ನವದೆಹಲಿ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ವರ್ಷ 2020-21ರ ಮುಂಗಡ ಪತ್ರವನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ವೇಳೆ ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ 5ನೇ ಸ್ಥಾನ ಅಲಂಕರಿಸಿದೆ ಎಂದು ಸೀತಾರಾಮನ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಮೇಲಿನ ಸಾಲದ ಹೊರೆ ವಿತ್ತೀಯ ಕೊರತೆಯ ಶೇ.48.7ಕ್ಕೆ ಬಂದು ತಲುಪಿದೆ ಎಂದು ಘೋಷಿಸಿದ್ದಾರೆ. 2014ರಲ್ಲಿ ಇದು ಶೇ.52.2ರಷ್ಟಿತ್ತು.
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ಆದಾಯ ತೆರಿಗೆಯ ಹೊಸ ಸ್ಲಾಬ್ ವೊಂದನ್ನು ಕೂಡ ಘೋಷಿಸಿದ್ದಾರೆ. 5-7.5ಲಕ್ಷ ರೂ.ಗಳ ಈ ಸ್ಲಾಬ್ ಅಡಿ ತೆರಿಗೆ ಪಾವತಿದಾರರು ಶೇ.10ರಷ್ಟು ತೆರಿಗೆ ಪಾವತಿಸಬೇಕಾಗಲಿದೆ. ಇದೆ ವೇಳೆ 7.7-10ಲಕ್ಷ ರೂ.ಗಳ ವರೆಗೆ ಶೇ.15, 10-12.5 ಲಕ್ಷ ರೂ.ಗಳವರೆಗೆ ಶೇ.20, 12.5-15ಲಕ್ಷ ರೂ.ಗಳ ವರೆಗೆ ಶೇ.25 ಹಾಗೂ 15 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದವರು ಶೇ.30ರಷ್ಟು ಆದಾಯ ತೆರಿಗೆ ಪಾವತಿಸಬೇಕಾಗಲಿದೆ.
ಇದಲ್ಲದೆ ಪರಿಸರ ಮಾಲಿನ್ಯ ತಡೆಗೆ 4,400 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಬ್ಯಾಂಕ್ ಡಿಪಾಸಿಟ್ ಗಳ ಮೇಲೆ ಇರುವ ವಿಮಾ ಮೊತ್ತವನ್ನು ರೂ.1 ಲಕ್ಷದಿಂದ 5 ಲಕ್ಷ ರೂ.ಗಳವರೆಗೆ ಏರಿಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಎಲ್ಲರಿಗೆ ಸ್ಮಾರ್ಟ್ ವಿದ್ಯುತ್ ಮೀಟರ್ ವಿತರಿಸಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಇದಲ್ಲದೆ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ 22 ಸಾವಿರ ರೂಗಳ ಅನುದಾನ ನೀಡಲಾಗಿದೆ.
ವರ್ಷ 2024 ರವರೆಗೆ ಉಡಾನ್ ಯೋಜನೆಯ ಅಡಿ ದೇಶದ ಒಟ್ಟು 100 ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 5 ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕಾಗಿ ರೂ. 100 ಲಕ್ಷ ಕೋಟಿ ರೂ. ಅನುದಾನ ಮೀಸಲಿರಿಸಲಾಗುವುದು ಎಂದು ಹೇಳಿದ್ದಾರೆ. ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ಕಾಮಗಾರಿ ಜಾರಿಗೊಳಿಸಲಾಗುವುದು. ದೇಶದ ಒಟ್ಟು 12 ರಾಷ್ಟ್ರೀಯ ಹೆದ್ದಾರಿಗಳನ್ನು 2024ರವರೆಗೆ ಮೊನೋಟೈಜ್ ಮಾಡಲಾಗುವುದು. ಜಲ ಜೀವನ ಮಿಶನ್ ಗಾಗಿ 11,500 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. PPP ಮಾಡೆಲ್ ಗಳ ಮೂಲಕ ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳನ್ನು ತೆರೆಯಲಾಗುವುದು. ಕೌಶಲ್ಯ ಅಭಿವೃದ್ಧಿಗೆ 3000 ಕೋಟಿ ರೂ.ಗಳ ಅನುದಾನ ನೀಡಲಾಗಿದೆ.