ಭಾರತದ 2024ರ ಮಧ್ಯಂತರ ಬಜೆಟ್‌ನಲ್ಲಿ ಬಾಹ್ಯಾಕಾಶ ವಲಯಕ್ಕೆ ಏನೇನಿದೆ?

ತನ್ನ ಬಜೆಟ್ ಭಾಷಣದ ಸಂದರ್ಭದಲ್ಲಿ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಿದ್ದು, ಮುಂದಿನ ಐವತ್ತು ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲವನ್ನು ಒದಗಿಸುವ ಭರವಸೆ ನೀಡಿದ್ದಾರೆ. 

Written by - Girish Linganna | Last Updated : Feb 2, 2024, 12:35 PM IST
  • ಬಾಹ್ಯಾಕಾಶ ಇಲಾಖೆಗೆ 2024-25ರ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ 4%ದಷ್ಟು ಸಣ್ಣ ಪ್ರಮಾಣದ ಹೆಚ್ಚುವರಿ ಮೊತ್ತವನ್ನು ಒದಗಿಸಲಾಗಿದೆ.
  • ಕಳೆದ ಬಾರಿ 12,545 ಕೋಟಿ ರೂಪಾಯಿಗಳಿದ್ದ ಬಾಹ್ಯಾಕಾಶ ಬಜೆಟ್, ಈ ಬಾರಿ 13,043 ಕೋಟಿ ರೂಪಾಯಿಗಳಾಗಿದೆ.
ಭಾರತದ 2024ರ ಮಧ್ಯಂತರ ಬಜೆಟ್‌ನಲ್ಲಿ ಬಾಹ್ಯಾಕಾಶ ವಲಯಕ್ಕೆ ಏನೇನಿದೆ? title=

Budget 2024: ಈ ವರ್ಷ, ಭಾರತದ ಬಾಹ್ಯಾಕಾಶ ವಲಯ ಅತ್ಯಂತ ದೊಡ್ಡ ಮಟ್ಟದ ಯೋಜನೆಗಳನ್ನೇನೂ ಹಾಕಿಕೊಂಡಿಲ್ಲ. ಭಾರತದ ಬಾಹ್ಯಾಕಾಶ ಬಜೆಟ್‌ನಲ್ಲಿ ಕೇವಲ 4% ಹೆಚ್ಚಳವಾಗಿರುವುದು ಇದನ್ನು ವಿವರಿಸುತ್ತದೆ. ಆದರೆ, ಬಾಹ್ಯಾಕಾಶ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲು ಒಂದು ಲಕ್ಷ ಕೋಟಿ ರೂಪಾಯಿಗಳ ನೂತನ ನಿಧಿ ಒದಗಿಸಲಾಗಿದ್ದು, ಇದರಿಂದ 200ಕ್ಕೂ ಹೆಚ್ಚು ಬಾಹ್ಯಾಕಾಶ ಹಾರಾಟ ಸ್ಟಾರ್ಟಪ್‌ಗಳಿಗೆ ಉತ್ತೇಜನ ದೊರಕಲಿದೆ.

2024ರಲ್ಲಿ ಇನ್ನೂ ಯಾವುದೇ ಮಹತ್ವದ ಬಾಹ್ಯಾಕಾಶ ಯೋಜನೆಗಳನ್ನು ಉದ್ದೇಶಿಸಲಾಗಿರದ ಕಾರಣ, ಬಾಹ್ಯಾಕಾಶ ಇಲಾಖೆಗೆ 2024-25ರ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ 4%ದಷ್ಟು ಸಣ್ಣ ಪ್ರಮಾಣದ ಹೆಚ್ಚುವರಿ ಮೊತ್ತವನ್ನು ಒದಗಿಸಲಾಗಿದೆ. ಕಳೆದ ಬಾರಿ 12,545 ಕೋಟಿ ರೂಪಾಯಿಗಳಿದ್ದ ಬಾಹ್ಯಾಕಾಶ ಬಜೆಟ್, ಈ ಬಾರಿ 13,043 ಕೋಟಿ ರೂಪಾಯಿಗಳಾಗಿದೆ. ಈ ವರ್ಷದಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಇತರ ಯೋಜನೆಗಳ ಜೊತೆಗೆ, ಚಂದ್ರ ಅನ್ವೇಷಣಾ ಸಿದ್ಧತೆ (ಚಂದ್ರಯಾನ) ಮತ್ತು ಮಾನವ ಸಹಿತ ಬಾಹ್ಯಾಕಾಶ ಯಾತ್ರೆ (ಗಗನಯಾನ) ಯೋಜನೆಗಳ ಸಿದ್ಧತೆಗೆ ಹೆಚ್ಚಿನ ಗಮನ ನೀಡಲಿದ್ದು, ಉಡಾವಣಾ ಪೂರ್ವ ಪರೀಕ್ಷೆಗಳು ಮತ್ತು ಇತರ ಪ್ರಮುಖ ಮೈಲಿಗಲ್ಲುಗಳನ್ನು ಸ್ಥಾಪಿಸುವ ಪ್ರಯತ್ನ ನಡೆಸಲಾಗುತ್ತದೆ.

2023ರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ನಡೆಸಿತು. ಅದರೊಡನೆ, ಇಸ್ರೋ ಸೂರ್ಯನ ವೀಕ್ಷಣೆ ನಡೆಸುವ ಆದಿತ್ಯ ಎಲ್1 ಯೋಜನೆಯನ್ನು ಕೈಗೆತ್ತಿಕೊಂಡಿತು. ಇದಾದ ಬಳಿಕ, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಕಪ್ಪುಕುಳಿಗಳನ್ನು ಅಧ್ಯಯನ ನಡೆಸುವ ಎಕ್ಸ್‌ಪೋಸ್ಯಾಟ್ (ಎಕ್ಸ್‌ರೇ ಪೋಲಾರಿಮೆಟ್ರಿ ಸ್ಯಾಟಲೈಟ್) ಯೋಜನೆಯನ್ನು ಉಡಾವಣೆಗೊಳಿಸಿತು. ಇದಲ್ಲದೆ, ಭಾರತ 2025ರ ವೇಳೆಗೆ ಚಂದ್ರನ ಮೇಲೆ ಮಾನವರನ್ನು ಕಳುಹಿಸುವ ಗುರಿ ಹೊಂದಿರುವ ಅಮೆರಿಕಾದ ಆರ್ಟೆಮಿಸ್ ಅಕಾರ್ಡ್‌ಗೆ ಸಹಿ ಹಾಕಿತು.

2024ರಲ್ಲಿ ನಿಯೋಜನೆಗೊಂಡಿರುವ ಪ್ರಮುಖ ಉಡಾವಣೆಗಳಲ್ಲಿ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಮಾನವ ರಹಿತ ಹಾರಾಟ ಪರೀಕ್ಷೆ, ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್ಎಸ್ಎಲ್‌ವಿ) ಮೂರನೇ ಪರೀಕ್ಷಾರ್ಥ ಉಡಾವಣೆ, ಹಾಗೂ ಜಂಟಿ ಯೋಜನೆಯಾದ ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಯೋಜನೆಗಳು ಸೇರಿವೆ. ಅದರೊಡನೆ, ಇಸ್ರೋ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಪ್ರೊಪೆಲ್ಲೆಂಟ್‌ಗಳು, ಉಪಗ್ರಹ ಪ್ರೊಪಲ್ಷನ್ ತಂತ್ರಜ್ಞಾನಗಳು, ನೂತನ ಉಡಾವಣಾ ವಾಹನಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆಸುತ್ತಿದ್ದು, ಈ ತಂತ್ರಜ್ಞಾನಗಳನ್ನು ಬಾಹ್ಯಾಕಾಶ ಉದ್ಯಮಕ್ಕೆ ವರ್ಗಾವಣೆ ನಡೆಸಲು ಉದ್ದೇಶಿಸಿದೆ.

ತನ್ನ ಬಜೆಟ್ ಭಾಷಣದ ಸಂದರ್ಭದಲ್ಲಿ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಿದ್ದು, ಮುಂದಿನ ಐವತ್ತು ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲವನ್ನು ಒದಗಿಸುವ ಭರವಸೆ ನೀಡಿದ್ದಾರೆ. ಈ ಯೋಜನೆಗಳ ಕುರಿತು ಪೂರ್ಣ ಮಾಹಿತಿಗಳು ಇನ್ನೂ ಲಭ್ಯವಿಲ್ಲದಿದ್ದರೂ, ಬಹುತೇಕ 200 ಸ್ಟಾರ್ಟಪ್ ಸಂಸ್ಥೆಗಳು ಸೇರಿದಂತೆ, ಭಾರತದಲ್ಲಿ ಬೆಳೆಯುತ್ತಿರುವ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಇದರಿಂದ ಅಪಾರ ಪ್ರಮಾಣದಲ್ಲಿ ಹಣಕಾಸಿನ ನೆರವು ಲಭಿಸಲಿದೆ. ಅದರೊಡನೆ, ಬಾಹ್ಯಾಕಾಶ ಉದ್ಯಮವನ್ನು ನಿರ್ವಹಿಸುವ ಸಲುವಾಗಿ, 2020ರಲ್ಲಿ ಆರಂಭಿಸಿದ ಕೇಂದ್ರೀಯ ಸಂಸ್ಥೆಯಾದ ಇನ್-ಸ್ಪೇಸ್‌ಗೆ (IN-SPACe) 24% ಹೆಚ್ಚುವರಿ ಖರ್ಚಿಗೆ ಹಣಕಾಸಿನ ಸೌಲಭ್ಯ ಲಭಿಸಿದೆ.

ಗಗನಯಾನ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಮತ್ತು ನೂತನ ಉಡಾವಣಾ ವಾಹನಗಳ ಅಭಿವೃದ್ಧಿ, ಹಾಗೂ ಇತರ ಬಾಹ್ಯಾಕಾಶ ಉಡಾವಣಾ ಯೋಜನೆಗಳು ಸೇರಿದಂತೆ, ಬಾಹ್ಯಾಕಾಶ ತಂತ್ರಜ್ಞಾನ ಯೋಜನೆಗಳಿಗೆ ಹಣಕಾಸಿನ ನೆರವು 27% ಹೆಚ್ಚಳ ಕಂಡಿದೆ. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಇಂತಹ ನಿರ್ದಿಷ್ಟ ಬಾಹ್ಯಾಕಾಶ ಪ್ರಯತ್ನಗಳಿಗೆ ಹೆಚ್ಚಿನ ಆರ್ಥಿಕ ನೆರವು ಲಭಿಸುತ್ತಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News