ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬೀದಿಯಲ್ಲಿ ಮೆರವಣಿಗೆ, ನಾಲ್ವರ ಬಂಧನ

ಮಾನವೀಯ ಸಮಾಜ ತಲೆತಗ್ಗಿಸುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜರುಗಿದೆ. ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬೀದಿಗಳಲ್ಲಿ ಆಕೆಯ ತಲೆ ಕೂದಲನ್ನು ಕತ್ತರಿಸಿ,  ಕುತ್ತಿಗೆಯಲ್ಲಿ ಶೂ ಹಾರದೊಂದಿಗೆ ಮೆರವಣಿಗೆ ನಡೆಸಿದರು. 

Edited by - Zee Kannada News Desk | Last Updated : Jan 27, 2022, 09:53 PM IST
  • ಯುವತಿ ಮೇಲೆ ಲೈಂಗಿಕ ದೌರ್ಜನ್ಯ
  • ತಲೆ ಕೂದಲನ್ನು ಕತ್ತರಿಸಿ, ಕುತ್ತಿಗೆಯಲ್ಲಿ ಶೂ ಹಾರ ಹಾಕಿ ಮೆರವಣಿಗೆ
  • ಈ ಸಂಬಂಧ ನಾಲ್ವರ ಬಂಧನ
ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬೀದಿಯಲ್ಲಿ ಮೆರವಣಿಗೆ, ನಾಲ್ವರ ಬಂಧನ  title=
ಯುವತಿ

ನವದೆಹಲಿ: 20 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿ, ಲೈಂಗಿಕ ಕಿರುಕುಳ (sexual assault) ನೀಡಿ ಆಕೆಯ ತಲೆಗೂದಲು ಕತ್ತರಿಸಿ, ಮುಖ ಕಪ್ಪು ಮಸಿ ಬಳಿದು, ಕುತ್ತಿಗೆಗೆ ಶೂ ಹಾರ ಹಾಕಿ ಪೂರ್ವ ದೆಹಲಿಯ ಕಸ್ತೂರ್ಬಾ ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಹೀನಾಯ ಘಟನೆ ಜರುಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.  ಯುವತಿ ಆನಂದ್ ವಿಹಾರ್‌ನಲ್ಲಿರುವ ತನ್ನ ಗಂಡನ ಮನೆಯಲ್ಲಿದ್ದ ಸಂದರ್ಭದಲ್ಲಿ ಕಸ್ತೂರ್ಬಾ ನಗರದಲ್ಲಿನ ಆಕೆಯ ತಾಯಿಯ ಬಳಿ ವಾಸಿಸುತ್ತಿದ್ದ ಆರೋಪಿಗಳು ಅಪಹರಿಸಿದ್ದಾರೆ (Kidnap) ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯು ವೈಯಕ್ತಿಕ ದ್ವೇಷದ ಪರಿಣಾಮವಾಗಿದೆ ಎಂದು ವಿವರಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಯ ಕುಟುಂಬಕ್ಕೆ ಸೇರಿದ ಹುಡುಗ ಮತ್ತು ಸಂತ್ರಸ್ತೆ ಸ್ನೇಹಿತರಾಗಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಕುಟುಂಬದವರು ಈಗ ಸಂತ್ರಸ್ತೆಯನ್ನು ದೂಷಿಸುತ್ತಿದ್ದಾರೆ. ಆಕೆಯ ಕಾರಣದಿಂದಾಗಿ ಆತ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಇದೆ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯನ್ನು ಅಪಹರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Corona Positive: ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ಗೆ ಕೋವಿಡ್ ಪಾಸಿಟಿವ್

ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಒಂದೇ ಕುಟುಂಬದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಸಂತ್ರಸ್ತೆಗೆ ಕೌನ್ಸೆಲಿಂಗ್ ಮತ್ತು ವೈದ್ಯಕೀಯ ನೆರವು ನೀಡಲಾಗಿದೆ ಎಂದು ಡಿಸಿಪಿ (ಶಹದಾರ) ಆರ್. ಸತ್ಯಸುಂದರಂ ಮಾಹಿತಿ ನೀಡಿದ್ದಾರೆ.

ಮಹಿಳೆ ಮೇಲಿನ ಈ ದೌರ್ಜನ್ಯವನ್ನು ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

20 ರ ಹರೆಯದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ಆಕೆಯ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ನಾನು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡುತ್ತಿದ್ದೇನೆ. ಮಹಿಳೆಯರು ಸೇರಿದಂತೆ ಎಲ್ಲಾ ಅಪರಾಧಿಗಳನ್ನು ಬಂಧಿಸಬೇಕು. ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು DCW ಅಧ್ಯಕ್ಷೆ ಸ್ವಾತಿ ಮಲಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಘಟನೆ ಕುರಿತು ಬುಧವಾರ ಮಧ್ಯಾಹ್ನ 1:18ಕ್ಕೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಆನಂದ್ ವಿಹಾರದಿಂದ ಕಸ್ತೂರ್ಬಾ ನಗರಕ್ಕೆ ಕರೆದೊಯ್ಯಲಾಯಿತು. ಆರೋಪಿಯ ಮನೆಯಿಂದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. 

ತನ್ನ ತಾಯಿಯ ಮನೆಯ ಸಮೀಪ ವಾಸಿಸುವ ಪರಿಚಯಸ್ಥರೇ ನನ್ನನ್ನು ಅಪಹರಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಆಕೆಯನ್ನು ತಮ್ಮ ಮನೆಗೆ ಕರೆದೊಯ್ದು ಥಳಿಸಿದ್ದಾರೆ ಎನ್ನಲಾಗಿದೆ. ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಕೂದಲನ್ನು ಕತ್ತರಿಸಿ ಬಲವಂತವಾಗಿ ಚಪ್ಪಲಿ ಹಾರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ನಂತರ ಆಕೆಯನ್ನು ಮೆರವಣಿಗೆ ಮಾಡಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಎರಡೂ ಕಡೆಯವರು ಮಾಡಿರುವ ಎಲ್ಲಾ ಆರೋಪಗಳನ್ನು ಪರಿಶೀಲಿಸಲಾಗುತ್ತಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಸತ್ಯಸುಂದರಂ ತಿಳಿಸಿದ್ದಾರೆ.

ಇದನ್ನೂ ಓದಿ: Shocking fact:ಭೂಮಿಯಂತೆ ಮಂಗಳ ಗ್ರಹದಲ್ಲಿಯೂ ನಡೆಯುತ್ತದೆ ಈ ಘಟನೆ, ನಾಸಾ ಚಿತ್ರಗಳಿಂದ ರಹಸ್ಯ ಬಯಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News