ನವದೆಹಲಿ: ಸಂಜಯ್ ಲೀಲಾ ಭನ್ಸಾಲಿಯವರ ಪದ್ಮಾವತ್ ಚಿತ್ರವನ್ನು ಬಿಡುಗಡೆಗೊಳಿಸದಂತೆ ಮಧ್ಯಪ್ರದೇಶ ಮತ್ತು ರಾಜಸ್ಥಾನ್ ಸರ್ಕಾರಗಳು ಸುಪ್ರೀಂ ಕೋರ್ಟ್ಗೆ ಮಾಡಿದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದೆ ಮತ್ತು ಎಲ್ಲಾ ರಾಜ್ಯಗಳು ತನ್ನ ಜನವರಿ 18 ರ ತೀರ್ಪನ್ನು ಪಾಲಿಸಬೇಕೆಂದು ಆದೇಶಿಸಿದೆ. ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಮತ್ತು ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಆ ಮೂಲಕ ಜನವರಿ 25, 2018 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.
ಮತ್ತು ಇದೆ ಸಂದರ್ಭದಲ್ಲಿ ಚಲನಚಿತ್ರ ಪ್ರದರ್ಶನದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಕೂಡಾ ರಾಜ್ಯಗಳ ಜವಾಬ್ದಾರಿ ಎಂದು ಉನ್ನತ ನ್ಯಾಯಾಲಯವು ಹೇಳಿದೆ.ಈಗಾಗಲೇ ಈ ವಿಷಯವಾಗಿ ಸಿಬಿಎಫ್ಸಿ ಮಂಡಳಿ ಚಲನಚಿತ್ರ ಬಿಡುಗಡೆಗೆ ಅವಕಾಶ ನೀಡಿದೆ. ಆದ್ದರಿಂದ ಜನರು ಮತ್ತು ಸರ್ಕಾರಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನೇತೃತ್ವದ ಮೂರು ನ್ಯಾಯಾಧೀಶರು, ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ನಿಮಗೆ ಇಷ್ಟವಿಲ್ಲದಿದ್ದರೆ ಸರ್ಕಾರಗಳು ಮತ್ತು ಜನರು ಈ ಚಿತ್ರವನ್ನು ವೀಕ್ಷಿಸಬಾರದು, ಆದರೆ ನೀವು ಈ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.