ಟಿಯಂಜಿನ್: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇವಿಸ್ ಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಡಬಲ್ಸ್ ಗೆದ್ದ ಹಿರಿಮೆಗೆ ಶನಿವಾರ ಪಾತ್ರವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ರೋಹನ್ ಭೋಪಣ್ಣ ಜೊತೆಯಾಗಿ 43ನೇ ಡಬಲ್ಸ್ ಗೆಲುವು ಸಾಧಿಸಿ ದಾಖಲೆ ಮಾಡಿದ್ದಲ್ಲದೆ, ಟೈ ಆಗಿದ್ದ ಪಂದ್ಯದಲ್ಲಿ ಚೀನಾ ವಿರುದ್ಧದ ಸೆಣಸಾಟಕ್ಕೆ ಮತ್ತೆ ಭಾರತವನ್ನು ಮರಳಿ ತಂದುಕೊಟ್ಟರು.
ಎಐಟಿಎ ಒತ್ತಾಯದ ಮೇರೆಗೆ ಬೋಪಣ್ಣ ಜತೆಗೂಡಿ ಆಟವಾಡಿದ 44ರ ಹರೆಯದ ಪೇಸ್, ಚೀನದ ಜೋಡಿ ಮೋ ಕ್ಸಿನ್ ಗಾಂಗ್ ಮತ್ತು ಝಿ ಝಾಂಗ್ ವಿರುದ್ಧದ ಪಂದ್ಯದಲ್ಲಿ 5-7, 7-6(5), 7-6(3) ಸೆಟ್ಗಳ ಅಂತರದಲ್ಲಿ ವಿಜಯ ಸಾಧಿಸಿದರು. ಈ ಮೂಲಕ ಏಶ್ಯ/ಒಸಾನಿಯಾ ಗ್ರೂಪ್ 1 ಟೈಯಲ್ಲಿ ಡಬಲ್ಸ್ ರಬ್ಬರ್ ಸಂಪಾದಿಸಿದರು.
"ಚೀನಾದ ವಿರುದ್ಧ ಆಡುವುದು ಕಠಿಣವಾಗಿದೆ. ಏಕೆಂದರೆ ಅವರು ಯುಎಸ್ ಓಪನ್ ಗೆದ್ದ ಕಿರಿಯ ಆಟಗಾರರನ್ನು ತಂಡಕ್ಕೆ ಪಡೆದಿದ್ದಾರೆ. ಭಾರತಕ್ಕೆ 29 ವರ್ಷಗಳ ಬಳಿಕ ವಿಶ್ವ ದಾಖಲೆಗಾಗಿ ಬರೆದಿರುವುದು ಅದ್ಭುತ ಸಂಗತಿ. ಹಾಗೇ ನಾನು ಭಾರತ ತಂಡಕ್ಕೆ ಮರಳಿರುವುದು ಬಹಳ ಖುಷಿ ತಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತ ತಂಡ ಈ ಸರಣಿಯಲ್ಲಿ ಗೆಲುವು ಸಾಧಿಸುವುದು ನನಗೆ ಮುಖ್ಯವಾಗಿದೆ" ಎಂದು ಪೇಸ್ ತಿಳಿಸಿದ್ದಾರೆ.