ನವದೆಹಲಿ: ಮಹಿಳೆಯರ ಕಳ್ಳಸಾಗಾಣಿಕೆ ದಂಧೆ ಆರೋಪಿ ಪ್ರಭಾ ಮುನ್ನಿ ಜೊತೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇರುವ ಫೋಟೋ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಳೆದ 5 ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿ ಪ್ರಭಾ ಮುನ್ನಿಯನ್ನು ದೆಹಲಿಯ ಪಂಜಾಬಿ ಭಾಗ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ ಒಂದು ದಿನದ ಬಳಿಕ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
NGO ನಡೆಸುತ್ತಿದ್ದ ಪ್ರಭಾ ಮುನ್ನಿ, ಅಲ್ಲಿಯೇ ರಹಸ್ಯವಾಗಿ ಉದ್ಯೋಗ ಏಜೆನ್ಸಿಯನ್ನೂ ನಡೆಸುತ್ತಿದ್ದು, ಆ ಮೂಲಕ ಉದ್ಯೋಗ ನೀಡುವುದಾಗಿ ಯುವತಿಯರಿಗೆ ಆಮಿಷ ಒಡ್ಡಿ, ನಂತರ ಅವರು ದೆಹಲಿ ತಲುಪಿದ ಬಳಿಕ ಕಳ್ಳಸಾಗಾಣಿಕೆಯಾ ಭಾಗವಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಸದ್ಯ ಮುನ್ನಿ ವಿರುದ್ಧ ಜಾರ್ಖಂಡ್'ನಲ್ಲಿ ಪ್ರಕರಣ ದಾಖಲಾಗಿದ್ದು, 25 ಸಾವಿರ ರೂ. ದಂಡವನ್ನೂ ವಿಧಿಸಲಾಗಿದೆ. ಈಕೆ 2013ರಿಂದ ತಲೆ ಮರೆಸಿಕೊಂಡಿದ್ದಳು ಎನ್ನಲಾಗಿದೆ.