ಕೊಲಂಬೋ: ಸರಣಿ ಬಾಂಬ್ ಸ್ಫೋಟದಿಂದ ಜನಜೀವನ ಅಸ್ತವ್ಯಸ್ಥಗೊಂಡಿರುವ ಹಿನ್ನೆಲೆಯಲ್ಲಿ, ಆತಂಕದ, ಉದ್ವಿಘ್ನದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಭಾನುವಾರ ಮುಂಜಾನೆಯಿಂದ ಆರಂಭವಾದ ಬಾಂಬ್ ಸ್ಫೋಟ ಸೋಮವಾರವೂ ಮುಂದುವರೆದ್ದರಿಂದ ದೇಶದಾದ್ಯಂತ ಭದ್ರತೆಯನ್ನು ಬಿಗಿಪಡಿಸಲಾಗಿದೆ. ಆದರೂ ಜನರು ಸುರಕ್ಷತಾ ಭಾವವನ್ನು ಹೊಂದಿಲ್ಲ. ಇಂಥ ಆತಂಕದ ವಾತಾವರಣವನ್ನು ತೆಹಬದಿಗೆ ತರುವ ದೃಷ್ಟಿಯಿಂದ ತುರ್ತು ಪರಿಸ್ಥಿತಿ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾಷ ಹೇಳಿಕೊಂಡಿದ್ದಾರೆ.
ಮೊದಲಿಗೆ ಸ್ಫೋಟ ಸಂಭವಿಸಿದ ಭಾನುವಾರದಂದು ತಡರಾತ್ರಿಯಿಂದ ಜಾರಿಗೆ ಬರುವಂತೆ ಮಾತ್ರ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಸೋಮವಾರ ಬೆಳಗ್ಗೆ ಶ್ರೀಲಂಕಾ ಸರ್ಕಾರ ಈ ನಿರ್ಧಾರವನ್ನು ಹಿಂಪಡೆದಿತ್ತು. ಆದರೆ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಮತ್ತೆ ತುರ್ತುಪರಿಸ್ಥಿತಿ ಹೇರಲಾಗಿದೆ.
ಶ್ರೀಲಂಕಾದ ಚರ್ಚ್ಗಳು ಹಾಗೂ ಪಂಚತಾರಾ ಹೋಟೆಲ್ಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿರುವ ಸರಣಿ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಮತೀಯ ಸಂಘಟನೆ ತೌಹೀದ್ ಜಮಾತ್ನ ಕೈವಾಡ ಇದೆ ಎಂದು ಗೊತ್ತಾಗಿದೆ. ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತೌಹೀದ್ ಜಮಾತ್ನ ಸಂಘಟನೆಗೆ ಸೇರಿದ 24 ಜನರನ್ನು ಬಂಧಿಸಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರದ ಮೂಲಗಳು ತಿಳಿಸಿವೆ.
ಶ್ರೀಲಂಕಾದ ಚರ್ಚ್ಗಳು ಮತ್ತು ಐಷಾರಾಮಿ ಹೋಟೆಲ್ಗಳನ್ನು ಗುರಿಯಾಗಿಸಿಕೊಂಡು ಭಾನುವಾರ 8 ಸರಣಿ ಸ್ಫೋಟಗಳು ಸಂಭವಿಸಿದ್ದವು. ಕೊಲಂಬೋ ವಿಮಾನ ನಿಲ್ದಾಣದ ಬಳಿ ಭಾನುವಾರ ತಡರಾತ್ರಿ ಸುಧಾರಿತ ಸ್ಫೋಟಕ ಪತ್ತೆಯಾಗಿತ್ತು. ಶ್ರೀಲಂಕಾ ವಾಯಪಡೆ ಯೋಧರು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದರು. ಮೂವರು ಆತ್ಮಾಹುತಿ ಬಾಂಬರ್ಗಳು ಸರಣಿ ಸ್ಫೋಟದಲ್ಲಿ ಭಾಗವಹಿಸಿದ್ದರು. ಇವರ ಪೈಕಿ ಒಬ್ಬಾತ ಪಂಚತಾರಾ ಹೋಟೆಲ್ನ ಸ್ವಸಹಾಯ ಭೋಜನಶಾಲೆಯ ಆವರಣದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾಗಿ ಕೂಡ ಶ್ರೀಲಂಕಾ ಸರ್ಕಾರದ ಮೂಲಗಳು ತಿಳಿಸಿವೆ.