ಅಕ್ರಮ ಆಸ್ತಿ ಪ್ರಕರಣ: ಮುಲಾಯಂ, ಅಖಿಲೇಶ್​ಗೆ ಕ್ಲೀನ್​ ಚಿಟ್​ ನೀಡಿದ ಸಿಬಿಐ

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ(ಎಸ್​ಪಿ)ದ ವರಿಷ್ಠ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಎಸ್​ಪಿ ನಾಯಕ ಅಖಿಲೇಶ್ ಯಾದವ್ ಅವರಿಗ ಸಿಬಿಐ ಕ್ಲೀನ್ ಚಿಟ್ ನೀಡಿದೆ.

Last Updated : May 21, 2019, 12:40 PM IST
ಅಕ್ರಮ ಆಸ್ತಿ ಪ್ರಕರಣ: ಮುಲಾಯಂ, ಅಖಿಲೇಶ್​ಗೆ ಕ್ಲೀನ್​ ಚಿಟ್​ ನೀಡಿದ ಸಿಬಿಐ title=

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ(ಎಸ್​ಪಿ)ದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಪ್ರಕರಣ ಮುಕ್ತಾಯಗೊಳಿಸುವುದಾಗಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಸುಪ್ರೀಂ ಕೋರ್ಟ್​ ಮುಂದೆ ಅಫಿಡೆವಿಟ್​ ಸಲ್ಲಿಸಿದೆ.

ಸಿಬಿಐ ತನ್ನ ಅಫಿಡವಿಟ್ಟಿನಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ಕೈಗೊಂಡಿದ್ದೆವು. ಆದರೆ ಆ ವೇಳೆ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರನ ಮೇಲೆ ಪ್ರಕರಣ ದಾಖಲಿಸಲು ಯಾವುದೇ ಸಾಕ್ಷಿಗಳು ದೊರೆತಿಲ್ಲ. 2013ರ ಆಗಸ್ಟ್ 7ರಂದು ಈ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಹೇಳಿದೆ.

ಮುಲಾಯಂ, ಅಖಿಲೇಶ್, ಅವರ ಪತ್ನಿ ಡಿಂಪಲ್ ಯಾದವ್ ಮತ್ತು ಮುಲಾಯಂರ ಇನ್ನೊಬ್ಬ ಪುತ್ರ ಪ್ರತೀಕ್ ಯಾದವ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ. ಈ ಬಗ್ಗೆ ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯಿದೆಯಡಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸಿಬಿಐಗೆ ನಿರ್ದೇಶನ ನೀಡುವಂತೆ 2005 ರಲ್ಲಿ ರಾಜಕೀಯ ಕಾರ್ಯಕರ್ತ ವಿಶ್ವನಾಥ್ ಚತುರ್ವೇದಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 

ಎಸ್​ಪಿ ನಾಯಕರ ವಿರುದ್ಧ ಮಾಡಲಾಗಿರುವ ಆರೋಪ ನಿಜವೇ? ಸುಳ್ಳೇ? ಎಂಬುದನ್ನು ಪತ್ತೆ ಹಚ್ಚುವಂತೆ ನಿರ್ದೇಶಿಸಿ, ಸುಪ್ರೀಂ ಕೋರ್ಟ್ ಮಾರ್ಚ್ 1, 2007 ರಲ್ಲಿ "ಈ ಬಗ್ಗೆ ತನಿಖೆ ನಡೆಸಲು" ಸಿಬಿಐಗೆ ಆದೇಶಿಸಿತ್ತು. ನಂತರ 2012 ರಲ್ಲಿ, ನ್ಯಾಯಾಲಯವು ಮುಲಾಯಂ, ಅಖಿಲೇಶ್ ಮತ್ತು ಪ್ರತೀಕ್ ಅವರ ಅರ್ಜಿಯನ್ನು ವಜಾಮಾಡಿತು. 

Trending News