ನವದೆಹಲಿ: ಕೊರೋನಾದ ಪ್ರಕೋಪ ಭಾರತದ ಆರ್ಥಿಕತೆಯ ಪಾಲಿಗೆ ಶೋಚನೀಯ ಎಂದು ಸಾಬೀತಾಗುತ್ತಿದೆ. ಲಾಕ್ ಡೌನ್ ಬಳಿಕ ಭಾರತದಲ್ಲಿನ ನಿರುದ್ಯೋಗ ಸಮಸ್ಯೆಯಲ್ಲಿ ಶೇ.23 ರಷ್ಟು ಏರಿಕೆಯಾಗಿದ್ದು, ನಗರಗಳಲ್ಲಿನ ನಿರುದ್ಯೋಗ ಸಮಸ್ಯೆ ಶೇ.31 ಕ್ಕೆ ತಲುಪಿದೆ ಎನ್ನಲಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಾಮಿ (CMIE) ನೀಡಿರುವ ಒಂದು ವರದಿಯ ಪ್ರಕಾರ ಮಾರ್ಚ್ ತಿಂಗಳ ಕುರಿತು ಹೇಳುವುದಾದರೆ ನಿರುದ್ಯೋಗ ದರ ಕಳೆದ 43 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದೆ.
CMIE ನೀಡಿರುವ ವರದಿಯ ಪ್ರಕಾರ ಮಾರ್ಚ್ ಮೊದಲ ವಾರದಲ್ಲಿ ದೇಶದ ಉದ್ಯೋಗ ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿದ್ದು, ತಿಂಗಳ ಕೊನೆಯಲ್ಲಿ ಈ ಪರಿಸ್ಥಿತಿ ಗಮನಾರ್ಹವಾಗಿ ಹದಗೆಟ್ಟಿದೆ ಎಂದು ಹೇಳಿದೆ. CMIE ಒಂದು ಖಾಸಗಿ ಥಿಂಕ್ ಟ್ಯಾಂಕ್ ಆಗಿದೆ. ಸಿಎಂಐಇ ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್ 2020 ರ ಮೊದಲ ವಾರದಲ್ಲೂ ಕೂಡ ಉದ್ಯೋಗ ಸೃಷ್ಟಿಯ ಪರಿಸ್ಥಿತಿ ತುಂಬಾ ದಯನೀಯವಾಗಿದೆ ಎಂದು ಹೇಳಿದೆ.
ಸಿಎಮ್ಐಇ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ, ಲಾಕ್ಡೌನ್ ಸಮಯದಲ್ಲಿ ದೇಶದ ಒಟ್ಟು ನಿರುದ್ಯೋಗ ದರ ಶೇ.23.4ಕ್ಕೆ ತಲುಪಿದ್ದರೆ ನಗರಗಳಲ್ಲಿನ ನಿರುದ್ಯೋಗ ದರ ಶೇ. 30.9 ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.
ಕಳೆದ 43 ತಿಂಗಳಲ್ಲಿ ಅತಿ ಹೆಚ್ಚು ನಿರುದ್ಯೋಗ
ವರದಿಯ ಪ್ರಕಾರ, ಸಂಪೂರ್ಣ ಮಾರ್ಚ್ ಒಂದೇ ತಿಂಗಳ ಕುರಿತು ಹೇಳುವುದಾದರೆ ನಿರುದ್ಯೋಗ ದರ ಶೇ.8.7 ರಷ್ಟಿದ್ದು, ಕಳೆದ 43 ತಿಂಗಳಿಗೆ ಹೋಲಿಸಿದರೆ ಇದು ಗರಿಷ್ಟ ಮಟ್ಟದ ನಿರುದ್ಯೋಗ ದರವಾಗಿದೆ. ಮಾರ್ಚ್ ಕೊನೆಯ ವಾರದಲ್ಲಿ ಇದು ಏರಿಕೆಯಾಗಿ ಶೇ.23.8 ಕ್ಕೆ ಬಂದು ತಲುಪಿದೆ. ಇದಕ್ಕೂ ಕೊಡಲು ಆಗಸ್ಟ್ 2016 ರಲ್ಲಿ ನಿರುದ್ಯೋಗ ದರ ಶೇ.9.59 ರಷ್ಟಿತ್ತು.
ಇದುವರೆಗಿನ ಅತ್ಯಂತ ಕಡಿಮೆ ಮಟ್ಟದ ಕಾರ್ಮಿಕರ ಭಾಗವಹಿಸುವಿಕೆ
ಈ ಕುರಿತು CMIE ವೆಬ್ ಸೈಟ್ ಮೇಲೆ ಪ್ರಕಟಿಸಲಾಗಿರುವ ವರದಿಯಲ್ಲಿ ಹೇಳಿಕೆ ನೀಡಿರುವ ಸಂಸ್ಥೆಯ CEO ಮಹೇಶ್ ವ್ಯಾಸ್, "ಮಾರ್ಚ್ 2020ರಲ್ಲಿ ಕಾರ್ಮಿಕರ ಭಾಗವಹಿಸುವಿಕೆಯ ದರ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದ್ದು, ನಿರುದ್ಯೋಗ ದರ ವೇಗವಾಗಿ ಏರಿಕೆಯಾಗಿ, ಉದ್ಯೋಗ ದರ ಇದುವರೆಗಿನ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ" ಎಂದು ಹೇಳಿದ್ದಾರೆ.