ನವದೆಹಲಿ: ಭಾರತದಲ್ಲಿ ಜಿಎಸ್ಟಿ ಜಾರಿಯಾಗಿ ಒಂದು ವರ್ಷವಾಗಿದ್ದರೂ ಸಹ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಧನಾತ್ಮಕ ಪ್ರಭಾವ ಬೀರಿಲ್ಲ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅಭಿಪ್ರಾಯ ಪಟ್ಟಿದ್ದಾರೆ.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿ ಮಾಡಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ಚಿದಂಬರಂ ಅವರು, ಜಿಎಸ್ಟಿ ಜಾರಿ, ಅದರ ದರಗಳೂ ಸಹ ದೋಷಪೂರಿತವಾಗಿದ್ದು ಉದ್ಯಮಿಗಳು, ವ್ಯಾಪಾರಿಗಳು, ರಫ್ತುದಾರರು, ಸಾಮಾನ್ಯ ನಾಗರಿಕರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿದೆ. ಆದರೆ, ಜಿಎಸ್ಟಿ ಜಾರಿಯಾಗಿರುವುದರಿಂದ ತೆರಿಗೆ ಆಡಳಿತದ ವರ್ಗಕ್ಕೆ ಅನುಕೂಲವಾಗಿದ್ದು, ಅವರಿಗೆ ಹೆಚ್ಚಿನ ಅಧಿಕಾರ ಸಿಕ್ಕಿರುವುದರಿಂದ ಸಂತಸಗೊಂಡಿದ್ದಾರೆ ಎಂದು ಚಿದಂಬರಂ ಕಟುವಾಗಿ ಟೀಕಿಸಿದರು.
ಮುಂದುವರೆದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರಕು ಮತ್ತು ಸೇವೆಗಳ ತೆರಿಗೆ ಆಡಳಿತದ ಮೊದಲ ವಾರ್ಷಿಕೋತ್ಸವವನ್ನು ಹೇಗೆ ಆಚರಿಸಬಹುದೆಂದು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ. 2014 ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇಂದಿನವರೆಗೂ ಮಹತ್ವದ ಯೋಜನೆಗಳನ್ನು ಅತಿ ಕೆಟ್ಟ ರೀತಿಯಲ್ಲಿ ಹಾಗೂ ಕೆಟ್ಟ ಯೋಜನೆಗಳನ್ನು ಬೃಹತ್ ಕಾರ್ಯಗಳೆಂದು ಕೇಂದ್ರ ಸರ್ಕಾರ ಬಿಂಬಿಸುತ್ತಾ ಬಂದಿದೆ. ದೇಶದಲ್ಲಿ ಜಿಎಸ್ಟಿ ಜಾರಿ ಮಾಡಿದ್ದು, ಒಂದು ಜನಸಾಮಾನ್ಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಿದ ಹೊರೆಯಾಗಿದೆ ಎಂದು ಚಿದಂಬರಂ ಟೀಕಿಸಿದರು.
ಜಿಎಸ್ಟಿಗೆ ಒಂದು ವರ್ಷ: ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಜಿಎಸ್ಟಿ ಉತ್ತಮ ಉದಾಹರಣೆ ಎಂದ ಪ್ರಧಾನಿ ಮೋದಿ
ಜಿಎಸ್ಟಿ ಮಸೂದೆ ಜಾರಿ ಸಂದರ್ಭದಲ್ಲಿಯೂ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯರ ಸಲಹೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದ ಚಿದಂಬರಂ, ಜಿಎಸ್ಟಿ ಸಂವಿಧಾನ ತಿದ್ದುಪಡಿ ಮಸೂದೆಯಿಂದ ಆರಂಭಿಸಿ, ಜಿಎಸ್ಟಿಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರವು ತೆಗೆದುಕೊಂಡ ಪ್ರತಿಯೊಂದು ಹೆಜ್ಜೆಯು ದೋಷಪೂರಿತವಾಗಿದೆ. ಇದು ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ(ಎಸ್ಎಂಇಗಳು) ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿದೆ ಎಂದರು.
2017ರ ಜೂನ್ 30 ರಂದು ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಜಾರಿಗೊಳಿಸಿದರು. ಒಂದೇ ರಾಷ್ಟ್ರ, ಒಂದೇ ತೆರಿಗೆ, ಒಂದೇ ಮಾರುಕಟ್ಟೆ ಗುರಿಯೊಂದಿಗೆ ಎಲ್ಲಾ ತೆರಿಗೆಯನ್ನು ಒಂದೇ ವಾಹಿನಿ ಮೂಲಕ ಜಾರಿಗೊಳಿಸುವ ಈ ಯೋಜನೆ ಜಾರಿಗೆ ಹಲವು ವಾದ-ವಿವಾದಗಳು, ಟೀಕೆಗಳು ಕೇಳಿಬಂದಿತಾದರೂ ಈ ನಡುವೆಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾಗಿ ಯಶಸ್ವಿ ಒಂದು ವರ್ಷ ಪೂರ್ಣಗೊಂಡಿದೆ.