ನವದೆಹಲಿ: ಕರ್ನಾಟಕ ಸೇರಿದಂತೆ ದೇಶದಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರೀ ಕುಸಿತ(Tomato price Crash) ಕಂಡಿದ್ದು, ರೈತರು ಕಂಗಾಲಾಗಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ 4 ರೂ.ಗೆ ಕುಸಿದಿದೆ.
2021-22ರ ಬೆಳೆ ವರ್ಷದ (ಜುಲೈ-ಜೂನ್) ಆರಂಭಿಕ ಖಾರಿಫ್ (ಬೇಸಿಗೆ) ಋತುವಿನ ಟೊಮೆಟೊ(Tomato)ಬೆಳೆಯನ್ನು ಪ್ರಸ್ತುತ ದೇಶದಾದ್ಯಂತ ಕೊಯ್ಲು ಮಾಡಲಾಗುತ್ತಿದೆ. ಆದಾಗ್ಯೂ ಸರ್ಕಾರವು ಮೇಲ್ವಿಚಾರಣೆ ಮಾಡಿದ 31ರ ಪೈಕಿ 23 ಕೇಂದ್ರಗಳಲ್ಲಿ ಟೊಮೆಟೊ ಸಗಟು ಬೆಲೆಗಳು ಹಿಂದಿನ ವರ್ಷದ ಅವಧಿಗಿಂತ ಶೇ.50 ರಷ್ಟು ಕುಸಿದಿದೆ. ಅಂದರೆ ಇದು 3 ವರ್ಷದ ಅವಧಿಯಲ್ಲಿಯೇ ಸರಾಸರಿಗಿಂತ ಕಡಿಮೆ ಎಂದು ಅಂಕಿಅಂಶಗಳು ತಿಳಿಸಿವೆ.
ಇದನ್ನೂ ಓದಿ: ಏನಿದು ಹೊಸ 'ಬಿಎಚ್' ಭಾರತ್ ಸರಣಿ?: ಪ್ರಯೋಜನೆಗಳು, ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ…
ದತ್ತಾಂಶಗಳ ಪ್ರಕಾರ ಟೊಮೆಟೊ ಬೆಳೆಯುವ ರಾಜ್ಯಗಳಲ್ಲಿ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರುವ ಮಧ್ಯಪ್ರದೇಶದ ದೇವಾಸ್ ನಲ್ಲಿ ಟೊಮೆಟೊ ಸಗಟು ಬೆಲೆಯು ಆಗಸ್ಟ್ 28ರಂದು ಪ್ರತಿ ಕೆಜಿಗೆ 8 ರೂ.ಗೆ ಇಳಿದಿದೆ ಎಂದು ತಿಳಿದುಬಂದಿದೆ. ಅದೇ ರೀತಿ ದೇಶದ 6ನೇ ಅತಿದೊಡ್ಡ ಟೊಮೆಟೊ ಬೆಳೆಯುವ ರಾಜ್ಯವಾಗಿರುವ ಮಹಾರಾಷ್ಟ್ರದ ಜಲ್ಗೊವಾನ್ನಲ್ಲಿ ಟೊಮೆಟೊ ಸಗಟು ಬೆಲೆ(Tomato Price) ಆ.28 ರಂದು ಪ್ರತಿ ಕೆಜಿಗೆ ಶೇ.80ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 21 ರೂ. ಇತ್ತು. ಔರಂಗಾಬಾದ್ನಲ್ಲಿ ಟೊಮೆಟೊ ಬೆಲೆ ಪ್ರತಿ ಕೆಜಿಗೆ 9.50 ರೂ.ನಿಂದ 4.50 ರೂ.ಗೆ, ಸೊಲ್ಲಾಪುರದಲ್ಲಿ ಪ್ರತಿ ಕೆಜಿಗೆ 15 ರೂ.ನಿಂದ 5 ರೂ.ಗೆ ಮತ್ತು ಕೊಲ್ಲಾಪುರದಲ್ಲಿ ಪ್ರತಿ ಕೆಜಿಗೆ 25 ರೂ.ನಿಂದ 6.50 ರೂ.ಗೆ ಇಳಿಕೆಯಾಗಿದೆ.
‘ಪೂರೈಕೆ ಕೊರತೆಯಿಂದ ಟೊಮೆಟೊ(Tomato) ಬೆಳೆಯುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಬೆಲೆಗಳು ಒತ್ತಡಕ್ಕೆ ಸಿಲುಕಿವೆ. ಟೊಮೆಟೊ ಬೆಳೆಯು ಅನುಕೂಲಕರ ವಾತಾವರಣದಿಂದ ಉತ್ತಮವಾಗಿದೆ’ ಎಂದು ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (NHRDF)ದ ಹಂಗಾಮಿ ನಿರ್ದೇಶಕ ಪಿ.ಕೆ.ಗುಪ್ತಾ ತಿಳಿಸಿದ್ದಾರೆ.
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಸಿಗೆಯಲ್ಲಿ(ಆರಂಭದ ಖಾರಿಫ್) ಟೊಮೆಟೊ ಉತ್ಪಾದನೆ ಉತ್ತಮವಾಗಿದೆ ಎಂದು ಅಂದಾಜಿಸಲಾಗಿದೆ. ಆಹಾರ ಸಂಸ್ಕರಣಾ ಕಂಪನಿಗಳು ಮನಸ್ಸು ಮಾಡಿದರೆ ಬೆಲೆ ಇಳಿಕೆ ನಷ್ಟದಿಂದ ರೈತರನ್ನು ರಕ್ಷಿಸಬಹುದು’ ಎಂದು ಅವರು ಹೇಳಿದ್ದಾರೆ. ಕೃಷಿ ಸಚಿವಾಲಯದ 2ನೇ ಮುಂಗಡ ಅಂದಾಜಿನ ಪ್ರಕಾರ, ಭಾರತದ ಟೊಮೆಟೊ ಉತ್ಪಾದನೆಯು 2020-21ರ ಬೆಳೆ ವರ್ಷದಲ್ಲಿ (ಜುಲೈ-ಜೂನ್) ಶೇ.2.20ರಷ್ಟು ಹೆಚ್ಚಳವಾಗಿದ್ದು, 21 ದಶಲಕ್ಷ ಟನ್ಗಳಿಗೆ ಏರಿಕೆಯಾಗಿದೆ. ಇದು ಕಳೆದ ವರ್ಷ 20.55 ದಶಲಕ್ಷ ಟನ್ಗಳಾಗಿತ್ತು.
ಇದನ್ನೂ ಓದಿ: "ಹೊಸ ಸವಾಲುಗಳಿಗಾಗಿ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ನಿರಂತರವಾಗಿ ನವೀಕರಿಸಬೇಕು"
ಇತರ ರಾಜ್ಯಗಳಲ್ಲಿ ಟೊಮೆಟೊ ಸಗಟು ಬೆಲೆ
ದೇಶದ 4ನೇ ಅತಿದೊಡ್ಡ ಟೊಮೆಟೊ ಬೆಳೆಯುವ ರಾಜ್ಯವಾದ ಕರ್ನಾಟಕ(Karnataka)ದ ಕೋಲಾರದಲ್ಲಿ ಟೊಮೆಟೊ ಸಗಟು ಬೆಲೆ ಆ.28 ರಂದು ಪ್ರತಿ ಕೆಜಿಗೆ 5.30 ರೂ.(ಕಳೆದ ವರ್ಷ 18.70 ರೂ. ಇತ್ತು)ಗೆ ಇಳಿಕೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ಪ್ರತಿ ಕೆಜಿಗೆ 7.30 ರೂ.(ಕಳೆದ ವರ್ಷ 18.50 ರೂ. ಇತ್ತು)ಗೆ ಇಳಿಕೆಯಾಗಿದೆ.
ಅದೇ ರೀತಿ ದೇಶದ 2ನೇ ಅತಿದೊಡ್ಡ ಟೊಮೆಟೊ ಬೆಳೆಯುವ ರಾಜ್ಯವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ನಲ್ಲಿ ಸಗಟು ಬೆಲೆ ಪ್ರತಿ ಕೆಜಿಗೆ 40 ರೂ.ನಿಂದ 18.50 ರೂ.ಗೆ ಇಳಿದಿದೆ. ಉತ್ತರ ಪ್ರದೇಶದಲ್ಲೂ ಟೊಮೆಟೊ ಬೆಲೆ ಪ್ರತಿ ಕೆಜಿಗೆ 8-20 ರೂ.ನಷ್ಟು ಕುಸಿತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 25-32 ರೂ.ಗೆ ಇಳಿಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ