ ಪರಂಪರೆಯಂತೆ ಪಟ್ಟಾಭಿಷೇಕವಾಗಿರಲಿಲ್ಲ. ಶ್ರೀಮಠದ ಪರಂಪರೆಯಂತೆ ಉತ್ತರಾಧಿಕಾರಿಗಳ ಪಟ್ಟಾಭಿಷೇಕವನ್ನು ಆದಷ್ಟು ಬೇಗನೇ ನಡೆಸಬೇಕಾಗಿತ್ತು. ಅದಕ್ಕಾಗಿ ಶ್ರೀ ಮಠದ ಟ್ರಸ್ಟಿಗಳು, ಸಮಾಜದ ಗಣ್ಯರು, ಪ್ರಮುಖ ಭಕ್ತರು ಸಭೆ ಸೇರಿ ಚರ್ಚಿಸಿದರು. ದಿನಾಂಕ 20.02.2013 ಮಾಘ ಮಾಸ ಶುಕ್ಲ ಪಕ್ಷ ಶುದ್ಧ ದಶಮಿಯಂದು ಪರಮಪೂಜ್ಯರ ಪಟ್ಟಾಭಿಷೇಕವನ್ನು ವೈಭವವಾಗಿ ಆಚರಿಸಬೇಕೆಂದು ತೀರ್ಮಾನಿಸಿದರು. ಶ್ರೀಮಠದ ಪರಂಪರೆಯಂತೆ ಪಟ್ಟಾಭಿಷಿಕ್ತರಾಗಲು ಪರಮಪೂಜ್ಯರು ಸಿದ್ದರಾದರೂ ನಾವು ನಿಮಿತ್ತ ಮಾತ್ರರು, ಎಲ್ಲವೂ ಶ್ರೀಗುರುದೇವರ ಇಚ್ಛೆ. ಆದರೆ ನಾವೂ ಸೇರಿದಂತೆ ಶ್ರೀಗುರುಬಾಯಿಗಳು ಹಾಗೂ ಶ್ರೀಮಠದ ಭಕ್ತವೃಂದ ಶ್ರೀಗಳು ದೇಹಾಂತ್ಯದ ಅಗಲಿಕೆಯ ನೋವಿನಿಂದ ಹೊರಬಂದಿಲ್ಲ. ಆದ್ದರಿಂದ ಪಟ್ಟಾಭಿಚೇಕ ಮಹೋತ್ಸವದ ಆಚರಣೆ ಅತ್ಯಂತ ಸರಳವಾಗಿ ನೆರವೇರಲಿ ಎಂದು ಆಶಿಸಿದರು.
ಪರಮಪೂಜ್ಯರ ಆಶಯದಂತೆ ಶ್ರೀ ಕ್ಷೇತ್ರದಲ್ಲಿ ಪಟ್ಟಾಭಿಷೇಕದ ಸಿದ್ಧತೆಗಳು ನಡೆಯತೊಡಗಿದವು. ದಿನಾಂಕ 20.02.2013 ರ ಶುಭ ಬುಧವಾರ ಬಂದೇಬಿಟ್ಟತು. ಶ್ರೀ ಕ್ಷೇತ್ರದಲ್ಲಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯ, ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯ, ಶ್ರೀ ನಾಗಲಿಂಗೇಶ್ವರ ದೇವಾಲಯ ಹಾಗೂ ಪಂಚಲಿಂಗಗಳಿರುವ ದೇವ ಮಂದಿರಗಳು, ಕಟ್ಟಡಗಳು ಹಾಗೂ ರಾಜ್ಯ ಹೆದ್ದಾರಿಯ ಪ್ರವೇಶ ದ್ವಾರದಿಂದ ಶ್ರೀಮಠದವರೆಗಿನ ಜೋಡಿ ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲಿರುವ ಗಿಡ ಮರಗಳೆಲ್ಲ ದೀಪಾಲಂಕಾರದಿಂದ, ತಳಿರು ತೋರಣಗಳಿಂದ ಹಾಗೂ ಪುಷ್ಪ ಮಾಲೆಗಳಿಂದ ಅಲಂಕೃತಗೊಂಡವು. ಶ್ರೀಗುರುದೇವರ ಸಮಾಧಿ ಮಂಟಪವು ದೀಪಾಲಂಕಾದಿಂದ ಬೆಳಗುತ್ತಿತ್ತು. ಪಟ್ಟಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದು ದೂರ ದೂರದ ಹಲವು ಮಠಗಳ ಮಠಾಧೀಶರು, ಸಮಾಜದ ಮುಖಂಡರು, ರಾಜಕೀಯ ನಾಯಕರು ಹಾಗೂ ಶ್ರೀ ಮಠದ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸತೊಡಗಿದರು. ಅಂದು ಬೆಳಗಿನ ಜಾವವೇ ಎಲ್ಲಾ ದೇವ ಮಂದಿರಗಳಲ್ಲೂ ವಿಶೇಷ ಅಭಿಷೇಕ ಪೂಜಾದಿ ಕಾರ್ಯಗಳು ನೆರವೇರಿದವು. ಮಂಗಳ ವಾದ್ಯಗಳು, ನಾದಸ್ವರ ವಾದನಗಳು, ದೇವಾಲಯಗಳಲ್ಲಿ ಘಂಟಾ ನಾದಗಳು, ವಟುಗಳ ವೇದಘೋಷಗಳು, ಮಂತ್ರ ಪಠಣಗಳು ಮೊಳಗುತ್ತಿದ್ದವು. ಸಿದ್ಧಸಿಂಹಾಸನವು ಜಗದ್ಗುರು ಮಹಾಸ್ವಾಮಿಗಳವರ ಆಗಮನದ ನಿರೀಕ್ಷೆಯಲ್ಲಿದೆಯೇನೋ ಎಂಬಂತೆ ಸರ್ವಾಲಂಕೃತವಾಗಿದ್ದಿತು. ಅಷ್ಟೋತ್ತಿಗಾಗಲೇ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಉಷಾಕಾಲದಲ್ಲಿ ಎದ್ದು ಪುಣ್ಯಸ್ನಾನಾದಿಗಳನ್ನು ಮುಗಿಸಿ ಶುಚಿರ್ಭೂತರಾಗಿದ್ದರು. ನಂತರ ನಡೆದ ಕಳಸ ಸ್ಥಾಪನೆ, ಶ್ರೀ ಗಣಪತಿ ಪೂಜೆ ನವಗ್ರಹ ಪೂಜೆ, ಹೋಮಾದಿ ಪೂರ್ಣಾಹುತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ನಂತರ ಉಡುಪಿಯ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಸಪ್ತನದಿಗಳಿಂದ ತರಿಸಲಾಗಿದ್ದ ಪುಣ್ಯಜಲದಿಂದ ಜಗದ್ಗುರು ಮಹಾಸ್ವಾಮಿಗಳವರಿಗೆ ಜಲಾಭಿಷೇಕ ಮಾಡಿದರು. ನೆರೆದಿದ್ದ ಭಕ್ತವೃಂದ ಜಯಘೋಷ ಮಾಡಿತು.
ನಂತರ ಪರಮಪೂಜ್ಯ ಮಹಾಸ್ವಾಮಿಗಳವರು ತಮ್ಮ ಅತ್ಯಾರ್ಥ ಶ್ರೀಗುರುದೇವರನ್ನು ಸ್ಮರಿಸಿ, ಶ್ರೀಮಠದ ಸಂಪ್ರದಾಯದಂತೆ ಕಿರೀಟ ಧಾರಣೆ ಮಾಡಿಕೊಂಡು, ನೂತನ ವಸ್ತ್ರ ಧರಿಸಿ, ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಮಾಲೆಯನ್ನು ಧರಿಸಿ, ವಟುಗಳ ವೇದಘೋಷ, ಮಂಗಳವಾದ್ಯಗಳು ಹಾಗೂ ಛತ್ರಿ ಚಾಮರಾದಿ ಸಕಲ ಮರ್ಯಾದೆಗಳೊಡನೆ ಶ್ರೀ ಕಾಲಭೈರವೇಶ್ವರಸ್ವಾಮಿ ಹಾಗೂ ಶ್ರೀಕ್ಷೇತ್ರದ ಅಧಿ ದೇವತೆಗಳಿಗೆ ಪೂಜೆ ಸಲ್ಲಿಸಿದರು. ನಂತರ ಜ್ವಾಲಾಪೀಠಕ್ಕೆ ನಮಿಸಿ, ಸಿದ್ಧ ಸಿಂಹಾಸನಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಭಕ್ತರ ಜಯಘೋಷಗಳ ನಡುವೆ ಸಿದ್ಧ ಸಿಂಹಾಸನದ ಪೀಠಾರೋಹಣ ಮಾಡಿದರು. ನೆರೆದಿದ್ದವರೆಲ್ಲರ ಮೈ ರೋಮಾಂಚನವಾಯಿತು. ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳಿಗೆ ಜಯವಾಗಲಿ ಎಂದು ಜಯಘೋಷ ಕೂಗಿ ಕರತಾಡನ ಮಾಡಿದರು. ಮಂಗಳ ಮಂಟಪದಲ್ಲಿರುವ ಶ್ರೀಗುರುದೇವರ ಸಮಾಧಿ ಮುಂದಿನ ದೀಪದ ಜ್ಯೋತಿಯ ಪ್ರಭೆ ಮೂಡಣ ದಿಕ್ಕಿನಲ್ಲಿ ಉದಯಿಸಿದ ಸೂರ್ಯನ ಹೊಂಬಣ್ಣದ ಮೂಲಕ ಇಡೀ ಶ್ರೀಕ್ಷೇತ್ರದ ಮೇಲೆ ಪಸರಿಸಿತು. ಆದ್ದರಿಂದ ಸಿದ್ಧ ಸಿಂಹಾಸನಾರೂಢರಾಗಿದ್ದ ಮಹಾಸ್ವಾಮಿಗಳವರ ಮುಖಾಂತರವಿಂದದ ತೇಜಸ್ಸು ದ್ವಿಗುಣಗೊಂಡಿತು. ಆ ಶುಭಗಳಿಗೆಗಾಗಿ ಹಾತೊರೆಯುತ್ತಿದ್ದ ತರು ಲತೆಗಳೆಲ್ಲ ಚೈತನ್ಯದಿಂದ ನಳ ನಳಿಸಿದವು. ಇಡೀ ಕ್ಷೇತ್ರದ ತುಂಬೆಲ್ಲಾ ವೇದಘೋಷ, ಘಂಟೆನಾದ, ಕೊಂಬು ಕಹಳೆ ಹಾಗೂ ಮಂಗಳ ವಾದ್ಯಗಳ ನಾದ ಮೊಳಗಿ ಪ್ರತಿಧ್ವನಿಸಿದವು. ಸಿಂಹಾಸನಾರೂಢ ಮಹಾಸ್ವಾಮಿಗಳಿಗೆ ಶೋಡಶೋಪಚಾರ ಪೂಜೆಗಳು ನೆರವೇರಿದವು.
ಆನಂತರ ನಡೆದ ಪೂಜ್ಯ ಮಹಾಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನೆರವೇರಿತು. ಸಾಲಂಕೃತ ವೇದಿಕೆಯ ಮೇಲೆ ವಿಧ ವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕೃತ ಪೀಠದ ಮೇಲೆ ಆಸೀನರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರಿಗೆ ಕಿರೀಟ ತೊಡಿಸಿ, ಕೊರಳನ್ನು ಶ್ರಿಕಂಠೀಹಾರ, ಹೂಮಾಲೆಗಳಿಂದ ಅಲಂಕರಿಸಿ, ವಿಧ ವಿಧ ಪುಷ್ಪಗಳಿಂದ ಪಟ್ಟಾಭಿಷೇಕ ಮಾಡಿ ಆರತಿ ಬೆಳಗಿ ಪ್ರಥಮ ಪಟ್ಟಾಭಿಷೇಕ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಗದಗಿನ ಡಾ|| ತೋಂಟದ ಸಿದ್ಧಲಿಂಗಮಹಾಸ್ವಾಮಿಗಳು, ಶ್ರೀ ನಾಗನೂರು ಮಠದ ಡಾ||ಸಿದ್ಧರಾಮೇಶ್ವರ ಸ್ವಾಮಿಗಳು, ಶ್ರೀ ಶಿವಲಿಂಗಾನಂದ ಸ್ವಾಮಿಗಳು, ಶ್ರೀ ಸುರೇಶಭಾರತಿ ಸ್ವಾಮಿಗಳು, ಶ್ರೀಮಠದ ಶ್ರೀಗುರುಬಾಯಿಗಳು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ, ಶ್ರೀ ಡಿ. ವಿ ಸದಾನಂದಗೌಡರು ಮುಂತಾದ ಸಾಧುಮಹಾತ್ಮರು, ಗಣ್ಯರು, ಅಸಂಖ್ಯಾತ ಭಕ್ತರು ಈ ಅಮೃತ ಘಳಿಗೆಗೆ ಸಾಕ್ಷಿಯಾದರು.
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಪೀಠಾಧಿಕಾರವನ್ನು ವಹಿಸಿಕೊಂಡ ದಿನದಿಂದಲೂ ಪರಮಪೂಜ್ಯ ಗುರೂಜಿರವರ ನವ ಸಮಾಜ. ನಿರ್ಮಾಣದ ಸಂಕಲ್ಪಗಳನ್ನು ಸಾಕಾರಗೊಳಿಸುವಲ್ಲಿ ಮಹತ್ವಪೂರ್ಣ ಹೆಜ್ಜೆ ಗುರುತುಗಳನ್ನು ಮೂಡಿಸಿ ಕಂಗೊಳಿಸುತ್ತಿದ್ದಾರೆ. ಪರಮಪೂಜ್ಯ ಗುರೂಜಿರವರು ನಿರ್ಮಿಸಿಕೊಟ್ಟಿರುವ ಆದರ್ಶದ ಪಥದಲ್ಲಿ ಮುನ್ನಡೆಯುತ್ತಾ ಸಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಸ್ವಾಮಿಗಳವರ ಸೇವಾವ್ಯಾಪ್ತಿ ಬಹು ವಿಸ್ತಾರ, ಮೇರು ಸದೃಶ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಶೋಭೆ ತರುವಂತಹ ಬೃಹತ್ ಯೋಜನೆಗಳನ್ನು ಹಮ್ಮಿಕೊಂಡು ಅವುಗಳನ್ನೆಲ್ಲ ಆಗು ಮಾಡುತ್ತಿದ್ದಾರೆ. ತಾವು ಪಟ್ಟಾಭಿಷಿಕ್ತರಾದ ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದಾದ್ಯಂತ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳನ್ನು ಅತ್ಯಾಧುನಿಕವಾಗಿ ನಿರ್ಮಿಸುವ ಮೂಲಕ ಅಡಿಪಾಯ ಭದ್ರಗೊಳಿಸಿದರೆ ಅದರ ಮೇಲೆ ಎಂತಹ ಸುಂದರ ಮಹಲನ್ನಾದರೂ ಕಟ್ಟಬಹುದು ಎಂಬುದಕ್ಕೆ ಶ್ರೀಮಠವನ್ನು ಸಾಕ್ಷಿಯನ್ನಾಗಿಸುತ್ತಿದ್ದಾರೆ. ಪರಮ ಪೂಜ್ಯ ಗುರೂಜಿರವರು ನಿರ್ಮಿಸಿ ಕೊಟ್ಟಿರುವ ಭದ್ರ ಅಡಿಪಾಯದ ಮೇಲೆ ಸನಾತನ ಜೀವನ ಮೌಲ್ಯಗಳಿಂದೊಡಗೂಡಿದ ಹತ್ತು ಹಲವು ಯೋಜನೆಗಳನ್ನು ಸಂಕಲ್ಪಿಸಿ ಅವುಗಳನ್ನೆಲ್ಲ ಸಾಕಾರಗೊಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಸೇವೆಯಲ್ಲಿ ನಿರತರಾಗಿದ್ದಾರೆ. ಪರಮಪೂಜ್ಯ ಗುರೂಜಿರವರ ಸದಾಶಯದಂತೆ ಜಾತಿ, ಮತ, ಧರ್ಮಗಳ ಭೇದವೆಣಿಸದೆ ಎಲ್ಲಾ ಮಕ್ಕಳ ಕಣ್ಣಳಲ್ಲಿ ಜ್ಞಾನದ ಬೆಳಕನ್ನು ಬೆಳಗಿಸುತ್ತಿದ್ದಾರೆ.
ಜ್ಞಾನಿಗಳೂ, ತತ್ತ್ವಜ್ಞಾನಿಗಳೂ, ವೈಜ್ಞಾನಿಕವಾಗಿ ಅಪರಿಮಿತ ಪರಿಣತಿಯುಳ್ಳವರೂ ಆಗಿರುವ ಪರಮಪೂಜ್ಯ ಮಹಾಸ್ವಾಮಿಗಳವರು ಉತ್ತಮ ವಾಗ್ಮಿಗಳು ಹೌದು. ಕವಿ ಮನಸಿನ ಸಾಹಿತ್ಯೋಪಾಸಕರೂ ಆಗಿರುವ ಸ್ವಾಮಿಗಳವರು ಸಾಹಿತಿಗಳೂ, ಕವಿ ಹಾಗೂ ಉತ್ತಮ ಸಂಗೀತಗಾರರೂ ಆಗಿದ್ದು ನೂರಾರು ಭಕ್ತಿ ಗೀತೆಗಳನ್ನು ರಚಿಸಿದ್ದಾರೆ. ತಮ್ಮ ರಚನೆಗಳಿಗೆ ಸ್ವತಃ ತಾವೇ ಸಂಗೀತವನ್ನೂ ಸಂಯೋಜಿಸಿ ಹಾಡಿದ್ದಾರೆ. ಮಹಾಸ್ವಾಮಿಗಳವರು ನಿತ್ಯ ಸಂಚಾರಿಗಳು, ಪ್ರತಿದಿನವೂ ಒಂದಲ್ಲ ಒಂದು ಗ್ರಾಮಕ್ಕೆ ಭೇಟಿ ನೀಡುತ್ತಾ ಜನರಲ್ಲಿ ಧರ್ಮ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ. ನಾಡಿನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸಂಚರಿಸಿ ತಮ್ಮ ದಿವ್ಯ ಸಂದೇಶ ಹಾಗೂ ಬೋಧನೆಗಳ ಮೂಲಕ ಯುವಜನರನ್ನು ಸನ್ಮಾರ್ಗದತ್ತ ಆಕರ್ಷಿಸುತ್ತಿದ್ದಾರೆ. ದೇಶಹಿತಕ್ಕಾಗಿ ಹಾಗೂ ಸಮಾಜ ಕಲ್ಯಾಣಕ್ಕಾಗಿ ಪ್ರೇರೇಪಿಸುತ್ತಿದ್ದಾರೆ.
ಪರಮಪೂಜ್ಯ ಮಹಾಸ್ವಾಮಿಗಳವರು ಕನ್ನಡ ಮಾತ್ರವಲ್ಲದೆ ಸಂಸ್ಕೃತ, ಇಂಗ್ಲೀಷ್ ಮುಂತಾದ ಭಾಷೆಗಳಲ್ಲಿ ಹಿಡಿತವನ್ನು ಸಾಧಿಸಿರುವವರು. ದೇಶಾದ್ಯಂತ ಜ್ಞಾನ, ವಿಜ್ಞಾನಕ್ಕೆ ಸಂಬಂಧಿಸಿದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮೇಳಗಳಲ್ಲಿ ಪಾಲ್ಗೊಂಡು ನೀಡಿರುವ ವಿದ್ವತ್ತೂರ್ಣ ಉಪನ್ಯಾಸ ಮತ್ತು ಸಂದೇಶಗಳು ವಿಶ್ವಮಾನ್ಯರ ಮನಸ್ಸನ್ನು ಸೂರೆಗೊಂಡಿವೆ.ಮಹಾಸ್ವಾಮಿಗಳವರನ್ನು ವಿದೇಶಗಳಲ್ಲಿರುವ ಆಕ್ಸ್ಫರ್ಡ್, ಕೇಂಬ್ರಿಡ್ಜ್, ಪ್ರಿನ್ಸನ್, ಟೆಕ್ನಾಸ್ ಮುಂತಾದ ವಿಶ್ವ ವಿದ್ಯಾಲಯಗಳು ಹತ್ತಾರು ಬಾರಿ ಆಹ್ವಾನಿಸಿವೆ. ವಿದೇಶಗಳ ವಿಶ್ವಮಾನ್ಯ ಯೂನಿವರ್ಸಿಟಿಗಳ ಅಗ್ರಮಾನ್ಯ ವೇದಿಕೆಗಳಲ್ಲಿ ಉಪನ್ಯಾಸ ನೀಡಿ ನಮ್ಮ ದೇಶದ ಕೀರ್ತಿಯನ್ನು ಬೆಳಗಿದ್ದಾರೆ. ಶ್ರೀಗಳು ಜ್ಞಾನ ವಿಜ್ಞಾನಗಳನ್ನು ಸಮೀಕರಿಸಿ ನೀಡುವ ಪ್ರವಚನಗಳನ್ನು ಕೇಳಿ ಪ್ರಭಾವಿತಗೊಂಡ ಹಲವಾರು ಮಂದಿ ಅನಿವಾಸಿ ಭಾರತೀಯರು ವರ್ಷದಲ್ಲಿ ನಾಲ್ಕಾರು ಬಾರಿಯಾದರೂ ತಾವಿರುವ ದೇಶಗಳಿಗೆ ಸ್ವಾಮಿಗಳವರನ್ನು ಆಮಂತ್ರಿಸುತ್ತಾರೆ. ಆಯಾ ದೇಶಗಳಲ್ಲಿರುವ ಭಾರತೀಯರನ್ನೆಲ್ಲ ಸಂಘಟಿಸಿ ಸತ್ಸಂಗ ಸಭೆಗಳನ್ನು ಏರ್ಪಡಿಸುವ ಮೂಲಕ ಸ್ವಾಮಿಗಳವರಿಂದ ದಿವ್ಯ ಸಂದೇಶವನ್ನು ಪಡೆಯುತ್ತಾರೆ. ತನ್ಮೂಲಕ ಪರಮಪೂಜ್ಯರು ವಿದೇಶಗಳಲ್ಲಿರುವ ಭಾರತೀಯರಿಗೆ ಧರ್ಮ ಸಂಸ್ಕೃತಿಯನ್ನು ಬೋಧಿಸಿ ಜನತೆಯನ್ನು ಜಾಗೃತಿಗೊಳಿಸುತ್ತಿದ್ದಾರೆ. ಆ ಮೂಲಕ ಸನಾತನ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರವನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದ್ದಾರೆ.
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರು ತಾವು ಪೀಠಾಧ್ಯಕ್ಷರಾದ ನಂತರದ ಕೇವಲ ಮೂರು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ತಮಿಳುನಾಡಿನ ರಾಮೇಶ್ವರ, ಕಂಬಂ, ಉತ್ತರಪ್ರದೇಶದ ನೈಮಿಷಾರಣ್ಯ, ಮಧ್ಯಪ್ರದೇಶದ ಚಿತ್ರಕೂಟ ಹಾಗೂ ಅಮೇರಿಕಾದ ನ್ಯೂಜೆರ್ಸಿಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನೂತನ ಶಾಖೆಗಳನ್ನು, ಅಲ್ಲೆಲ್ಲಾ ದೇವಾಲಯಗಳನ್ನೂ ಹಾಗೂ ಯಾತ್ರಿ ನಿವಾಸಗಳನ್ನೂ ತೆರೆಯುವ ಮೂಲಕ ಪೂಜ್ಯ ಗುರುಗಳ ಸತ್ಸಂಕಲ್ಪವನ್ನು ಸಾಕಾರಗೊಳಿಸಿದ್ದಾರೆ. ನೈಮಿಷಾರಣ್ಯ ಪ್ರದೇಶವು ವ್ಯಾಸ, ದವೀಚಿ ಮುಂತಾದ ಎಂಬತ್ತೆಂಟು ಸಾವಿರ ಮಹರ್ಷಿಗಳು ನೆಲಸಿದ್ದ ಪವನಭೂಮಿ. ಅಂತೆಯೇ ಪುರಾಣ ಪ್ರಸಿದ್ದವಾಗಿರುವ ಚಿತ್ರಕೂಟವು ಶ್ರೀರಾಮಚಂದ್ರ, ಸೀತಾಮಾತೆ ಹಾಗೂ ಲಕ್ಷ್ಮಣರು ವನವಾಸ ಮಾಡಿದ ಸಂದರ್ಭದಲ್ಲಿ ಹನ್ನೊಂದು ವರ್ಷಗಳ ಕಾಲ ನೆಲೆಸಿದ ಪಾವನ ಪುಣ್ಯಕ್ಷೇತ್ರ. ನೈಮಿಷಾರಣ್ಯದ ಶಾಖಾಮಠದ ಆವರಣದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇಗುಲವನ್ನೂ, ಚಿತ್ರಕೂಟ ಶಾಖಾಮಠದ ಆವರಣದಲ್ಲಿ ಶ್ರೀ ಕೋದಂಡರಾಮಸ್ವಾಮಿ ದೇಗುಲವನ್ನೂ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ. ತನ್ಮೂಲಕ ಶ್ರೀ ಮಠದ ಸೇವಾ ಬಾಹುಳ್ಯವನ್ನು ವಿಸ್ತರಿಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಹಾಗೂ ಅಮೇರಿಕಾದಲ್ಲೂ ಶಾಖಾಮಠಗಳನ್ನು ತೆರೆದಿದ್ದು ಅವುಗಳೆಲ್ಲವೂ ಸಮಾಜಮುಖಿ ಸೇವೆಯಲ್ಲಿ ನಿರತವಾಗಿವೆ.
ಶಿಕ್ಷಣ ಸಂಸ್ಥೆಗಳ ಸ್ಥಾಪನೆ:
ಶಿಕ್ಷಣ ಕ್ಷೇತ್ರದ ಬಗೆಗೆ ಪೂಜ್ಯರು ಹೊಂದಿರುವ ನಿಲುವು - ನಿರ್ಧಾರಗಳು ವೈವಿಧ್ಯತೆಯಿಂದ ಬೆಳಗುತ್ತಿರುವುದನ್ನು ಜನತೆ ಈಗಾಗಲೇ ಅನುಭವಿಸುತ್ತಿದ್ದಾರೆ. ಜಾತಿ, ಮತ, ಧರ್ಮಗಳ ಭೇದ ಭಾವವಿಲ್ಲದೆ ಸಮಾಜದ ಎಲ್ಲಾ ವರ್ಗಗಳಿಗೂ ಶೈಕ್ಷಣಿಕ ಸೇವೆಯನ್ನು ನೀಡುತ್ತಿದ್ದಾರೆ. 'ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್' ನ್ನು ರಾಷ್ಟ್ರದ ಒಂದು ಆದರ್ಶ ಸಂಸ್ಥೆಯನ್ನಾಗಿ ರೂಪಿಸಿ ಮತ್ತಷ್ಟು ಶೋಭಿಸುವಂತೆ ಮಾಡುವ ನಿಟ್ಟಿನಲ್ಲಿ 'ಆದಿಚುಂಚನಗಿರಿ ವಿಶ್ವವಿದ್ಯಾಲಯ' ವನ್ನೂ ಪ್ರಾರಂಭಿಸಿದ್ದಾರೆ. ಆಹಾರ ನಿದ್ರಾದಿ ಸಮಯದ ಪರಿವೆಯೂ ಇಲ್ಲದೆ ಹಗಲಿರುಳೆನ್ನದೆ ಪರಿಶ್ರಮಿಸುತ್ತಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಅಡಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಉತ್ತರ ಪ್ರದೇಶ, ದೆಹಲಿ ಮುಂತಾದ ರಾಜ್ಯಗಳಲ್ಲಿ ಈಗಾಗಲೇ 485 ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ತೆರೆದು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ದೇಶದ ಹೆಮ್ಮೆಯ ಶಿಕ್ಷಣ ಸಂಸ್ಥೆಯೆನಿಸಿದೆ. ಪ್ರಸ್ತುತ ಉತ್ತರ ಪ್ರದೇಶದ ನೋಯ್ದಾದಲ್ಲಿ ಹದಿನೈದು ಎಕರೆಗೂ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ವಿಶಾಲ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ತಾಂತ್ರಿಕ ಮಹಾವಿದ್ಯಾಲಯ, ನರ್ಸಿಂಗ್ ಕಾಲೇಜು, ವಿದ್ಯಾರ್ಥಿ ನಿಲಯ ಮುಂತಾದ ಶಿಕ್ಷಣ ಸಂಸ್ಥೆಗಳನ್ನೊಳಗೊಂಡ "ಬಿ.ಜಿ.ಎಸ್ ವಿಜ್ಞಾತಂ ಶಿಕ್ಷಣ ಸಮುಚ್ಚಯ" ದ ನೂತನ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆ ಸಮುಚ್ಚಯದಲ್ಲಿ ಈಗಾಗಲೇ "ಬಿ.ಜಿ.ಎಸ್ ವಿಜ್ಞಾತಂ ಸ್ಕೂಲ್" ಪ್ರಾರಂಭಗೊಂಡಿರುವುದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಮೂಹಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದಂತಾಗಿದೆ. ಪರಮಪೂಜ್ಯರು ಬೆಂಗಳೂರು ಹೊರ ವಲಯದ ನಗರೂರಿನಲ್ಲಿ ಬಿ.ಜಿ.ಎಸ್ ಅಯುರ್ವೇದ ಮಹಾವಿದ್ಯಾಲಯ ಮತ್ತು ಆಯುರ್ವೇದ ಆಸ್ಪತ್ರೆಯನ್ನು, ಪ್ರಾಥಮಿಕದಿಂದ ಪದವಿ ತರಗತಿಯವರೆಗಿನ ಶಾಲಾ ಕಾಲೇಜುಗಳನ್ನೂ ತೆರೆದಿದ್ದಾರೆ. ಮೈಸೂರು, ಮಾಲೂರು, ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಪದವಿ ಕಾಲೇಜುಗಳನ್ನು ಮಾಯಸಂದ್ರ ಬಿ.ಜಿ. ನಗರಗಳಲ್ಲಿ ಪದವಿಪೂರ್ವ ಕಾಲೇಜುಗಳನ್ನು, ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆ, ನೆಲಮಂಗಲದ ಸನಿಹದಲ್ಲಿರುವ ನಗರೂರು ಹಾಗೂ ರಾಮನಗರಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ತೆರದು ಲೋಕಾರ್ಪಣೆಗೊಳಿಸಿದ್ದಾರೆ. ಶೈಕ್ಷಣಿಕ ಸಂಸ್ಥೆಗಳ ಜೊತೆ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಎರಡು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಅಂತೆಯೇ ಬೆಂಗಳೂರಿನ ಮಾದನಾಯಕನಹಳ್ಳಿ ಮತ್ತು ಮಂಡ್ಯದಲ್ಲಿ ಸಮುದಾಯ ಭವನಗಳನ್ನು, ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಶ್ರೀ ಪ್ರಸನ್ನ ವಿರಾಂಜನೇಯಸ್ವಾಮಿ ದೇವಾಲಯ ಹಾಗೂ ಬಿ.ಜಿ.ಎಸ್ ಅಧ್ಯಾತ್ಮಿಕ ಭವನವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ಶ್ರೀಮಠದ ಶಿಕ್ಷಣ ಟ್ರಸ್ಟಿನ ಅಡಿಯಲ್ಲಿ ಮುನ್ನಡೆಯುತ್ತಿರುವ ವಿದ್ಯಾಸಂಸ್ಥೆಗಳನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸುತ್ತಿರುವ ಮಹಾಸ್ವಾಮಿಗಳವರು ಇಂದಿನ ಸ್ಪರ್ಧಾತ್ಮಕ ದಿನಮಾನದಲ್ಲಿ ವಿದ್ಯಾರ್ಥಿಗಳ ಪಡೆಯುವ ಅಂಕಗಳು ಅವರ ಮುಂದಿನ ವಿದ್ಯಾರ್ಥಿ ಜೀವನವನ್ನು ನಿರ್ಧರಿಸುತ್ತದೆ ಎಂಬುದನ್ನರಿತು, ಶ್ರೀಮಠದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಿ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಪ್ರತಿವರ್ಷ ಎಸ್. ಎಸ್. ಎಲ್. ಸಿ ಮತ್ತು ಪಿ.ಯು.ಸಿ. ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗೆಡೆ ಹೊಂದುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಅದಕ್ಕಾಗಿಯೇ "ಬಿಜಿಎಸ್ ವಿದ್ಯಾನಿಧಿ" ಯನ್ನು ಪ್ರಾರಂಭಿಸುವ ಮಹಾಸ್ವಾಮಿಗಳವರು ತಮ್ಮ ಪ್ರವಾಸ ಕಾಲದಲ್ಲಿ ಭಕ್ತರು ಸಲ್ಲಿಸುವ ಕಾಣಿಕೆಯನ್ನು “ಬಿಜಿಎಸ್ ವಿದ್ಯಾನಿಧಿ"ಯಲ್ಲಿ ಇರಿಸಿ ಅದರಿಂದ ಬರುವ ಬಡ್ಡಿಯ ಹಣವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಅವರ ಭವಿಷ್ಯದ ವಿದ್ಯಾಭ್ಯಾಸವನ್ನು ಸುಸಂಪನ್ನಗೊಳಿಸುತ್ತಿರುವುದು ಪ್ರತಿಭಾವಂತ ವಿದ್ಯಾರ್ಥಿಗಳ ಸೌಭಾಗ್ಯವಾಗಿದೆ. ಎಸ್. ಎಸ್. ಎಲ್. ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ದರ್ಜೆಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆ ಹೊಂದುವ ವಿದ್ಯಾರ್ಥಿಗಳನ್ನೆಲ್ಲ ಶ್ರೀ ಗುರುಪೂರ್ಣಿಮೆಯಂದು ಶ್ರೀಮಠಕ್ಕೆ ಆಹ್ವಾನಿಸಿ ಶಾಲು ಹೊದಿಸಿ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಿ ಅವರು ಪಡೆದ ಅಂಕಗಳ ಆಧಾರದ ಮೇಲೆ ನಗದು ಪುರಸ್ಕಾರವನ್ನು ನೀಡಿ ಮಕ್ಕಳ ಭವಿಷ್ಯ ಉಜ್ವಲವಾಗುವಂತೆ ಆಶೀರ್ವದಿಸುತ್ತಾರೆ. ಅಂತೆಯೇ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜೊತೆಗೇ ಕೌಶಲ್ಯ ತರಬೇತಿ ನೀಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡುತ್ತಿರುವ ಸ್ವಾಮಿಗಳವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದರ ಜತೆಗೆ ಅವರಿಗೆ ಉದ್ಯೋಗವನ್ನೂ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿವರ್ಷ ಶ್ರೀಮಠದಲ್ಲಿ ಹಾಗೂ ಶಾಖಾ ಮಠಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಯುವಜನರ ಬದುಕನ್ನು ಬೆಳಗುತ್ತಿದ್ದಾರೆ.
ರೈತರಿಗೆ ಸಾಂತ್ವನ - ಭರವಸೆಯ ಬೆಳಕು:
ಪ್ರತಿದಿನವೂ ರೈತಾಪಿ ಜನರ ಒಡನಾಡದಲ್ಲಿರುವ ಶ್ರೀ ಆದಿಚುಂಚನಗಿರಿ ಮಠವು ರೈತರ ಬದುಕನ್ನು ಹಸನುಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಸಲ್ಲಿಸುತ್ತಿದೆ. ಇತ್ತೀಚೆಗೆ ರಾಜಾದ್ಯಂತ ಬೆಳೆನಷ್ಟ, ಬೆಲ ಕುಸಿತ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆಯತ್ತ ಮುಖ ಮಾಡಿರುವ ರೈತ ಸಮುದಾಯದಲ್ಲಿ ಅತ್ಮಸ್ಥೆರ್ಯವನ್ನು ತುಂಬಲು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಶ್ರೀಮಠದ ಎಲ್ಲಾ ಶಾಖಾಮಠಗಳ ಸ್ವಾಮಿಗಳವರೊಡಗೂಡಿ ನಾಡಿನಾದ್ಯಂತ ಪ್ರವಾಸ ಕೈಗೊಂಡು ರೈತರಲ್ಲಿ ಆತ್ಮಸ್ಥೆರ್ಯ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ. ರೈತ ದೇಶದ ಬೆನ್ನೆಲುಬು. ದೇಶ ಬಾಂಧವರೆಲ್ಲರ ಅನ್ನದಾತ. ಆದರೆ ಅನ್ನ ನೀಡುವ ರೈತರೇ ಅತ್ಯಹತ್ಯೆ ಮಾಡಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿ. ಆತ್ಮಹತ್ಯೆ ಮಾಡಿಕೊಳ್ಳುವುದು ಯಾವುದೇ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಇಂತಹ ದುಡುಕಿನ ನಿರ್ಧಾರಗಳು ತಮ್ಮನ್ನೇ ನಂಬಿಕೊಂಡಿರುವ ಕುಟುಂಬ ಸದಸ್ಯರನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸುತ್ತವೆ. ಮಡದಿ, ಮಕ್ಕಳ ಭವಿಷ್ಯದ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ರೈತರು ಯಾವುದೇ ಸಂದರ್ಭದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ಸಂಯಮವಹಿಸಬೇಕು. ರೈತರು ತಮ್ಮ ಸಾಲದ ಸಮಸ್ಯೆ ಇರಬಹುದು ಅಥವಾ ಕೌಟುಂಬಿಕ ಸಮಸ್ಯೆಗಳಿರಬಹುದು, ಆರೋಗ್ಯ, ಉದ್ಯೋಗದ ಸಮಸ್ಯೆ ಇರಬಹುದು. ಯಾರಿಂದಲಾದರೂ ಕಿರುಕುಳ ಅಥವಾ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಇರುವ ತೊಂದರೆಗಳಿರಬಹುದು. ಇಂತಹ ಯಾವುದೇ ಸಮಸ್ಯೆಗಳಿದ್ದರೂ ಶ್ರೀ ಆದಿಚುಂಚನಗಿರಿ ಮಠವನ್ನು ಸಂಪರ್ಕಿಸಿ ತಮ್ಮ ಅಳಲನ್ನು ತೋಡಿಕೊಂಡು ಪರಿಹಾರದ ಮಾರ್ಗವನ್ನು ಕಂಡುಕೊಳ್ಳಬೇಕೆಂದು ಕರೆ ನೀಡಿ ರೈತರಲ್ಲಿ ಆತ್ಮ ಸ್ಥೆರ್ಯವನ್ನು ತುಂಬುವ ಕಾರ್ಯಕ್ರಮವನ್ನು ಮಾಡುತ್ತಿರುವುದು ರೈತಾಪಿ ವರ್ಗದಲ್ಲಿ ಭರವಸೆಯ ಬೆಳಕನ್ನು ಮೂಡಿದಂತಾಗಿದೆ.
ಗ್ರಾಮಗಳ ಭೇಟಿ – ಧರ್ಮ ಜಾಗೃತಿ ಕಾರ್ಯಕ್ರಮಗಳು:
ಪರಮಪೂಜ್ಯ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರು ನಾಡಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುರೂಜಿರವರ ಎಲ್ಲ ಸದಾಶಯಗಳನ್ನು ಸಾಕಾರಗೊಳಿಸಿದ್ದಾರೆ. ಪರಮಪೂಜ್ಯರು ಪ್ರತಿವರ್ಷವೂ ಒಂದು ವಾರಕಾಲ ಒಂದೊಂದು ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ, ಅಲ್ಲಿಯ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತೊಡಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಪೂಜ್ಯರು ಪ್ರತಿ ಮನೆ ಮನೆಗಳ ನಡುವೆ, ಪ್ರತಿ ಗ್ರಾಮ ಗ್ರಾಮಗಳ ನಡುವೆ ಇರುವ ವೈಮನಸ್ಯಗಳನ್ನು ದೂರ ಮಾಡಿ, ಎಲ್ಲರೂ ಸಹಬಾಳ್ವೆಯಿಂದ, ಸೌಹಾರ್ಧತೆಯಿಂದ ಬದುಕುವಂತೆ ಮಾಡುತ್ತಿದ್ದಾರೆ. ಜನರಲ್ಲಿ ಧರ್ಮ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದಾರೆ. ಸ್ವಾಮಿಗಳವರ ಈ ಸಂಕಲ್ಪವನ್ನರಿತ ಜನತೆ ತಮ್ಮ ತಮ್ಮ ಗ್ರಾಮಗಳಿಗೂ ಭೇಟಿ ನೀಡಿ ಜನಮನವನ್ನು ಬೆಸೆಯುವ ಕಾರ್ಯಕ್ರಮವನ್ನು ಕೈಗೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದಾರೆ. ಭಕ್ತರ ಕೋರಿಕೆಯನ್ನು ಮನ್ನಿಸಿ ಮಹಾಸ್ವಾಮಿಗಳವರು ಈಗಾಗಲೇ ಹಾಸನ ಜಿಲ್ಲೆಯ ಬೇಲೂರು, ಅರಸೀಕೆರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕುಗಳಲ್ಲಿ ಪ್ರವಾಸಮಾಡಿ ಜನಮನದ ತಮವ ದೂಡಿ ಅವರನ್ನು ಜಾಗೃತರನ್ನಾಗಿಸುವತ್ತ ಮುನ್ನಡೆದಿದ್ದಾರೆ.
ಜ್ಞಾನ ವಿಜ್ಞಾನ ತಂತ್ರಜ್ಞಾನ ಮೇಳ:
ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಗುರೂಜಿರವರು ನೀಡಿರುವ ಜ್ಞಾನದ ಜೊತೆ ಜೊತೆಯಲ್ಲಿ ವಿಜ್ಞಾನದ ದೀವಿಗೆಯನ್ನು ಬೆಳಗಿಸುವ ನಿಟ್ಟಿನಲ್ಲಿ ತಮ್ಮ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಶುಭ ಸಂದರ್ಭದಲ್ಲಿ ಮೂರು ದಿನಗಳ ಕಾಲ ಶ್ರೀಕ್ಷೇತ್ರದಲ್ಲಿ ಜ್ಞಾನ ವಿಜ್ಞಾನ ತಂತ್ರಜ್ಞಾನ ಸಮ್ಮೇಳನವನ್ನು ಏರ್ಪಡಿಸುವ ಮೂಲಕ ಜ್ಞಾನ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರದಲ್ಲಂತೂ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಸಮ್ಮೇಳನದಲ್ಲಿ 'ಜ್ಞಾನ' ಕ್ಕೆ ಸಂಬಂಧಿಸಿದಂತೆ ನಾಡಿನ ಪ್ರಮುಖ ಮಠ ಮಾನ್ಯಗಳು ಪಾಲ್ಗೊಂಡು ಅಧ್ಯಾತ್ಮಿಕ ಪ್ರಪಪಂಚದ ಉನ್ನತ ವಿಚಾರಧಾರೆಗಳನ್ನು ಜನ ಸಾಮಾನ್ಯರಿಗೆ ನಿಲುಕುವಂತೆ ಪ್ರಾತ್ಯಕ್ಷಿಕೆಗಳ ಮೂಲಕ ಮನದಟ್ಟು ಮಾಡಿದರೆ, ವಿಜ್ಞಾನಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿರುವ ತಂತ್ರಜ್ಞಾನ ಸಂಸ್ಥೆಗಳಾದ ಇಸ್ರೋ, ಟಾಟಾ ಇನ್ಸ್ಟಿಟ್ಯೂಟ್, ಡಿ.ಆರ್. ಡಿ.ಒ, ಎನ್.ಎಲ್ ಮುಂತಾದ ತಂತ್ರಜ್ಞಾನ ಸಂಸ್ಥೆಗಳು ಪಾಲ್ಗೊಂಡು ಜನ ಸಾಮಾನ್ಯರಿಗೆ ವಿಜ್ಞಾನದ ನೂತನ ಆವಿಷ್ಕಾರಗಳು, ಅವುಗಳ ಪ್ರಯೋಜನವನ್ನು ಪ್ರಚಾರ ಪಡಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ. ಇದೇ ಶುಭ ಸಂದರ್ಭದಲ್ಲಿ 'ಜ್ಞಾನ -ವಿಜ್ಞಾನ' ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ "ವಿಜ್ಞಾತಂ" ಪ್ರಶಸ್ತಿ ನೀಡುವ ಯೋಜನೆಯನ್ನು 2016ರಿಂದ ಜಾರಿಗೆ ತಂದಿದ್ದಾರೆ.
ಹುಣ್ಣಿಮೆ ಕಾರ್ಯಕ್ರಮ – ಗಿರಿ ಪ್ರದಕ್ಷಿಣೆ
ಭಾರತೀಯ ಸಂಸ್ಕೃತಿಯಲ್ಲಿ ವರ್ಷದ ಪ್ರತೀ ತಿಂಗಳು ಬರುವ ಪ್ರತಿ ಪೌರ್ಣಮಿಗೂ ಒಂದೊಂದು ವೈಶಿಷ್ಟ್ಯವುಂಟು. ಬೆಳದಿಂಗಳು ವ್ಯಕ್ತಿಯನ್ನು ಆವರಿಸುವ ಅಂಧಕಾರವನ್ನು ಕಳೆಯುವ ಸುಜ್ಞಾನದ ದ್ಯೋತಕವಾಗಿದೆ. ಆ ನಿಟ್ಟಿನಲ್ಲಿ ಪ್ರತಿ ಪೌರ್ಣಮಿಯಂದೂ ಒಬ್ಬೊಬ್ಬ ಪುಣ್ಯಪುರುಷರ ಸ್ಮರಣೆ ಮಾಡುತ್ತೇವೆ. ಪೌರ್ಣಮಿಯಂದೂ ಚಂದಿರನನ್ನು ನಮ್ಮ ಜಾನಪದರು 'ತಿಂಗಳು ಮಾಮ' ಎಂದು ಕರೆದು ಚಂದಿರೊಡನೆ ಮಾನವ ಸಂಬಂಧವನ್ನು ಕಲ್ಪಿಸಿದ್ದಾರೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಪೂರ್ಣಚಂದಿರನ ಬೆಳಕಿನಲ್ಲಿ ಜನತೆ ಭಕ್ತಿಯಿಂದ ಹಾಡುತ್ತಾ ಮೈಮರೆಯುವುದನ್ನು ಕಂಡಿದ್ದೇವೆ. ಭಗವಾನ್ ಬುದ್ಧ ಸಿದ್ದಾರ್ಥನಾಗಿ ಜನಿಸಿದ್ದು, ಮನೆಯನ್ನು ತೊರೆದು ಬುದ್ಧನಾದದ್ದು, ಕೊನೆಗೆ ಲೋಕದಿಂದ ನಿರ್ವಾಣ ಹೊಂದಿದ್ದು – ಈ ಎಲ್ಲವೂ ಹುಣ್ಣಿಮೆಯಂದೇ ನಡೆದಿದ್ದು. ಆದ್ದರಿಂದಲೇ ವೈಶಾಖ ಮಾಸದ ಪೂರ್ಣಿಮೆ ಬುದ್ಧಪೂರ್ಣಿಮೆಯೆಂದೇ ಹೆಸರಾಗಿದೆ. ಕಾಮದಹನದ ಹಿನ್ನಲೆ ಹೊಂದಿರುವ ಹೋಳಿ ಹುಣ್ಣಿಮೆ ಬಗೆಗೆ ಹಲವು ಕಥೆಗಳುಂಟು. ಫೋರ ತಪಸ್ಸಿಗೆ ಕುಳಿತಿದ್ದ ಪರಶಿವನ ಧ್ಯಾನವನ್ನು ಸದುದ್ದೇಶದಿಂದ ಭಂಗ ಮಾಡುವ ದೇವಕಾರ್ಯವೊಂದು ಕಾಮದೇವನ ಪಾಲಿಗೆ ಬಂದಿತು. ಕಾಮದೇವ ಬಿಟ್ಟ ಬಾಣದಿಂದಾಗಿ ತಪೋಭಂಗವಾಗಿ ಚಿತ್ತಚಾಂಚಲ್ಯಗೊಂಡ ಪರಶಿವ ಕೋಪಗೊಂಡು ತನ್ನ ಹಣೆಗಣ್ಣಿನಿಂದ ಕಾಮದೇವನನ್ನು ಸುಟ್ಟು ಹಾಕಿದ ಕಥೆ ಜನಜನಿತ. ಆಷಾಢ ಮಾಸದಲ್ಲಿ ಬರುವ ಪೂರ್ಣಿಮೆಯನ್ನು ವ್ಯಾಸ ಪೂರ್ಣಮೆಯೆಂದೂ, ಶ್ರೀ ಗುರುಪೂರ್ಣಿಮೆಯೆಂದೂ ಕರೆಯುತ್ತೇವೆ. ಭರತಖಂಡದ ಇಡೀ ಸಂತ ಪರಂಪರೆಯ ಪ್ರತಿನಿಧಿಯಂತಿರುವ ವ್ಯಾಸ ಮಹರ್ಷಿಗಳು ಅಪ್ರತಿಮ ಗುರುವೆನಿಸಿದ್ದರು. ಅವರ ಸ್ಮರಣೆಯಲ್ಲಿ ಅಂದು ಶಿಷ್ಯರೆಲ್ಲರೂ ತಮ್ಮ ಗುರುಗಳನ್ನು ಭಕ್ತಿಯಿಂದ ಪೂಜಿಸಿ ಗೌರವಿಸುತ್ತಾರೆ. ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನ, ಅದು ಸೋದರ ಸಂಬಂಧವನ್ನು ಬಲಪಡಿಸುವ ದಿನ. ವಿಶೇಷವಾಗಿ ವೈದಿಕರು ಅಂದು ಉಪಾಕರ್ಮವನ್ನು ನೆರವೇರಿಸುತ್ತಾರೆ. ಅಂದು ವಿಧಿವತ್ತಾಗಿ ಆಚರಿಸಿದರೆ ಅಧ್ಯಯನ ಮಾಡಿದ ವೇದಮಂತ್ರ ಬಲಗೊಳ್ಳುತ್ತದೆ ಎಂದು ನಂಬುತ್ತಾರೆ. ಹೀಗೆ ಪ್ರತಿ ಹುಣ್ಣಿಮೆಯೂ ಒಂದಿಲ್ಲೊಂದು ವೈಶಿಷ್ಟ್ಯತೆಯನ್ನು ಹೊಂದಿವೆ. ಮನುಷ್ಯನ ಮೈ ಮನಸ್ಸುಗಳನ್ನು ಬೆಳಗುವ ದೃಷ್ಟಿಯಿಂದ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಾಗೂ ನಾಡಿನಾದ್ಯಂತ ಇರುವ ಶ್ರೀ ಆದಿಚುಂಚನಗಿರಿ ಶಾಖಾಮಠಗಳಲ್ಲಿ ಪ್ರತಿ ಪೌರ್ಣಮಿಯ ಶುಭ ದಿನದಂದು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಶ್ರೀ ಕ್ಷೇತ್ರ ಆದಿಚುಂಚನಗಿರಿಯು ಪರಶಿವನು ತಪಗೈದ ಪುಣ್ಯಸ್ಥಳ. ಶ್ರೀ ಕಾಲಭೈರವೇಶ್ವರ ಸ್ವಾಮಿ ನೆಲಸಿರುವ ಪವಿತ್ರ ಕ್ಷೇತ್ರ. ಶ್ರೀ ಗಂಗಾಧರೇಶ್ವರ ಸ್ವಾಮಿ, ಶ್ರೀ ಸೋಮೇಶ್ವರ ಸ್ವಾಮಿ, ಶ್ರೀ ಮಲ್ಲೇಶ್ವರಸ್ವಾಮಿ, ಶ್ರೀ ಚಂದ್ರಮೌಳೀಶ್ವರ ಸ್ವಾಮಿ ನೆಲೆಯಾಗಿರುವ ಮಹಿಮಾತೀತ ಕ್ಷೇತ್ರ, ಭಕ್ತರ ಸಂಕಷ್ಟಗಳನ್ನು ನಿವಾರಿಸಲೆಂದೇ ನೆಲೆಸಿರುವ ಸ್ತಂಭಾಂಬಿಕೆ ಮತ್ತು ಮಾಳವ್ವದೇವಿ ಇರುವ ದಿವ್ಯ ಕ್ಷೇತ್ರ. ಹೀಗೆ ಹಲವು ಮಂದಿ ದೇವತೆಗಳ ವಾಸಸ್ಥಾನವಾಗಿರುವ ಈ ಗಿರಿಯನ್ನು ಪ್ರದಕ್ಷಿಣೆ ಮಾಡುವುದೆಂದರೆ ದೇವಾನುದೇವತೆಗಳನ್ನೆಲ್ಲ ಪ್ರದಕ್ಷಿಣೆ ಮಾಡಿದ ಫಲ ದೊರೆಯುತ್ತದೆಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಆದರೆ ಗಿರಿ ಕಂದರಗಳಿಂದಲೂ, ಬಂಡೆ ಹೆಬ್ಬಂಡೆಗಳಿಂದಲೂ, ಗಿಡಗಂಟಿಗಳಿಂದಲೂ ಆವೃತವಾಗಿರುವ ಈ ಗಿರಿಯನ್ನು ಸಾಮಾನ್ಯ ಭಕ್ತರು ಪ್ರದಕ್ಷಿಣೆ ಮಾಡಲು ಕಷ್ಟಸಾಧ್ಯವಾಗಿತ್ತು. ಇದನ್ನರಿತ ಪರಮಪೂಜ್ಯ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಶ್ರೀಗಿರಿಯನ್ನು ಸಾಮಾನ್ಯ ಭಕ್ತರು ಪ್ರದಕ್ಷಿಣೆ ಮಾಡಲು ಅನುಕೂಲವಾಗುವಂತೆ ಗಿರಿಯ ಸುತ್ತಲೂ ಸುಮಾರು ಮೂರು ಕಿ.ಮೀ. ಗೂ ಹೆಚ್ಚು ವಿಸ್ತೀರ್ಣದ ರಸ್ತೆಯನ್ನು ನಿರ್ಮಾಣ ಮಾಡಿಸಿದ್ದಾರೆ. 2014 ರಿಂದ ಪ್ರತಿ ಪೌರ್ಣಮಿಯ ದಿನ ಸಂಜೆಯ ಪ್ರದೋಷ ಕಾಲದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ಮತ್ತು ಶ್ರೀ ಮಾಳಮ್ಮ ದೇವಿ, ಪರಮಪೂಜ್ಯ ಗುರೂಜಿರವರ ಪ್ರತಿಮೆಯ ಸರ್ವಾಲಂಕೃತ ರಥದ ಉತ್ಸವದೊಡನೆ ಪರಮಪೂಜ್ಯ ಜಗದ್ಗುರು ಮಹಾಸ್ವಾಮಿಗಳವರ ನೇತೃತ್ವದಲ್ಲಿ ಗಿರಿ ಪ್ರದಕ್ಷಿಣೆ ನಡೆಯುತ್ತದೆ. ಪ್ರದಕ್ಷಿಣೆಯುದ್ದಕ್ಕೂ ಭಕ್ತರು ಶ್ರೀ ಕ್ಷೇತ್ರಾದಿ ದೇವತೆಗಳನ್ನು ಕುರಿತ ಭಕ್ತಿಗೀತೆಗಳನ್ನು ಹಾಡುತ್ತಾ, ಭಜನೆ ಮಾಡುತ್ತಾ, ಗುರುಗಳಿಗೆ ಜಯಘೋಷಗಳನ್ನು ಕೂಗೂತ್ತಾ ಮುಂದೆ ಸಾಗುತ್ತಾರೆ. ಶ್ರೀಗಿರಿಯ ಸುತ್ತ ನಿರ್ಮಾಣಗೊಂಡಿರುವ ರಸ್ತೆಯಲ್ಲಿ ಶ್ರೀ ಕಣಿವೆ ಆಂಜನೇಯಸ್ವಾಮಿ, ಕೂಗುಬಂಡೆ, ಹಾಗೂ ನಾಗರಕಲ್ಲು ಮಾರ್ಗವಾಗಿ ಗಿರಿಪ್ರದಕ್ಷಿಣೆಯನ್ನು ಮಾಡಿದ ನಂತರ ಮೆರವಣಿಗೆ ರಥವೀದಿಯ ಮೂಲಕ ಶ್ರೀ ಸನ್ನಿದಿಯನ್ನು ತಲುಪುತ್ತದೆ. ಈ ಗಿರಿಪ್ರದಕ್ಷಿಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮೇಲೆ ಪ್ರತಿ ಪೌರ್ಣಮಿಯ ದಿನ ಸಾವಿರಾರು ಮಂದಿ, ಭಕ್ತರು ಶ್ರೀಕ್ಷೇತ್ರಕ್ಕಾಗಮಿಸಿ ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಣ್ಯಭಾಜನರಾಗುತ್ತಿದ್ದಾರೆ.
ಜ್ಞಾನಾಂಕುರ ಕಾರ್ಯಕ್ರಮ
ಭಾರತದ ದೇಶದ ಆಚಾರ ವಿಚಾರ ಹಾಗೂ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಗುರು ಹಿರಿಯರು ಹಾಗೂ ಪೋಷಕರು ಗೌರವಿಸುವ ಸನಾತನ ಸಂಸ್ಕೃತಿಯನ್ನು ಮಕ್ಕಳಲ್ಲಿ. ಮೈಗೂಡಿಸಬೇಕಿದೆ. ಹಿಂದಿನ ಕಾಲದಲ್ಲಿ ಗುರುಕುಲ ಹಾಗೂ ಆಶ್ರಮಗಳ ಮೂಲಕ ಮಕ್ಕಳ ಪ್ರತಿಭೆಗೆ ತಕ್ಕ ವಿದ್ಯೆಯನ್ನು ನೀಡಿ ಅವರು ನಿರ್ದಿಷ್ಟವಾದ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದುವಂತೆ ಮಾಡಲಾಗುತ್ತಿತ್ತು. ಅದೇ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಪರಮಪೂಜ್ಯ ಮಹಾಸ್ವಾಮಿಗಳವರು ಶ್ರೀ ಕ್ಷೇತ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುವ ಜ್ಞಾನಾಂಕುರ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಈ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನಡೆದರೆ, ಶಾಖಾಮಠಗಳಲ್ಲಿ ಶಾಲೆಗಳು ಪ್ರಾರಂಭವಾಗುವ ದಿನಗಳಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮಹಾಸ್ವಾಮಿಗಳವರು ಪ್ರತೀ ಮಕ್ಕಳ ಕೈಹಿಡಿದು ಓಂಕಾರವನ್ನು ಬರೆಸುವ ಮೂಲಕ ಅಕ್ಷರಾಭ್ಯಾಸಕ್ಕೆ ಮುನ್ನುಡಿ ಬರೆಯುತ್ತಾರೆ. ಪ್ರತಿ ವರ್ಷ ನವರಾತ್ರಿ ಮಹೋತ್ಸವದ ಶುಭ ಸಂದರ್ಭದಲ್ಲಿ ಸುಮಾರು ಐದುನೂರಕ್ಕೂ ಹೆಚ್ಚು ಮಕ್ಕಳನ್ನು ಪೋಷಕರು ಕರೆತಂದು ಪರಮಪೂಜ್ಯರಿಂದ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಧನ್ಯತಾಭಾವ ಹೊಂದುತ್ತಿದ್ದಾರೆ.
ಚುಂಚಾದ್ರಿ ಕಲೋತ್ಸವ
ಶಿಕ್ಷಣ ಎಂಬುದು ಪಾಠ ಪ್ರವಚನಗಳಿಗೆ ಅಥವಾ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ ಪ್ರಮಾಣ ಪತ್ರ ಪಡೆಯುವುದಕ್ಕಷ್ಟೆ ಸೀಮಿತವಾಗಬಾರದು. ವಿದ್ಯಾರ್ಥಿಗಳ ಸುಪ್ತ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದು ನಿಜವಾದ ಶಿಕ್ಷಣ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಶೈಕ್ಷಣಿಕ ಸೌಲಭ್ಯಗಳು ದೊರಕಿದರೆ ಅವರು ಎಲ್ಲರೊಡನೆ ಸ್ಪರ್ಧಿಸಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಪೂಜ್ಯಸ್ವಾಮಿಗಳವರು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಿಕ್ಷಣ ಜೊತೆಗೆ ಅವರಲ್ಲಿ ಜೀವನ ಮೌಲ್ಯಗಳನ್ನು ಮೈಗೂಡಿಸಲು ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಪ್ರತಿ ವರ್ಷ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷ ಚುಂಚಾದ್ರಿ ಕಲೋತ್ಸವ' ಎಂಬ ಸಾಂಸ್ಕೃತಿಕೋತ್ಸವವನ್ನು ಏರ್ಪಡಿಸಿ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಪುರಸ್ಕರಿಸುವ ವ್ಯವಸ್ಥೆ ಮಾಡಿದ್ದಾರೆ. ತನ್ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭ್ಯುದಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಭಗವತ್ ಚಿಂತನ ಸಾಧಾ ಶಿಬಿರ:
ಮುಮುಕ್ಷುಗಳಾದವರಿಗೆ ಅಧ್ಯಾತ್ಮ ವಿದ್ಯೆ ಹಾಗೂ ಆಧ್ಯಾತ್ಮಿಕ ಜ್ಞಾನ ಅತ್ಯಗತ್ಯ. ಮನುಷ್ಯ ಮೊದಲು ತನ್ನನ್ನು ತಾನು ಅರಿಯಬೇಕು. ಅಂತೆಯೇ ತನ್ನ ತಪ್ಪನ್ನು ಮೊದಲು ತಿದ್ದಿಕೊಳ್ಳಬೇಕು. ಜ್ಞಾನ ಸಂಪಾದನೆ ಮಾಡುವ ಜೊತೆಗೆ ಹೃದಯ ವೈಶಾಲ್ಯತೆ ಹೊಂದಬೇಕು. ಅದಕ್ಕಾಗಿ ಅವರಿಗೆ ವಿಶೇಷ ಉಪನ್ಯಾಸ ಪ್ರವಚನಗಳ ಅಗತ್ಯವಿರುವುದನ್ನು ಮನಗಂಡು ಪೂಜ್ಯ ಗುರೂಜಿರವರು ಮುಮುಕ್ಷುಗಳಿಗಾಗಿಯೇ ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷ ಭಗವತ್ ಚಿಂತನ ಸಾಧನಾ ಶಿಬಿರಗಳನ್ನು ಏರ್ಪಡಿಸುವುದನ್ನು 2010 ರಲ್ಲಿ ಜಾರಿಗೆ ತಂದರು.ಈ ಯೋಜನೆಯನ್ನು ಇಂದು ಮತ್ತಷ್ಟು ವಿಸ್ತರಿಸಿರುವ ಪೂಜ್ಯ ಮಹಾಸ್ವಾಮಿಗಳವರು ಈ ಶಿಬಿರವನ್ನು ಒಂದು ತಿಂಗಳು ಕಾಲ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿವರ್ಷ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ 100 ಕ್ಕೂ ಹೆಚ್ಚು ಮಂದಿ ಸಾಧಕರು, ಸಾಧು ಮಹಾತ್ಮರು, ಬ್ರಹ್ಮಚಾರಿಗಳು, ಮುಮುಕ್ಷಗಳು ತರಬೇತಿಯನ್ನು ಪಡೆದು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಉಚಿತ ಸಾಮೂಹಿಕ ವಿವಾಹ ಮಹೋತ್ಸವ:
ಇಂದಿನ ಆಧುನಿಕತೆಯ ಅಬ್ಬರದಲ್ಲಿ ಬಡ ಜನತೆ ತಮ್ಮ ಮಕ್ಕಳ ವಿವಾಹವನ್ನು ಮಾಡುವ ಸಲುವಾಗಿ ಸಾಲ ಸೋಲ ಮಾಡಿಕೊಂಡು ನಂತರದ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಪರಮಪೂಜ್ಯ ಗುರೂಜಿರವರು, ಕಳೆದ ಒಂದು ದಶಕಗಳಿಂದಲೂ ಪ್ರತಿವರ್ಷ ಶಿವಮೊಗ್ಗ ಶಾಖಾಮಠದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವನ್ನು ಹಮ್ಮಿಕೊಳ್ಳುತ್ತಿದ್ದರು. ಈ ಕಾರ್ಯಕ್ರಮವನ್ನು ಮತ್ತಷ್ಟು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಪರಮಪೂಜ್ಯ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸುವ ಮೂಲಕ ಪರಮಪೂಜ್ಯ ಗುರೂಜಿಯವರ ಈ ಆಶಯವನ್ನು ದೊಡ್ಡ ಪ್ರಮಾಣದಲ್ಲಿ ಈಡೇರಿಸುವ ಸಂಕಲ್ಪವನ್ನು ಮಾಡಿ 2014 ರಿಂದ ಆ ಪುಣ್ಯಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಪರಮಪೂಜ್ಯ ಮಹಾಸ್ವಾಮಿಗಳವರು ನೂತನ ವಧೂ ವರರಿಗೆ ಮಾಂಗಲ್ಯ, ಹೊಸ ವಸ್ತ್ರಗಳನ್ನು ನೀಡಿ ಆಶೀರ್ವದಿಸುತ್ತಾರೆ. ಇದೇ ಸಂದರ್ಭದಲ್ಲಿ ಅರವತ್ತು ವರ್ಷ ಆದರ್ಶ ದಾಂಪತ್ಯ ಜೀವನ ಪೂರೈಸಿರುವ ಹಿರಿಯ ದಂಪತಿಗಳಿಗೆ ಷಷ್ಠಿಪೂರ್ತಿ ಮಹೋತ್ಸವವನ್ನು ಮಾಡಿ ಸನ್ಯಾನಿಸುವ ಸ್ವಾಮಿಗಳವರು ಈ ದಂಪತಿಗಳಿಗೆಲ್ಲ ಶಾಲು ಹೊದಿಸಿ, ಪೇಟವನ್ನು ಧರಿಸಿ, ಹೂ ಮಾಲೆ ತೊಡಿಸಿ ಆಶೀರ್ವದಿಸುವುದು ಹಿರಿಯ ದಂಪತಿಗಳಲ್ಲಿ ಕೃತಾರ್ಥ ಭಾವವನ್ನು ಮೂಡಿಸಿದರೆ, ನವ ವಧೂ-ವರರಿಗೆ ಹಿರಿಯರಂತೆ ತಾವೂ ಆದರ್ಶ ಜೀವನವನ್ನು ನಡೆಸಬೇಕು ಎಂಬ ಪ್ರೇರಣೆ ನೀಡುತ್ತಿದ್ದಾರೆ.
ನವನಾಥ ಮಂದಿರದ ನಿರ್ಮಾಣ:
ಶ್ರೀ ಆದಿಚುಂಚನಗಿರಿ ಕ್ಷೇತ್ರವು ಪರಶಿವನ ತಪಸ್ಸಿನಿಂದ ಆಧ್ಯಾತ್ಮಿಕ ತರಂಗಗಳನ್ನು ಏಳಿಸಿ ಪುನೀತವಾಗಿರುವ ಪುಣ್ಯಕ್ಷೇತ್ರ. ಶ್ರೀ ಗುರು ಗೋರಖನಾಥರು ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಂದು ಪರಶಿವನು ತಪಸ್ಸು ಮಾಡಿದ ಜ್ವಾಲಾಪೀಠದ ಸ್ಥಳದಲ್ಲಿಯೇ ಕುಳಿತು ತಪಸ್ಸು ಮಾಡಿ ಸಿದ್ದಿಯನ್ನು ಪಡೆದು ಹೊರಟಿದ್ದು ಇಂದು ಇತಿಹಾಸದ ಭಾಗವಾಗಿದೆ. ಅಂದಿನಿಂದಲೂ ಶ್ರೀ ಮಠವು ನಾಥ ಪಂಥದ ಪ್ರಮುಖ ಪೀಠವಾಗಿ ಗುರುತಿಸಿಕೊಂಡಿರುವುದು ಸರ್ವವೇದ್ಯ ಸಂಗತಿ. ಗೋರಖನಾಥ ಮತ್ತು ಮತೇಂದ್ರನಾಥರು ನಾಥ ಪಂಥದ ಸ್ಥಾಪಕರು. ನಾಥ ಪರಂಪರೆಯಲ್ಲಿ ಒಂಬತ್ತು ಮಂದಿ ನವನಾಥರು ಧರ್ಮ ಸಂಸ್ಥಾಪನಾರ್ಥವಾಗಿ ಇಳೆಯಲ್ಲಿ ಅವತರಿಸಿದ್ದರೆಂಬುದು ಪುರಾಣೇತಿಹಾಸದಿಂದ ತಿಳಿದು ಬರುತ್ತದೆ. ಶ್ರೀ ಮತ್ತೇಂದ್ರನಾಥರು, ಶ್ರೀ ಗೋರಕ್ಷನಾಥರು, ಶ್ರೀ ಜಾಲಂದರನಾಥರು, ಶ್ರೀ ಕಾನಿಫಾನಾಥರು, ಶ್ರೀ ಚರ್ಪಟನಾಥರು, ಶ್ರೀ ನಾಗನಾಥರು, ಶ್ರೀ ಭರ್ತಲನಾಥರು, ಶ್ರೀ ರೇವಣನಾಥರು, ಶ್ರೀ ಗಹಿನೀನಾಥರು ಇವರೇ ಇಳೆಯ ಮೇಲೆ ನವನಾಥರೆಂದು ಅವತರಿಸಿ ಧರ್ಮ ಸಂಸ್ಥಾಪನಾ ಕಾರ್ಯಗಳನ್ನು ನೆರವೇರಿಸಿ ಪ್ರಸಿದ್ದರಾದವರು. ಇಂದಿಗೂ ಶ್ರೀ ಆದಿಚುಂಚನಗಿರಿಯ ಗುರುಗಳು ಹಾಗೂ ಗುರುಬಾಯಿಗಳೆಲ್ಲರ ಹೆಸರಿನಲ್ಲಿಯೂ 'ನಾಥ' ಇರುವುದನ್ನು ಗಮನಿಸಬಹುದು. ನಾಥ ಪರಂಪರೆಯ ಪುಣ್ಯಕ್ಷೇತ್ರವಾಗಿರುವ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಧರ್ಮ ಸಂಸ್ಥಾಪನೆಗಾಗಿ ಇಳೆಯ ಮೇಲೆ ಅವತರಿಸಿದ ನವನಾಥರಿಗಾಗಿ ಮಂದಿರವೊಂದನ್ನು ನಿರ್ಮಿಸಬೇಕೆಂಬುದು ಪೂಜ್ಯ ಗುರೂಜಿರವರ ಸತ್ಸಂಕಲ್ಪವಾಗಿತ್ತು. ಗುರೂಜಿರವರ ಆ ಸತ್ಸಂಕಲ್ಪವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಸಾಕಾರಗೊಳಿಸಿದ್ದು, ಶ್ರೀ ಕ್ಷೇತ್ರದಲ್ಲಿ ಹತ್ತು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ 'ನವನಾಥ ಮಂದಿರ'ವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದಾರೆ..
ಈ ಎಲ್ಲಾ ಸೇವಾ ಸಾಧನೆಯ ಹಿಂದೆ ಪರಮಪೂಜ್ಯ ಗುರೂಜಿಯವರ ಧೀ:ಶಕ್ತಿಯ ಸ್ಪರ್ಶವಿದೆ ಎಂಬುದನ್ನು ಪರಮಪೂಜ್ಯ ಮಹಾಸ್ವಾಮಿಗಳವರು ಸದಾ ಸ್ಮರಿಸುತ್ತಾರೆ. ಮಹಾಸ್ವಾಮಿಗಳವರು ಶ್ರೀ ಮಠದ ಪೀಠಾಧ್ಯಕ್ಷರಾಗಿ ಕೇವಲ ಮೂರೂವರೆ ವರ್ಷ ತುಂಬುವ ಮೊದಲೇ ಮೈಸೂರು ವಿಶ್ವ ವಿದ್ಯಾಲಯವು ತನ್ನ ಶತಮಾನೋತ್ಸವ ಘಟಿಕೋತ್ಸವವ ಶುಭ ಸಂದರ್ಭದಲ್ಲಿ ಪರಮಪೂಜ್ಯರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿರುವುದು ಪರಮಪೂಜ್ಯರ ಸೇವಾಕೈಂಕರ್ಯದ ವೇಗಕ್ಕೊಂದು ಸಾಕ್ಷಿ ಹಾಗೂ ಅವರ ಸೇವಾ ಸಾಧನೆಯ ಮುಕುಟಕ್ಕೊಂದು ಸುವರ್ಣ ಮಾಲೆ ತೊಡಿಸಿದಂತಾಗಿದೆ.
ಹೀಗೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ಸಾಧಿಸುತ್ತಿರುವ ಬಹುಶ್ರುತ ಸೇವಾ ಕೈಂಕರ್ಯಗಳು, ಜಾತಿ, ಮತ, ಧರ್ಮಗಳಿಗೆ ಹೊರತಾದ ಮಾನವೀಯ ನೆಲೆಗಟ್ಟಿನಲ್ಲಿ ರೂಪಿತಗೊಂಡಿದ್ದು ಇಡೀ ಲೋಕ ಕಲ್ಯಾಣದಲ್ಲಿ ಕೈಗೊಂಡಿರುವ ಅನುಕರಣೀಯ ಆದರ್ಶಕಾರ್ಯಗಳಾಗಿವೆ.
ಅಸಂಖ್ಯಾತ ಬಡ ಮಕ್ಕಳಿಗೆ ಆಧುನಿಕ ಜನತ್ತಿನ ಆಗುಹೋಗುಗಳ ಅಪೂರ್ವ ಗವಾಕ್ಷವನ್ನೇ ತೆರೆದಿಟ್ಟಿರುವ ಪರಮಪೂಜ್ಯರ ಶೈಕ್ಷಣಿಕ ಆಸಕ್ತಿಯು ಅಳತೆ ಅಲೋಚನೆಗಳಿಗೆ ಅತೀತವಾದುದಾಗಿದೆ. ಸ್ವಾಮಿಗಳವರು ಧರ್ಮ ಸಂಸ್ಕೃತಿಯ ಜೊತೆ ಜೊತೆಯಲ್ಲಿ ಶಿಕ್ಷಣ, ಅಭಿವೃದ್ಧಿ, ಪರಿಸರ ಸಂರಕ್ಷಣೆ, ಗೋಸಂರಕ್ಷಣೆ, ಬಡಜನತೆಯ ಆರೋಗ್ಯ ರಕ್ಷಣೆ, ಜನಪದ ಕಲಾಸಂಪ್ರದಾಯಗಳ ರಕ್ಷಣೆ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಒತ್ತು, ಯುವಜನತೆಗೆ ನೈತಿಕ ಶಿಕ್ಷಣ ನೀಡುವುದು... ಹೀಗೆ ಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಶ್ರೀವಾಣಿ: ವ್ಯಕ್ತಿ ಎಷ್ಟೇ ಬಲಶಾಲಿಯಾದರೂ ದೌರ್ಬಲ್ಯ ಮೂಡಿದಲ್ಲಿ ಏನನ್ನೂ ಸಾಧಿಸಲಾರ. ಪ್ರಯತ್ನಶೀಲನಾದಾಗ ಮಾತ್ರ ಉದ್ದಿಷ್ಟ ಗುರಿಯನ್ನು ಮುಟ್ಟಲು ಸಾಧ್ಯ...! ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ.
ಇಂದು, ನಾಳೆ ವಿಜ್ಞಾತಂ ಉತ್ಸವ:
ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಫೆ. 19 ಮತ್ತು 20ರಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬಿ.ಜಿ. ನಗರದಲ್ಲಿರುವ ಆದಿಚುಂಚನಗಿರಿ ಕ್ಷೇತ್ರದಲ್ಲಿ ವಿಜ್ಞಾತಂ ಉತ್ಸವ-2025 ನಡೆಯಲಿದೆ. ಉತ್ಸವದ ಅಂಗವಾಗಿ ವಸ್ತು ಪ್ರದರ್ಶನ, ವಿಶೇಷ ಉಪನ್ಯಾಸಗಳು, ರಸಪ್ರಶ್ನೆ, ನೃತ್ಯೋತ್ಸವ ನಡೆಯಲಿವೆ. ಸಚಿವರಾದ ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ್, ವಿಜ್ಞಾನಿ ಡಾ. ಗೌತಮ್ ರಾಧಾಕೃಷ್ಣ ದೇಶಿರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬುಧವಾರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಗುರುವಾರ ಡಾ. ನಿರ್ಮಲಾನಂದನಾಥ ಸ್ವಾಮೀಜಿ ವಾರ್ಷಿಕ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಇದೇ ವೇಳೆ 8ನೇ ವಿಜ್ಞಾತಂ ಪ್ರಶಸ್ತಿಯನ್ನು ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಶರತ್ ಬಚ್ಚೇಗೌಡ ಪಾಲ್ಗೊಳ್ಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.