ಆಗಸ್ಟ್ 12ರಂದು, ಭಾರತದ ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿನ ಒಂದು ಕುಟುಂಬದ ಸದಸ್ಯರು ಮನೆಯಲ್ಲಿ ಜೊತೆಯಾಗಿ ಫೋಟೋ ತೆಗೆಸಿಕೊಂಡರು. ಆ ಛಾಯಾಚಿತ್ರ ತೆಗೆದ ಬಳಿಕ, ಭೂಪೇಂದ್ರ ವಿಶ್ವಕರ್ಮ ಎಂಬ ವ್ಯಕ್ತಿ ತನ್ನ ಎಂಟು ಮತ್ತು ಮೂರು ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿಗೆ ವಿಷ ಬೆರೆಸಿದ ಪಾನೀಯ ನೀಡಿದರು. ಅದಾದ ಬಳಿಕ, ಭೂಪೇಂದ್ರ ವಿಶ್ವಕರ್ಮ ಮತ್ತು ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.
35 ವರ್ಷ ವಯಸ್ಸಿನ ಭೂಪೇಂದ್ರ ವಿಶ್ವಕರ್ಮ ಒಂದು ವಿಮಾ ಕಂಪೆನಿಯ ಉದ್ಯೋಗಿಯಾಗಿದ್ದರು. ಸಾವಿಗೂ ಮುನ್ನ ನಾಲ್ಕು ಪುಟಗಳ ಆತ್ಮಹತ್ಯಾ ಪತ್ರ ಬರೆದ ವಿಶ್ವಕರ್ಮ, ತಾನು ಸಾಲ ನೀಡುವ ಆ್ಯಪ್ಗಳು ನೀಡುವ ಸಾಲದ ಸುಳಿಯಲ್ಲಿ ಸಿಲುಕಿರುವುದಾಗಿ ಬರೆದಿದ್ದರು. ಅವರು ಕಳೆದ ಹಲವು ತಿಂಗಳುಗಳಿಂದ ಸಾಲ ವಸೂಲಾತಿ ಏಜೆಂಟ್ಗಳು ನಿರಂತರವಾಗಿ ಹಿಂಸೆ ಮಾಡುತ್ತಿದ್ದಾರೆ ಎಂದಿದ್ದು, ಅವರು ಕಳುಹಿಸಿರುವ ಕೊನೆಯ ಸಂದೇಶ ತನ್ನನ್ನು ಇಂತಹ ನಿರ್ಧಾರ ಕೈಗೊಳ್ಳುವ ಹಂತಕ್ಕೆ ತಳ್ಳಿದೆ ಎಂದಿದ್ದಾರೆ.
ಆ ಸಂದೇಶದಲ್ಲಿ, "ಅವನಿಗೆ ಸಾಲವನ್ನು ಬೇಗ ಮರುಪಾವತಿ ಮಾಡಲು ಹೇಳು. ಇಲ್ಲವಾದರೆ, ಇವತ್ತು ಸಾಮಾಜಿಕ ಜಾಲತಾಣದಲ್ಲಿ ಅವನ ಬೆತ್ತಲೆ ಚಿತ್ರಗಳನ್ನು ಹಂಚಿಕೊಳ್ಳುತ್ತೇನೆ" ಎಂದು ಎಚ್ಚರಿಕೆ ನೀಡಿತ್ತು.
ತಾನು ಪ್ರಾಣ ಕಳೆದುಕೊಳ್ಳುವ ಮುನ್ನ ಬರೆದಿರುವ ಆತ್ಮಹತ್ಯಾ ಪತ್ರದಲ್ಲಿ, ಭೂಪೇಂದ್ರ ವಿಶ್ವಕರ್ಮ "ನಾನು ಈಗ ನನ್ನ ಕೆಲಸ ಕಳೆದುಕೊಳ್ಳುವ ಹಂತದಲ್ಲಿದ್ದೇನೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಒಂದು ಉತ್ತಮ ಭವಿಷ್ಯ ಕಾಣಿಸುತ್ತಿಲ್ಲ. ನನಗೆ ಈಗ ಯಾರಿಗಾದರೂ ಮುಖ ತೋರಿಸಲೂ ನಾಚಿಕೆಯಾಗುತ್ತಿದೆ. ನಾನು ನನ್ನ ಕುಟುಂಬವನ್ನು ಹೇಗೆ ಎದುರಿಸಲಿ?" ಎಂದು ಬರೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಳು ಮುಂದುವರಿದಿವೆ.
ದುರದೃಷ್ಟವಶಾತ್, ಭೂಪೇಂದ್ರ ವಿಶ್ವಕರ್ಮ ಅವರ ಪರಿಸ್ಥಿತಿ ಏನೂ ವಿರಳವಾದುದಲ್ಲ. ದೆಹಲಿಯಲ್ಲಿ ಸ್ವಾಗತಕಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ, 23 ವರ್ಷದ ಶಿವಾನಿ ರಾವತ್ ಅವರು ಇದೇ ರೀತಿಯ ಸಂಕಷ್ಟವನ್ನು ಎದುರಿಸಿದ್ದಾರೆ. ಜೂನ್ 2023ರಲ್ಲಿ, ಶಿವಾನಿ ತನ್ನ ಸಂಬಳ ಬರುವುದು ತಡವಾದ ಕಾರಣ, 'ಕ್ರೆಡಿಟ್ ಬೆ (Kreditbe)' ಎಂಬ ಆ್ಯಪ್ ಮೂಲಕ 4,000 ರೂಪಾಯಿ ಸಾಲ ಪಡೆದುಕೊಂಡಿದ್ದರು. ಅವರ ಸಾಲದ ಅರ್ಜಿ ಇನ್ನೂ ವಿಲೇವಾರಿಗೆ ಬಾಕಿ ಇದ್ದುದರಿಂದ, ಶಿವಾನಿ ರಾವತ್ ಅವರಿಗೆ ಯಾವುದೇ ಸಾಲ ದೊರೆತಿರಲಿಲ್ಲ. ವಿಚಿತ್ರ ಬೆಳವಣಿಗೆಯಲ್ಲಿ, ಅದಾದ ಒಂದು ವಾರದೊಳಗೇ, ಆಕೆಗೆ ಪ್ರತಿದಿನವೂ 10-15 ದೂರವಾಣಿ ಕರೆಗಳು ಬರತೊಡಗಿದವು. 9,000 ರೂಪಾಯಿ ಮರುಪಾವತಿ ಮಾಡುವಂತೆ ಒತ್ತಡ ಹೇರತೊಡಗಿದರು.
ಶಿವಾನಿ ರಾವತ್ ಸಾಲ ವಸೂಲಾತಿ ಏಜೆಂಟ್ಗಳ ಬಳಿ ತನ್ನ ಖಾತೆಗೆ ಯಾವುದೇ ಹಣ ಬಂದಿಲ್ಲ ಎಂದು ಹೇಳಿದ್ದಕ್ಕೆ, ಅವರಿಗೆ ಏಜೆಂಟ್ಗಳು ಕೆಟ್ಟ ಕೆಟ್ಟ ಮಾತುಗಳಲ್ಲಿ ಬೈಯತೊಡಗಿದರು. ಆಕೆ ಅವರ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಬಳಿಕ, ಅವರು ಆಕೆಗೆ ಕೆಟ್ಟ ಕೆಟ್ಟ ಭಾಷೆಯಲ್ಲಿ ಸಂದೇಶಗಳನ್ನು ಕಳುಹಿಸತೊಡಗಿದರು.
ಆಗಸ್ಟ್ ತಿಂಗಳಲ್ಲಿ, ಆಕೆಯ ಸಹೋದ್ಯೋಗಿಗಳಿಗೆ ಶಿವಾನಿ ಮತ್ತು ಆಕೆಯ ಕುಟುಂಬಸ್ಥರ ಎಡಿಟ್ ಮಾಡಿರುವ, ಅನುಚಿತ ಚಿತ್ರಗಳನ್ನು ಕ್ರೆಡಿಟ್ ಬೆ ಸಿಬ್ಬಂದಿಗಳು ಕಳುಹಿಸತೊಡಗಿದರು. ಶಿವಾನಿ ತನ್ನ ಸಹೋದ್ಯೋಗಿಗಳಿಗೆ ಅದು ತಾನಲ್ಲ ಎಂದು ವಿವರಣೆ ನೀಡಲು ಪ್ರಯತ್ನಿಸಿದರು. ಆದರೆ, ಮರುದಿನ ಆಕೆಯ ಮ್ಯಾನೇಜರ್ ಶಿವಾನಿ ಕಚೇರಿಯಲ್ಲಿರುವುದು ಇತರ ಸಿಬ್ಬಂದಿಗಳಿಗೆ ಕಷ್ಟವಾಗುವಂತೆ ಮಾಡುತ್ತದೆ ಎಂದು ಕಾರಣ ನೀಡಿ, ರಾಜೀನಾಮೆ ನೀಡುವಂತೆ ಸೂಚಿಸಿದ್ದರು.
"ನಾನು ಕೆಲಸ ಕಳೆದುಕೊಂಡ ಬಳಿಕ ನಾನು ತುಂಬಾ ದುಃಖಿತಳಾಗಿದ್ದೆ. ನಾನು ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದ್ದೆ" ಎಂದು ರಾವತ್ ಒಪ್ಪಿಕೊಂಡಿದ್ದರು.
ಮಾಧ್ಯಮಗಳು ಕ್ರೆಡಿಟ್ ಬೆ ಸಂಸ್ಥೆಯ ಹೇಳಿಕೆ ಪಡೆಯಲು ಪ್ರಯತ್ನ ನಡೆಸಿದಾಗ, ಆ ಸಂಸ್ಥೆಯ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಲಿಲ್ಲ. ಶಿವಾನಿ ರಾವತ್ ಅವರಿಗೆ ಕರೆ ಮಾಡುತ್ತಿದ್ದ ಕ್ರೆಡಿಟ್ ಬೆ ಪ್ರತಿನಿಧಿಗಳು ಯಾರೂ ಸಂಪರ್ಕಕ್ಕೆ ಲಭ್ಯರಿರಲಿಲ್ಲ.
ಈ ಕ್ರೆಡಿಟ್ ಬೆ (Kreditbe) ಎಂಬ ಹೆಸರೂ ಸಹ ಒಂದು ನೈಜ ಸಾಲ ಆ್ಯಪ್ ಆಗಿರುವ ಕ್ರೆಡಿಟ್ ಬೀ (KreditBee) ಎಂಬುದರ ಯಥಾವತ್ ನಕಲಿಯಾಗಿದೆ. ಇದು ಅಕ್ರಮ ಸಾಲ ಆ್ಯಪ್ಗಳು ಅನುಸರಿಸುವ ಸಾಮಾನ್ಯ ತಂತ್ರವಾಗಿದ್ದು, ಅವರು ಈಗಾಗಲೇ ಜನಪ್ರಿಯವಾಗಿರುವ ಸಂಸ್ಥೆಗಳನ್ನು ಹೋಲುವ ನಕಲಿ ಹೆಸರುಗಳನ್ನು ಆರಿಸಿಕೊಳ್ಳುತ್ತಾರೆ. ಆ ಮೂಲಕ ತಾವು ನೈಜ ಸಾಲ ಸಂಸ್ಥೆಗಳು ಎಂಬ ಭಾವನೆಯನ್ನೂ ಮೂಡಿಸುತ್ತಾರೆ.
ಭೂಪೇಂದ್ರ ವಿಶ್ವಕರ್ಮ ಮತ್ತು ಶಿವಾನಿ ರಾವತ್ ಇಬ್ಬರೂ ಇಂತಹ ಮೊಬೈಲ್ ಸಾಲ ಆ್ಯಪ್ಗಳ ಮೂಲಕ ಸಾಲ ಪಡೆದುಕೊಂಡಿದ್ದರು. ಈ ಆ್ಯಪ್ಗಳು ಸುಲಭವಾಗಿ, ಸಾಂಪ್ರದಾಯಿಕ ಬ್ಯಾಂಕ್ ಸಾಲಗಳ ರೀತಿ ಯಾವುದೇ ದಾಖಲಾತಿ ಪತ್ರಗಳಿಲ್ಲದೆ, ಸುದೀರ್ಘ ಪ್ರಕ್ರಿಯೆಯಿಲ್ಲದೆ ಸಾಲ ಒದಗಿಸುತ್ತವೆ. ಬ್ಯಾಂಕ್ಗಳು ಸಾಲ ತೆಗೆದುಕೊಳ್ಳುವವರ ಇತ್ಯೋಪರಿಗಳನ್ನು ವಿಚಾರಿಸಿ, ಬಳಿಕವಷ್ಟೇ ಅವರಿಗೆ ಸಾಲ ನೀಡುವುದರಿಂದ, ಇದಕ್ಕೆ ಐದರಿಂದ ಏಳು ದಿನಗಳು ತಗಲುತ್ತವೆ. ಆದರೆ ಈ ರೀತಿಯ ಮೊಬೈಲ್ ಆ್ಯಪ್ಗಳು ಅದಾವುದರ ಅಗತ್ಯವೂ ಇಲ್ಲದೆ, ಕ್ಷಿಪ್ರವಾಗಿ ಸಾಲ ಪಡೆದುಕೊಳ್ಳುವವರ ಖಾತೆಗೆ ಹಣವನ್ನು ಜಮಾ ಮಾಡುತ್ತವೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಹಲವು ಉದ್ಯಮಗಳು ಮುಚ್ಚಿಹೋದ ಕಾರಣದಿಂದ, ಮತ್ತು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಿಸಲು ಸಾಧ್ಯವಾಗದ್ದರಿಂದ, ಬಹಳಷ್ಟು ಜನ ಕೆಲದ ಕಳೆದುಕೊಂಡು, ಆರ್ಥಿಕ ಸವಾಲುಗಳನ್ನು ಎದುರಿಸತೊಡಗಿದರು. ಆ ಸಂದರ್ಭದಲ್ಲಿ, ಇಂತಹ ಆ್ಯಪ್ಗಳ ಬಳಕೆ ಹೆಚ್ಚಾಗತೊಡಗಿತು.
ಸಾಮಾನ್ಯವಾಗಿ ಇಂತಹ ಆ್ಯಪ್ಗಳು 10,000 ರೂಪಾಯಿಗಳಿಂದ 25,000 ರೂಪಾಯಿಗಳ ತನಕ ಸಾಲ ನೀಡುತ್ತವೆ. ಇವುಗಳ ತಿಂಗಳ ಬಡ್ಡಿ ದರ 20%ದಿಂದ 30% ತನಕ ಇರುತ್ತವೆ. ಅದರೊಡನೆ, ಸಂಸ್ಕರಣಾ ಶುಲ್ಕವೂ ಸಹ 15%ದಷ್ಟು ಇರುತ್ತದೆ.
ಸಾಮಾನ್ಯವಾಗಿ, ಲೋನ್ ಆ್ಯಪ್ ಪ್ರತಿನಿಧಿಗಳು ಸಾಲ ಮಂಜೂರಾದ 15 ದಿನಗಳ ಬಳಿಕ ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸುತ್ತವೆ. ಆದರೆ, ಹಲವು ಉದಾಹರಣೆಗಳಲ್ಲಿ, ಅವುಗಳು ಸಾಲ ನೀಡಿದ ಕೇವಲ ನಾಲ್ಕರಿಂದ ಆರು ದಿನಗಳ ಒಳಗಾಗಿ ಸಾಲ ಪಡೆದುಕೊಂಡ ವ್ಯಕ್ತಿಗಳಿಗೆ ತೊಂದರೆ ನೀಡಲು ಆರಂಭಿಸಿದ್ದವು. ಇನ್ನು ಶಿವಾನಿ ರಾವತ್ ಪ್ರಕರಣದಲ್ಲಂತೂ ಆಕೆಗೆ ಸಾಲ ಲಭ್ಯವಾಗುವ ಮುನ್ನವೇ ವಸೂಲಾತಿ ಪ್ರಕ್ರಿಯೆ ಆರಂಭಗೊಂಡಿತ್ತು!
ಭೋಪಾಲ್ನಲ್ಲಿ ಸೈಬರ್ ಸೆಕ್ಯುರಿಟಿ ತಜ್ಞರಾಗಿರುವ ಅಕ್ಷಯ್ ಬಾಜ್ಪಾಯ್ ಅವರ ಪ್ರಕಾರ, ಭಾರತದಲ್ಲಿ ಪ್ರಸ್ತುತ 700ಕ್ಕೂ ಹೆಚ್ಚು ಸಾಲ ನೀಡುವ ಆ್ಯಪ್ಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಹಲವು ಆ್ಯಪ್ಗಳು ಭಾರತೀಯ ಮೂಲದವಾಗಿದ್ದರೆ, ಬಹುತೇಕ ಆ್ಯಪ್ಗಳು ಚೀನೀ ಮಾಲಿಕತ್ವದಲ್ಲಿದ್ದು, ತಮ್ಮ ಕಾರ್ಯಾಚರಣೆಗೆ ಭಾರತೀಯರನ್ನು ಬಳಸಿಕೊಳ್ಳುತ್ತಿವೆ.
ಇವುಗಳಲ್ಲಿ ಹಲವು ಆ್ಯಪ್ಗಳು ನೇರವಾಗಿ ವಂಚನೆಯಲ್ಲಿ ತೊಡಗಿಸಿಕೊಂಡಿದ್ದು, ತೀರಾ ಸಾಲದ ಅವಶ್ಯಕತೆ ಹೊಂದಿರುವವರಿಗೆ ಆಸೆ ತೋರಿಸಿ, ಕ್ಷಿಪ್ರವಾಗಿ ಸಾಲ ನೀಡುವುದಾಗಿ ಆಮಿಷ ಒಡ್ಡಿ, ಅದಕ್ಕೆ ಪೂರ್ವಭಾವಿ ಶುಲ್ಕ ಪಡೆದುಕೊಂಡು, ಮಾಯವಾಗಿಬಿಡುತ್ತವೆ. ಇನ್ನುಳಿದ ಆ್ಯಪ್ಗಳೂ ಅನುಮಾನಾಸ್ಪದವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಣ ವಸೂಲಿ ಮಾಡಲು ದುರುದ್ದೇಶಪೂರಿತ ತಂತ್ರಗಳನ್ನು ಬಳಸಿಕೊಂಡು, ಆನ್ಲೈನ್ ಸಾಲ ನೀಡುವ ಕುರಿತು, ವಾರ್ಷಿಕ ಬಡ್ಡಿ ದರ ಮತ್ತು ವಿವಿಧ ಶುಲ್ಕಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಬ್ಯಾಂಕಿನ ನಿಯಮಾವಳಿಗಳನ್ನೂ ಮೂಲೆಗುಂಪು ಮಾಡುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈಗಾಗಲೇ ಸ್ಪಷ್ಟವಾಗಿ ಸಾಲ ನೀಡುವ ಸಂಸ್ಥೆಗಳು ಗ್ರಾಹಕರ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳಂತಹ ಕನಿಷ್ಠ ಮಾಹಿತಿಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಮಾಹಿತಿಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ ಎಂದು ಸೂಚಿಸಿದೆ. ಆದರೆ ಕೆಲವು ಅಕ್ರಮ ಆ್ಯಪ್ಗಳು ಬಳಕೆದಾರರ ಫೋನ್ನಲ್ಲಿರುವ ಸಂಪರ್ಕ ಸಂಖ್ಯೆಗಳು, ಛಾಯಾಚಿತ್ರಗಳನ್ನು ಅನುಮತಿಯಿಲ್ಲದೆ ಬಳಸಿಕೊಳ್ಳುತ್ತವೆ. ಅವುಗಳು ಈ ಛಾಯಾಚಿತ್ರಗಳನ್ನು ದುರುಪಯೋಗ ಪಡಿಸಿಕೊಂಡು, ಸಾಲ ಪಡೆದುಕೊಂಡವರನ್ನು ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನಿಸುತ್ತವೆ.
ಕ್ಲೌಡ್ ಸೆಕ್ ಎಂಬ ಸೈಬರ್ ಸೆಕ್ಯುರಿಟಿ ಸಾಫ್ಟ್ವೇರ್ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ, ಅದರ ತಜ್ಞರು ಜುಲೈ 22, 2023 ಮತ್ತು ಸೆಪ್ಟೆಂಬರ್ 18, 2023ರ ನಡುವೆ ವ್ಯಕ್ತಿಗಳನ್ನು ವೈಯಕ್ತಿಕವಾಗಿ ಗುರಿಯಾಗಿಸುವ 55 ವಂಚಕ ಲೋನ್ ಆ್ಯಪ್ಗಳನ್ನು ಗುರುತಿಸಿವೆ. ಅದಲ್ಲದೆ, ಅವರು 15ಕ್ಕೂ ಹೆಚ್ಚು ಅಪರಿಚಿತವಾದ, ಚೈನೀಸ್ ಮೂಲದ ಹಣ ಪಾವತಿ ಗೇಟ್ವೇಗಳನ್ನು ಗುರುತಿಸಿದ್ದು, ಅವುಗಳು ತಾವು ಗುರುತಿಸಿಕೊಳ್ಳದಂತೆ ತಡೆಯಲು ಈ ಕ್ರಮಗಳನ್ನು ಕೈಗೊಳ್ಳುತ್ತವೆ.
ಚೀನೀ ಸಾಲದ ಆ್ಯಪ್ಗಳು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಮತ್ತು ಕೆಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಇದೇ ಕಾರ್ಯತಂತ್ರವನ್ನು ಅನುಸರಿಸುತ್ತಿವೆ. ಸೈಬರ್ ಸುರಕ್ಷತೆ ಮತ್ತು ವಂಚನೆಗಳ ಕುರಿತು ಕಡಿಮೆ ಅರಿವು ಹೊಂದಿರುವ ಜನರಿರುವ ಪ್ರದೇಶಗಳಲ್ಲಿ ಬಳಕೆದಾರರು ಇಂತಹ ಹಾನಿಕಾರಕ ಚಟುವಟಿಕೆಗಳಲ್ಲಿ ಸುಲಭ ಗುರಿಯಾಗಿರುತ್ತಾರೆ.
"ಮೋಸಗಾರರು ತಮ್ಮ ಬಲಿಪಶುಗಳಲ್ಲಿ ವಿವಿಧ ರೀತಿಯ ತಂತ್ರಗಳನ್ನು ಬಳಸಿ ಭಯ ಮೂಡಿಸುತ್ತಾರೆ. ಆರಂಭದಲ್ಲಿ, ಅವರು ಬಳಕೆದಾರರ ಸಂಪರ್ಕ ಸಂಖ್ಯೆಗಳನ್ನು ಪಡೆದುಕೊಂಡು, ಕರೆಗಳನ್ನು ಮಾಡುತ್ತಾರೆ. ಒಂದು ವೇಳೆ ಬಳಕೆದಾರರು ಇದಕ್ಕೆ ಹೆದರದಿದ್ದರೆ, ಅವರು ಗ್ರಾಹಕರ ಫೋನ್ನಲ್ಲಿರುವ ಫೋಟೋ ಗ್ಯಾಲರಿಯನ್ನು ತೆರೆದು, ಫೋಟೋಗಳನ್ನು ದುರ್ಬಳಕೆ ಮಾಡುವಂತೆ ಎಡಿಟ್ ಮಾಡಿ, ಅವರಿಗೆ ಮರಳಿ ಕಳುಹಿಸುತ್ತಾರೆ" ಎಂದು ಪ್ರವೀಣ್ ಕಲೈಸೆಲ್ವನ್ ಅವರು ಮಾಹಿತಿ ನೀಡಿದ್ದಾರೆ. ಕಲೈಸೆಲ್ವನ್ ಅವರು ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಸೇವ್ ದೆಮ್ ಇಂಡಿಯಾ ಎಂಬ ಎನ್ಜಿಓದ ಸ್ಥಾಪಕರಾಗಿದ್ದಾರೆ.
"ಇಂತಹ ಘಟನೆಗಳು ಬಳಕೆದಾರರಲ್ಲಿ ದಿಗಿಲು ಮೂಡಿಸುತ್ತವೆ. ಇದರ ಪರಿಣಾಮವಾಗಿ ಅವರು ಈ ವಂಚಕರು ಕೇಳಿದಷ್ಟು ಹಣ ನೀಡುತ್ತಾರೆ" ಎಂದು ಅವರು ವಿವರಿಸುತ್ತಾರೆ.
ಕಳೆದ ಮೂರು ವರ್ಷಗಳಲ್ಲಿ ಲೋನ್ ಕನ್ಸ್ಯೂಮರ್ ಅಸೋಸಿಯೇಷನ್ (ಎಲ್ಸಿಎ) ಎಂಬ ನ್ಯಾಯವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡಿರುವ, ಬ್ಯಾಂಕ್ಗಳು ಮತ್ತು ಅಕ್ರಮ ಆ್ಯಪ್ಗಳು ಸಾಲ ವಸೂಲಾತಿ ಮಾಡಲು ಅನೈತಿಕ ಕ್ರಮಗಳನ್ನು ಕೈಗೊಳ್ಳುವುದರ ವಿರುದ್ಧ ಕಾರ್ಯಾಚರಿಸುವ ಸಂಘಟನೆ, ಇಂತಹ ಸಾಲ ಆ್ಯಪ್ಗಳ ತೊಂದರೆಗೆ ಸಿಲುಕಿರುವ 1,800 ಜನರಿಗೆ ನೆರವು ನೀಡಿದೆ. ಈ ಸಂಘಟನೆಯ ಸದಸ್ಯರು ಇಂತಹ ಸಮಸ್ಯೆಗಳಿಗೆ ಸಿಲುಕಿದವರಿಗೆ ಸಮಾಲೋಚನೆ ನೆರವು ನೀಡಿ, ಪೊಲೀಸರಿಗೆ ದೂರು ಸಲ್ಲಿಸಲು ಬೆಂಬಲಿಸುತ್ತಾರೆ.
ಸೈಬರ್ ಸುರಕ್ಷತಾ ತಜ್ಞರು, ಎಲ್ಸಿಎ ಸ್ಥಾಪಕರೂ ಆಗಿರುವ ನಿಖಿಲ್ ಜೇಥ್ವಾ ಅವರು, ಈ ಸಮಸ್ಯೆಯ ಸುಳಿಗೆ ಸಿಲುಕಿರುವ ಬಹುತೇಕ 90%ದಷ್ಟು ಜನರು ಖಿನ್ನತೆ ಮತ್ತು ಮಾನಸಿಕ ಸಂಕಟಗಳಿಗೆ ಒಳಗಾಗಿರುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ. ಈ ಪರಿಸ್ಥಿತಿಯನ್ನು ಅವಲೋಕಿಸುತ್ತಾ ಅವರು ಇಂತಹ ಸಾಲ ವಸೂಲಾತಿಗಾರರ ಹಿಂಸೆಗೆ ಸಿಲುಕಿದ ಜನರು ಅವರ ಫೋನ್ ರಿಂಗ್ ಆಗತೊಡಗುತ್ತಿದ್ದಂತೆ ಆತಂಕ, ಭಯದಲ್ಲಿ ನಡುಗುವಿಕೆಗಳನ್ನು ಅನುಭವಿಸುತ್ತಾರೆ ಎನ್ನುತ್ತಾರೆ.
2020ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಆರಂಭದ ಅವಧಿಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಾದ್ಯಂತ ಲಾಕ್ ಡೌನ್ ಹೇರಿದ ಬಳಿಕ, ಡಿಜಿಟಲ್ ಸಾಲದ ಪ್ರಮಾಣ ಅಪಾರ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ ಎಂದು ಸೇವ್ ದೆಮ್ ಇಂಡಿಯಾ ಫೌಂಡೇಶನ್ ವರದಿಗಳು ಹೇಳುತ್ತವೆ.
ಆ ವರ್ಷವೊಂದರಲ್ಲೇ ಸಂಸ್ಥೆಗೆ ಲೋನ್ ಆ್ಯಪ್ ಪ್ರತಿನಿಧಿಗಳು ಬೆದರಿಕೆ ಕರೆ ಮಾಡುವ, ಸಂದೇಶ ಕಳುಹಿಸುವುದಕ್ಕೆ ಸಂಬಂಧಿಸಿದಂತೆ 29,000 ದೂರುಗಳು ದಾಖಲಾಗಿವೆ. 2021ರಲ್ಲಿ ಈ ಸಂಖ್ಯೆ 76,000ಕ್ಕೆ ಹೆಚ್ಚಳ ಕಂಡಿತು. ಆ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸೇವ್ ದೆಮ್ ಇಂಡಿಯಾ ಸಂಘಟನೆ 46,359 ದೂರುಗಳನ್ನು ಸ್ವೀಕರಿಸಿದೆ.
ಲೋಕಲ್ ಸರ್ಕಲ್ ಜುಲೈ 2020ರಿಂದ ಜೂನ್ 2022ರ ತನಕ ನಡೆಸಿದ ಸಮೀಕ್ಷೆಯ ಪ್ರಕಾರ, ಅದರಲ್ಲಿ ಭಾಗವಹಿಸಿದ 14% ಭಾರತೀಯರು ಕಳೆದ ಎರಡು ವರ್ಷಗಳಲ್ಲಿ ಇಂತಹ ತ್ವರಿತ ಸಾಲ ನೀಡುವ ಆ್ಯಪ್ಗಳನ್ನು ಬಳಸಿದ್ದಾರೆ. 58% ಜನರು 25%ದಷ್ಟು ಅಪಾರ ಪ್ರಮಾಣದ ಬಡ್ಡಿಯನ್ನು ಪಾವತಿಸಿದ್ದಾರೆ. ಇನ್ನು 54% ಪ್ರತಿಕ್ರಿಯಿಸಿದವರು ಸಾಲ ವಸೂಲಾತಿಯ ಸಂದರ್ಭದಲ್ಲಿ ಸುಲಿಗೆ ಮತ್ತು ಮಾಹಿತಿ ದುರ್ಬಳಕೆಯನ್ನು ಎದುರಿಸಿದ್ದಾರೆ.
ಭೂಪೇಂದ್ರ ವಿಶ್ವಕರ್ಮ ತನ್ನ ಆತ್ಮಹತ್ಯಾ ಪತ್ರದಲ್ಲಿ ತಾನು ಭೋಪಾಲ್ನ ಸೈಬರ್ ಕ್ರೈಮ್ ಕಚೇರಿಗೆ ತೆರಳಿ ದೂರು ದಾಖಲಿಸಿದರೂ, ತನಗೆ ಯಾವುದೇ ನೆರವು ಲಭ್ಯವಾಗಲಿಲ್ಲ ಎಂದಿದ್ದಾರೆ. ನಮ್ಮ ಕರ್ನಾಟಕದಲ್ಲೂ ಪರಿಸ್ಥಿತಿ ಭೋಪಾಲ್ಗಿಂತ ಭಿನ್ನವಾಗೇನೂ ಇಲ್ಲ.
ತನ್ನ ಹೆಸರು ಹೇಳಲಿಚ್ಛಿಸದ ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇಂತಹ ಸೈಬರ್ ಅಪರಾಧವನ್ನು ನಿರ್ವಹಿಸಲು ಪೊಲೀಸರಿಗೆ ತರಬೇತಿಯ ಕೊರತೆಯಿದೆ ಎಂದಿದ್ದಾರೆ. ಮಧ್ಯಪ್ರದೇಶ ಮಾತ್ರವಲ್ಲದೆ, ಕರ್ನಾಟಕವೂ ಸೇರಿದಂತೆ, ಭಾರತದಾದ್ಯಂತ ಪರಿಸ್ಥಿತಿ ಇದೇ ರೀತಿಯಲ್ಲಿದೆ.
"ಸೈಬರ್ ಪೊಲೀಸ್ ಠಾಣೆಗಳಲ್ಲಿರುವ ಬಹಳಷ್ಟು ಅಧಿಕಾರಿಗಳಿಗೆ ಮೂಲಭೂತ ಅಂತರ್ಜಾಲದ ಕುರಿತ ಜ್ಞಾನದ ಕೊರತೆಯಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಸೈಬರ್ ಅಪರಾಧಿಗಳು ಇತ್ತೀಚಿನ ತಂತ್ರಜ್ಞಾನದಲ್ಲಿ ಸಾಕಷ್ಟು ತಜ್ಞರಾಗಿರುತ್ತಾರೆ. ಈ ಕಾರಣದಿಂದಲೇ ಬಹಳಷ್ಟು ಸೈಬರ್ ಅಪರಾಧಗಳು ಪರಿಹಾರ ಕಾಣಲು ವಿಫಲವಾಗಿರುತ್ತವೆ" ಎಂದು ಅವರು ವಿವರಿಸಿದ್ದಾರೆ.
"ಇಂತಹ ವಂಚಕರು, ಹೆಚ್ಚಿನ ದಾಖಲಾತಿಗಳ ಅವಶ್ಯಕತೆಯಿಲ್ಲದೆ ದೂರವಾಣಿ ಕಂಪನಿಗಳು ಒದಗಿಸುವ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್) ಉಪಕರಣವನ್ನು ಬಳಸಿಕೊಳ್ಳುತ್ತಾರೆ. ಈ ವ್ಯವಸ್ಥೆಯನ್ನು ಸಾಮಾನ್ಯವಾಗಿ ಸಾಲ ನೀಡುವ ಆ್ಯಪ್ಗಳು ತಮ್ಮ ಸೇವೆಗಳನ್ನು ತಾವು ಪ್ರಚಾರ ಮಾಡುವ ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸದ ವ್ಯಕ್ತಿಗಳನ್ನು ಸೆಳೆಯಲು ಬಳಸುತ್ತವೆ" ಎಂದು ಕಲೈಸೆಲ್ವನ್ ವಿವರಿಸುತ್ತಾರೆ.
ಇವರಲ್ಲಿ ಬಹುತೇಕ ವಂಚಕರು ಸ್ಥಳೀಯ ರಾಷ್ಟ್ರಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ಹಾಗೂ ನೇಪಾಳದಂತಹ ರಾಷ್ಟ್ರಗಳ ಕೃತಕ ದೂರವಾಣಿ ಸಂಖ್ಯೆಗಳನ್ನು ಬಳಸಿ ಕರೆ ಮಾಡುತ್ತಾರೆ. ಆ ಮೂಲಕ ಅವರ ಇತ್ಯೋಪರಿಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿಸುತ್ತದೆ.
"ಸಾಲ ವಂಚಕರು ಈ ಸೇವೆಗಳನ್ನು ದುರುಪಯೋಗ ಪಡಿಸಿಕೊಂಡು, ಅವರನ್ನು ಸೆರೆಹಿಡಿಯಲು ಆಡಳಿತಗಾರರಿಗೆ ಕಷ್ಟವಾಗುವಂತೆ ಮಾಡುತ್ತಾರೆ" ಎಂದು ಕಲೈಸೆಲ್ವನ್ ವಿವರಿಸುತ್ತಾರೆ.
ತಜ್ಞರ ಪ್ರಕಾರ, ಇಂತಹ ಬಹುತೇಕ ಆ್ಯಪ್ಗಳು ತಮ್ಮ ಹೆಸರುಗಳಲ್ಲಿ 'ಈಸಿ', 'ಲೋನ್', 'ಆಧಾರ್', ಮತ್ತು 'ಇಎಂಐ' ಎಂಬಂತಹ ಕೀವರ್ಡ್ ಹೊಂದಿರುತ್ತವೆ. ಇದರಿಂದಾಗಿ ಆನ್ಲೈನ್ ಹುಡುಕಾಟದಲ್ಲಿ ಅವುಗಳನ್ನು ಪತ್ತೆಹಚ್ಚುವುದು ಸುಲಭವಾಗಿರುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ, ಅವುಗಳು ತಮ್ಮ ಸೇವೆಗಳ ಕುರಿತು ಫೇಸ್ಬುಕ್, ಮತ್ತು ಆ್ಯಡ್ ಸೆನ್ಸ್ ಮೂಲಕ ಗೂಗಲ್ನಂತಹ ವೇದಿಕೆಗಳಲ್ಲಿ ಜಾಹೀರಾತು ನೀಡಿ, ವೆಬ್ಸೈಟ್ ನಿರ್ಮಾಣಗಾರರಿಗೆ ತಮಗೆ ಬೇಕಾದ ಬಳಕೆದಾರರನ್ನು ಸೆಳೆದು, ತಮ್ಮ ಬಳಕೆದಾರರ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಆ್ಯಪ್ಗಳನ್ನು ನಿಷೇಧಿಸಿದಾಗ, ಅಥವಾ ಅವುಗಳ ವಿರುದ್ಧ ದೂರುಗಳು ದಾಖಲಾದಾಗ, ಅವುಗಳು ತಮ್ಮ ಹೆಸರು, ಇತರ ಮಾಹಿತಿಗಳನ್ನು ಬದಲಾಯಿಸಿ, ಹೊಸ ಗುರುತಿನೊಂದಿಗೆ ಕಾಣಿಸಿಕೊಳ್ಳುತ್ತವೆ.
ಜೇಥ್ವಾ ಅವರ ಪ್ರಕಾರ, ಸಾಲದ ಆ್ಯಪ್ಗಳ ವಂಚಕರು ಬ್ಯಾಂಕ್ ಖಾತೆಗಳಿಂದ ಹಣ ಸುಲಿಗೆ ಮಾಡುತ್ತವೆ. ಆದರೆ ಇದಕ್ಕೆ ಸಂಬಂಧಿಸಿದ ಮಾಹಿತಿಗಳಿದ್ದರೂ, ಅವರಲ್ಲಿ ಕೆಲವರಷ್ಟೇ ಸಿಕ್ಕಿಬೀಳುತ್ತಾರೆ.
ಇದರಲ್ಲಿರುವ ಮಹತ್ವದ ಅಂಶವೆಂದರೆ, ಸಣ್ಣ ಪ್ರಮಾಣದ ಭಾರತೀಯರು ಮಾತ್ರ ಡಿಜಿಟಲ್ ಜ್ಞಾನ ಹೊಂದಿದ್ದಾರೆ. ಆಕ್ಸ್ಫ್ಯಾಮ್ಸ್ ಇಂಡಿಯಾ ಇನೀಕ್ವಾಲಿಟಿ ರಿಪೋರ್ಟ್ 2022ರ ಪ್ರಕಾರ, ಭಾರತದಲ್ಲಿ 38%ದಷ್ಟು ಮನೆಗಳು ಮಾತ್ರವೇ ಡಿಜಿಟಲ್ ಸಾಕ್ಷರತೆ ಹೊಂದಿವೆ.
"ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಪರವಾಗಿ ವಕಾಲತ್ತು ವಹಿಸುತ್ತಿದೆಯಾದರೂ, ಅದಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಗಳು ಮತ್ತು ಜನರಿಗೆ ಮಾಹಿತಿ ನೀಡಲು ಬೇಕಾದ ಸೈಬರ್ ಸಾಕ್ಷರತಾ ಕಾರ್ಯಕ್ರಮಗಳ ಕೊರತೆಯಿದೆ" ಎಂದು ಜೇಥ್ವಾ ವಿವರಿಸುತ್ತಾರೆ.
ಮಾರ್ಚ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬೆಂಗಳೂರಿನಲ್ಲಿ ಚೀನೀ ಸಾಲದ ಆ್ಯಪ್ಗಳ ಆರ್ಥಿಕ ಮೋಸಕ್ಕೆ ಸಂಬಂಧಿಸಿದಂತೆ 1.06 ಬಿಲಿಯನ್ ರೂಪಾಯಿ (12.76 ಮಿಲಿಯನ್ ಡಾಲರ್) ಮೌಲ್ಯದ ಚರಾಸ್ಥಿಗಳನ್ನು ವಶಪಡಿಸಿಕೊಂಡಿದೆ.
ಇಡಿ ಪ್ರಕಾರ, ಈ ಸಾಲ ಸಂಸ್ಥೆಗಳು ತಮ್ಮ ಆ್ಯಪ್ಗಳ ಮೂಲಕ ಸಾರ್ವಜನಿಕರಿಗೆ ತ್ವರಿತವಾಗಿ ಸಣ್ಣ ಅವಧಿಯ ಸಾಲಗಳನ್ನು ಒದಗಿಸಿ, ಅದಕ್ಕೆ ಅಪಾರ ಪ್ರಮಾಣದ ಸಂಸ್ಕರಣಾ ಶುಲ್ಕ ಮತ್ತು ಅತ್ಯಂತ ಹೆಚ್ಚಿನ ಬಡ್ಡಿಯನ್ನು ವಸೂಲಿ ಮಾಡುತ್ತವೆ. ಇಂತಹ ಸಂಸ್ಥೆಗಳು ಸಾಲಗಾರರಿಂದ ಬಲವಂತವಾಗಿ ಹಣ ವಸೂಲಾತಿ ಮಾಡಿಕೊಂಡಿದ್ದು, ಅದಕ್ಕಾಗಿ ದೂರವಾಣಿಯ ಮೂಲಕ ಬೆದರಿಕೆ ಒಡ್ಡುವುದು, ಮಾನಸಿಕ ಒತ್ತಡ ಉಂಟುಮಾಡುವ ಕ್ರಮಗಳನ್ನು ಕೈಗೊಂಡಿವೆ.
ಗೂಗಲ್ ಇಂಡಿಯಾ ಸಂಸ್ಥೆ ತಾನು 2022ರಲ್ಲಿ ತನ್ನ ಪ್ಲೇ ಸ್ಟೋರ್ನಿಂದ 3,500ಕ್ಕೂ ಹೆಚ್ಚು ವೈಯಕ್ತಿಕ ಸಾಲ ನೀಡುವ ಆ್ಯಪ್ಗಳು ನೀತಿ ನಿಯಮಗಳನ್ನು ಪಾಲಿಸದಿರುವುದರಿಂದ, ಅವುಗಳನ್ನು ತೆಗೆದು ಹಾಕಿರುವುದಾಗಿ ಹೇಳಿದೆ. ಈ ಆ್ಯಪ್ಗಳು ಬಳಕೆದಾರರ ಮಾಹಿತಿಗಳು, ಸಂಪರ್ಕಗಳು, ಛಾಯಾಚಿತ್ರಗಳನ್ನು ಅಕ್ರಮವಾಗಿ ಬಳಸಿಕೊಂಡಿವೆ ಎಂದು ಗೂಗಲ್ ಇಂಡಿಯಾ ತಿಳಿಸಿದೆ.
ಸೆಪ್ಟೆಂಬರ್ 2022ರಲ್ಲಿ, ಭಾರತದ ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ನಲ್ಲಿ ಕೇವಲ ಅಧಿಕೃತ ಆ್ಯಪ್ಗಳು ಮಾತ್ರವೇ ಇರುವಂತೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಖಾತ್ರಿಪಡಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 7, 2023ರಂದು ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅರ್ಥ ಸಚಿವಾಲಯ ತಾನು ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ನಂತಹ ಆ್ಯಪ್ ಸ್ಟೋರ್ಗಳಿಗೆ ಅಧಿಕೃತ ಸಾಲ ವಿತರಣಾ ಆ್ಯಪ್ಗಳ ಪಟ್ಟಿ ಒದಗಿಸಿರುವುದಾಗಿ ಹೇಳಿದೆ. ಆದರೆ, ಸ್ಥಳೀಯ ಮಾಧ್ಯಮಗಳು ಈ ಹೇಳಿಕೆಯನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ಪಟ್ಟಿಯನ್ನು ಕಳುಹಿಸಲಾಗಿಲ್ಲ ಎಂದು ವರದಿ ಮಾಡಿವೆ.
ಬಹುತೇಕ ಇದೇ ಸಮಯದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿರುವ ಶಕ್ತಿಕಾಂತ ದಾಸ್ ಅವರು ಡಿಜಿಟಲ್ ಸಾಲ ವಿತರಣಾ ಆ್ಯಪ್ಗಳು ಕೇಂದ್ರೀಯ ಬ್ಯಾಂಕ್ ನೀತಿಗಳಡಿ ಬರುವುದಿಲ್ಲ ಎಂದಿದ್ದಾರೆ.
ಆ ತಿಂಗಳಲ್ಲಿ, ಭಾರತ ಸರ್ಕಾರ ಬಡಿಲೋನ್, ಕ್ಯಾಶ್ಟಿಎಂ, ಇಂಡಿಯಾಬುಲ್ಸ್ ಹೋಮ್ ಲೋನ್ಸ್, ಪೇಮಿ, ಫೇರ್ಸೆಂಟ್, ಮತ್ತು ರುಪೀರೆಡೀ ಸೇರಿದಂತೆ, 94 ಸಾಲ ವಿತರಣಾ ಆ್ಯಪ್ಗಳನ್ನು ನಿಷೇಧಿಸಿತ್ತು. ಆರ್ಬಿಐ ವಿವಿಧ ಕಾರಣಗಳಿಗಾಗಿ ಈ ಆ್ಯಪ್ಗಳ ಕುರಿತು ತನ್ನ ಕಳವಳಗಳನ್ನು ವ್ಯಕ್ತಪಡಿಸಿತ್ತು. ಅವುಗಳಲ್ಲಿ ಹಲವು ಆ್ಯಪ್ಗಳು ಚೀನೀ ಹೂಡಿಕೆದಾರರನ್ನು ಹೊಂದಿದ್ದರೆ, ಇನ್ನೂ ಹಲವು ಆ್ಯಪ್ಗಳು ಗ್ರಾಹಕರನ್ನು ಶೋಷಿಸುತ್ತಿದ್ದವು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.