Rekha Gupta Delhi CM : ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ಭಾರತೀಯ ಜನತಾ ಪಾರ್ಟಿ ಆಯ್ಕೆ ಮಾಡಿದೆ. ಮೊದಲ ಬಾರಿಗೆ ಶಾಸಕಿಯಾದ ರೇಖಾ ಅವರಿಗೆ ಸಿಎಂ ಸ್ಥಾನ ಒಲಿದಿದೆ. ರಾಜಕೀಯದಲ್ಲಿ ಸುದೀರ್ಘ ಅನುಭವ ಹೊಂದಿರುವ ಇವರು ಪರ್ವೇಶ್ ವರ್ಮಾ ಸೇರಿದಂತೆ ಇತರ ಪ್ರಮುಖ ಮುಖಗಳನ್ನು ಮೀರಿ ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ..
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 41 ವರ್ಷದ ರೇಖಾ ಗುಪ್ತಾ ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಿಂದ ಸುಮಾರು 30,000 ಮತಗಳ ಅಂತರದಿಂದ ಗೆದ್ದರು. "ಕಾಮ್ ಹಿ ಪೆಹಚಾನ್" (ನನ್ನ ಕೆಲಸವೇ ನನ್ನ ಗುರುತು) ಎಂಬ ಟ್ಯಾಗ್‌ಲೈನ್ ಮೂಲಕ ಚುನಾವಣಾ ಅಖಾಡಕ್ಕಿಳಿದಿದ್ದ ರೇಖಾ ಭರ್ಜರಿ ಗೆಲುವು ಸಾಧಿಸಿದ್ದರು.
ಮೂರು ಬಾರಿ ಕೌನ್ಸಿಲರ್ ಆಗಿದ್ದ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯೊಂದಿಗೆ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಗುಪ್ತಾ ಅವರನ್ನು ಆಯ್ಕೆ ಮೂಲಕ, ಬಿಜೆಪಿ ತನ್ನ ಪರಂಪರೆಯನ್ನು ಭದ್ರಪಡಿಸಿಕೊಳ್ಳಲು ಮತ್ತು ಮಹಿಳಾ ಮತದಾರರಿಗೆ ಸಂದೇಶವನ್ನು ರವಾನಿಸಲು ಮಂದಾಗಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ ಮತ್ತು ಜಿತೇಂದ್ರ ಮಹಾಜನ್ ಅವರು ಸಿಎಂ ರೇಸ್‌ನಲ್ಲಿದ್ದರು ಎಂಬುವುದು ಗಮನಾರ್ಹ..
ರೇಖಾ ಗುಪ್ತಾ ರಾಜಕೀಯ ಹಿನ್ನೆಲೆ : ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಚುನಾವಣೆಯೊಂದಿಗೆ ರೇಖಾ ಗುಪ್ತಾ ರಾಜಕೀಯಕ್ಕೆ ಕಾಲಿಟ್ಟರು. ಮೂರು ಬಾರಿ ಕೌನ್ಸಿಲರ್ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ನ ಮಾಜಿ ಮೇಯರ್ ಆಗಿದ್ದರು. 2022 ರಲ್ಲಿ ಅವರನ್ನು AAP ಯ ಶೆಲ್ಲಿ ಒಬೆರಾಯ್ ವಿರುದ್ಧ MCD ಮೇಯರ್ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿತು.
ಅಷ್ಟೇ ಅಲ್ಲದೆ, ರೇಖಾ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಮತ್ತು ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಗುಪ್ತಾ ದೌಲತ್ ರಾಮ್ ಕಾಲೇಜಿನಿಂದ ಪದವಿ ಪಡೆದರು ಮತ್ತು 1996-97ರ ಅವಧಿಯಲ್ಲಿ DUSU ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2007 ರಲ್ಲಿ ಮೊದಲು ಉತ್ತರ ಪಿತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾದರು.
ಆಯ್ಕೆ ಮಾಡಲು ಕಾರಣವೇನು? : ರೇಖಾ ಗುಪ್ತಾ ಅವರನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ, ಬಿಜೆಪಿ ಮಹಿಳಾ ಮುಖ್ಯಮಂತ್ರಿಗಳ ಪರಂಪರೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರ 15 ವರ್ಷಗಳ ಆಡಳಿತವೂ ಸೇರಿದಂತೆ ದೆಹಲಿಯು ಹಲವಾರು ಮಹಿಳಾ ಮುಖ್ಯಮಂತ್ರಿಗಳನ್ನು ಕಂಡಿದೆ. ಎಎಪಿಯ ಅತಿಶಿ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ಸಹ ದೆಹಲಿ ಸಿಎಂ ಆಗಿದ್ದರು.
ಕಲ್ಕಾಜಿಯ ಶಾಸಕಿ ಅತಿಶಿ ಅವರು ಐದು ತಿಂಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಸೆಪ್ಟೆಂಬರ್ 2024 ರಲ್ಲಿ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲಾಯಿತು. ಅಕ್ಟೋಬರ್ 12, 1998 ರಿಂದ ಡಿಸೆಂಬರ್ 3, 1998 ರವರೆಗೆ ಸುಷ್ಮಾ ಸ್ವರಾಜ್ ದೆಹಲಿ ಮುಖ್ಯಮಂತ್ರಿಯಾಗಿದ್ದರು.
ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ಚುನಾವಣಾ ರಾಜಕೀಯ ಮತ್ತು ನೀತಿಗಳಲ್ಲಿ ಮಹಿಳೆಯರಿಗೆ ಬಿಜೆಪಿ ನೀಡುವ ಆದ್ಯತೆಗೆ ಅನುಗುಣವಾಗಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಂಬತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಅದರಲ್ಲಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಗೆದ್ದರು.
2025 ರ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮತ ಚಲಾಯಿಸಿದರು. ಮಹಿಳಾ ಮತದಾರರು 60.92% ರಷ್ಟಿದ್ದರೆ, ಪುರುಷರು 60.21% ರಷ್ಟಿದ್ದರು. ಮಹಿಳಾ ಮತದಾರರನ್ನು ಅವಲಂಬಿಸಿದ್ದ ಎಎಪಿ ಹೀನಾಯವಾಗಿ ಸೋತರೆ, ಬಿಜೆಪಿ ನಿರ್ಣಾಯಕವಾಗಿ ಗೆದ್ದು 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗಳಿಸಿತು.
ಮಹಿಳೆಯರನ್ನು ಮತದಾರರಾಗಿ ಬಳಸಿಕೊಳ್ಳುವತ್ತ ಗಮನಹರಿಸುವ ನಿಟ್ಟಿನಲ್ಲಿ, ಬಿಜೆಪಿ ತನ್ನ ದೆಹಲಿ ಚುನಾವಣಾ ಪ್ರಣಾಳಿಕೆಯಲ್ಲಿ ದೊಡ್ಡ ಭರವಸೆಗಳನ್ನು ನೀಡಿತು. ಎಎಪಿಯ 2,100 ರೂ. ಮಹಿಳೆಯರಿಗೆ ಆರ್ಥಿಕ ಸಹಾಯ ಯೋಜನೆಗೆ ಸಮಾನವಾಗಿ ಬಿಜೆಪಿ, ಮಹಿಳಾ ಸಮೃದ್ಧಿ ಯೋಜನೆಯಡಿ ಮಾಸಿಕ 2,500 ರೂ.ಗಳ ಆರ್ಥಿಕ ಸಹಾಯವನ್ನು ನೀಡುವುದಾಗಿ ಘೋಷಿಸಿತು. ಇದಲ್ಲದೆ, ಉಚಿತ ಬಸ್ ಪ್ರಯಾಣದಂತಹ ಮಹಿಳಾ ಕಲ್ಯಾಣ ಯೋಜನೆಗಳನ್ನು ಈಡೇರಿಸುವ ಭರವಸೆ ನೀಡಿತು.
ಆಯುಷ್ಮಾನ್ ಭಾರತ್ ಯೋಜನೆಯಡಿ ದೆಹಲಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಗರ್ಭಕಂಠ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ತಪಾಸಣೆಯೊಂದಿಗೆ, ಪ್ರತಿ ಗರ್ಭಿಣಿ ಮಹಿಳೆಗೆ 21,000 ರೂ. ಮತ್ತು ಆರು ಪೌಷ್ಠಿಕಾಂಶ ಕಿಟ್‌ಗಳನ್ನು ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.
ದೆಹಲಿ ಬಿಜೆಪಿ ನಾಯಕರಾದ ರಮೇಶ್ ಬಿಧುರಿ ಮತ್ತು ಪರ್ವೇಶ್ ವರ್ಮಾ ಅವರಂತಹ ನಾಯಕರಿಗಿಂತ ಭಿನ್ನವಾಗಿ, ರೇಖಾ ಗುಪ್ತಾ ಯಾವುದೇ ಪ್ರಮುಖ ವಿವಾದಗಳನ್ನು ಕಂಡಿಲ್ಲ. ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಅವರು ಹೊಸ ಮುಖವೂ ಹೌದು.. ದೆಹಲಿಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಹೊಸ ಮುಖವಾಗಿ ಇದೀಗ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ರೇಖಾ ಗುಪ್ತಾ ಒಬ್ಬ ರಾಜಕೀಯ ಅನುಭವಿ. ಪಕ್ಷದ ಶ್ರೇಣಿಗಳಲ್ಲಿ ಉನ್ನತಿ ಸಾಧಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿಯಲ್ಲಿಯೇ ಇದ್ದು ಕೆಲಸ ಮಾಡಿದ್ದಾರೆ.. ಇದೀಗ ಅವರನ್ನು ದೆಹಲಿ ಮುಖ್ಯಮಂತ್ರಿಯಾಗಿ ನೇಮಿಸುವ ಮೂಲಕ, ಬಿಜೆಪಿ ವಿವಾದಾತ್ಮಕವಲ್ಲದ ರಾಜಕಾರಣಿಯನ್ನು ಮಾತ್ರವಲ್ಲದೆ, ಮಹಿಳಾ ನಾಯಕಿ ಮತ್ತು ಹೊಸ ಮುಖವನ್ನೂ ಸಹ ಆರಿಸಿಕೊಂಡಿದೆ.