Puneeth Rajkumar: ಡಾ.ರಾಜ್ ಸಮಾಧಿ ಪಕ್ಕವೇ ಸರ್ಕಾರಿ ಗೌರವಗಳೊಂದಿಗೆ ‘ಅಪ್ಪು’ ಅಂತ್ಯಕ್ರಿಯೆ

ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್ ಪ್ರತಿಷ್ಠಾಣದಲ್ಲಿನ ವರನಟ ಡಾ.ರಾಜ್ ಕುಮಾರ್ ಸಮಾಧಿ ಪಕ್ಕವೇ ನಟ ಪುನೀತ್ ರಾಜ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.  

Written by - Puttaraj K Alur | Last Updated : Oct 30, 2021, 08:00 AM IST
  • ವರನಟ ಡಾ.ರಾಜ್ ಕುಮಾರ್ ಸಮಾಧಿ ಪಕ್ಕವೇ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ
  • ಶನಿವಾರ ಇಡೀದಿನ ಅಭಿಮಾನಿಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ, ಭಾನುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ‘ಅಪ್ಪು’ ಅಂತ್ಯಕ್ರಿಯೆ
  • ಕಣ್ಣೀರಿಡುತ್ತಿರುವ ‘ದೊಡ್ಮನೆ ಹುಡುಗ’ನ ಅಂತಿಮ ದರ್ಶನಕ್ಕೆ ಆಗಮಿಸುತ್ತಿರುವ ಲಕ್ಷಾಂತರ ಅಭಿಮಾನಿಗಳು
Puneeth Rajkumar: ಡಾ.ರಾಜ್ ಸಮಾಧಿ ಪಕ್ಕವೇ ಸರ್ಕಾರಿ ಗೌರವಗಳೊಂದಿಗೆ ‘ಅಪ್ಪು’ ಅಂತ್ಯಕ್ರಿಯೆ   title=
ಭಾನುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ‘ಅಪ್ಪು’ ಅಂತ್ಯಕ್ರಿಯೆ

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ ದಿವಂಗತ ಪುನೀತ್ ರಾಜ್‍ಕುಮಾರ್(Puneeth Rajkumar) ಅವರ ಅಂತ್ಯಸಂಸ್ಕಾರವನ್ನು ಕಂಠೀರವ ಸ್ಟುಡಿಯೋ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋ(Bengaluru Kanteerava Studio)ಆವರಣದಲ್ಲಿರುವ ಡಾ.ರಾಜ್ ಪ್ರತಿಷ್ಠಾಣದಲ್ಲಿನ ವರನಟ ಡಾ.ರಾಜ್ ಕುಮಾರ್ ಸಮಾಧಿ ಪಕ್ಕವೇ ನಟ ಪುನೀತ್ ರಾಜ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.  

Puneeth-Rajkumar-111.jpg

‘ಚಂದನವನ’ದ ರಾಜಕುಮಾರ ಇನ್ನಿಲ್ಲ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ 46ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಶುಕ್ರವಾರ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸಮೀಪದ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವಿಕ್ರಂ ಆಸ್ಪತ್ರೆಗೆ ರವಾನಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: RIP Puneeth Rajkumar: ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

ಸಣ್ಣ ವಯಸ್ಸಿನಲ್ಲಿಯೇ ಪುನೀತ್ ರಾಜ್ ಕುಮಾರ್(Puneeth Rajkumar) ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಕರುನಾಡಿನ ಪ್ರೀತಿಯ ‘ಅಪ್ಪು’ ಬಾರದ ಲೋಕಕ್ಕೆ ತೆರಳಿದ್ದು, ಇಡೀ ಕರುನಾಡು ಕಣ್ಣೀರಲ್ಲಿ ಮುಳುಗಿದೆ. ಬೆಂಗಳೂರಿನ ಕಠೀರವ ಸ್ಟೇಡಿಯಂ(Bengaluru Kanteerava Stadium)ನಲ್ಲಿ ಪುನೀತ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ನಿನ್ನೆಯಿಂದಲೇ  ‘ದೊಡ್ಮನೆ ಹುಡುಗ’ನ ಅಂತಿಮ ದರ್ಶನ ಪಡೆಯುತ್ತಿರುವ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಇಂದು ಇಡೀ ದಿನ ಕಠೀರವ ಕ್ರೀಡಾಂಗಣದಲ್ಲಿ ಪುನೀತ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ರಾಜ್ಯದ ಮೂಲೆಮೂಲಗಳಿಂದ ಆಗಮಿಸುತ್ತಿರುವ ಲಕ್ಷಾಂತರ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ(Thousands Pay Tributes To Puneeth Rajkumar) ಪಡೆದುಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ಬೇರೆ ಚಿತ್ರರಂಗದ ಗಣ್ಯರು ಕೂಡ ಪುನೀತ್ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಅಭಿಮಾನಿಗಳ ಪಾಲಿನ ‘ಯುವರತ್ನ’ ಬಾರದ ಲೋಕಕ್ಕೆ ಪಯಣಿಸಿದ್ದು ಆಘಾತ ಮೂಡಿಸಿದೆ. ‘ಅಪ್ಪು’ವನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗದಲ್ಲಿ ಶೂನ್ಯಭಾವ ಮೂಡಿದೆ. ಇನ್ನು ಅನೇಕ ಸಿನಿಮಾಗಳಲ್ಲಿ ಮಿಂಚಬೇಕಾಗಿದ್ದ ಪವರ್ ಸ್ಟಾರ್ ಕಣ್ಮರೆಯಾಗಿರುವುದು ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ಇದನ್ನೂ ಓದಿ:  Puneeth Rajkumar No More: ‘ಚಂದನವನ’ದಿಂದ ಮರೆಯಾದ 'ದೊಡ್ಮನೆ ಹುಡ್ಗ'

ವರನಟ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮನವರ ಕಿರಿಯ ಪುತ್ರರಾಗಿದ್ದ ಪುನೀತ್ ರಾಜ್ ಕುಮಾರ್ ಬಾಲ ಕಲಾವಿದರಾಗಿಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ತಮ್ಮ ತಂದೆಯ ಜೊತೆಗೆ ಬಾಲ್ಯದಲ್ಲಿಯೇ ಕಲೆಯ ನಂಟು ಬೆಳೆಸಿಕೊಂಡ ಅಪ್ಪು ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸುವ ಮೂಲಕ ಗಮನ ಸೆಳೆದಿದ್ದರು. 1985ರಲ್ಲಿ ‘ಬೆಟ್ಟದ ಹೂ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ‘ಅಪ್ಪು’ ಸಿನಿಮಾ ಮೂಲಕ 2002ರಲ್ಲಿ ನಾಯಕ ನಟನಾಗಿ ಸ್ಯಾಂಡಲ್ ವುಡ್ ಪಾದಾರ್ಪಣೆ ಮಾಡಿದ್ದ  ಪುನೀತ್ ರಾಜ್ ಕುಮಾರ್ ಆಕಾಶ್, ಅಭಿ, ಮೌರ್ಯ, ನಮ್ಮ ಬಸವ, ವೀರ ಕನ್ನಡಿಗ, ಯುವರತ್ನ, ರಾಜಕುಮಾರ, ಅಂಜನಿಪುತ್ರ ಸೆರಿದಂತೆ ಅನೇಕ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು.

ನಾಯಕ ನಟನಾಗಿ, ನಿರ್ಮಾಪಕನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದ ಪುನೀತ್ ಸದ್ದಿಲ್ಲದೆ ಸಮಾಜ ಸೇವೆಯನ್ನು ಮಾಡುತ್ತಿದ್ದರು. ಪುನೀತ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಅವರ ಅಕಾಲಿನ ನಿಧನದಿಂದ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ದೊಡ್ಡ ಶೂನ್ಯಭಾವ ಮೂಡಿದೆ. ಪುನೀತ್ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವುಂಟಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News