ನವದೆಹಲಿ: ನೀವೂ ಕೂಡ ಪೋಸ್ಟ್ ಆಫೀಸ್ನಲ್ಲಿ ನಿಮ್ಮ ಉಳಿತಾಯ ಖಾತೆ ಹೊಂದಿದ್ದರೆ, ಈ ಸುದ್ದಿ ತಪ್ಪದೆ ಓದಿ. ವಾಸ್ತವವಾಗಿ, ಇಂಡಿಯಾ ಪೋಸ್ಟ್ ತನ್ನ ಗ್ರಾಹಕರಿಗೆ ಹಳೆಯ ಮ್ಯಾಗ್ನೆಟಿಕ್ ಎಟಿಎಂ ಕಾರ್ಡ್ಗಳಿಗೆ ಬದಲಾಗಿ ಇಎಂವಿ ಚಿಪ್ ಎಟಿಎಂ ಕಾರ್ಡ್ಗಳನ್ನು ನೀಡಲು ನಿರ್ಧರಿಸಿದೆ. ಒಂದು ವೇಳೆ ನೀವೂ ಕೂಡ ಹಳೆಯ ಮ್ಯಾಗ್ನೆಟಿಕ್ ಕಾರ್ಡ್ ಬಳಸುತ್ತಿದ್ದರೆ, ಈ ತಿಂಗಳ ಅಂತ್ಯದ ವೇಳೆಗೆ ಹೊಸ ಕಾರ್ಡ್ ತೆಗೆದುಕೊಳ್ಳಿ, ಇಲ್ಲದಿದ್ದರೆ ಫೆಬ್ರವರಿ 1 ರಿಂದ ನಿಮ್ಮ ಹಳೆಯ ಕಾರ್ಡ್ ಅನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ. ಹಳೆಯ ಮ್ಯಾಗ್ನೆಟಿಕ್ ಕಾರ್ಡ್ ಅನ್ನು ನಿರ್ಬಂಧಿಸಲಾಗುವುದು ಎಂದು ಅಂಚೆ ಕಚೇರಿ ಅಧಿಸೂಚನೆ ಹೊರಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಬಿಡುಗಡೆ ಮಾಡಿರುವ , "ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ (ಪಿಒಎಸ್ಬಿ) ಖಾತೆ ಹೊಂದಿರುವ ಗ್ರಾಹಕರು 2020ರ ಜನವರಿ 31 ರೊಳಗೆ ತಮ್ಮ ಹೋಂ ಬ್ರಾಂಚ್ ಗೆ ಭೇಟಿ ನೀಡಿ, ತಮ್ಮ ಮ್ಯಾಗ್ನೆಟಿಕ್ ಎಟಿಎಂ ಕಾರ್ಡ್ ಗಳನ್ನು ಬದಲಿಸಿ ಅವುಗಳ ಜಾಗದಲ್ಲಿ ಹೆಚ್ಚು ಸುರಕ್ಷಿತವಿರುವ ಚಿಪ್ ಕಾರ್ಡ್ ಗಳನ್ನು ಪಡೆಯಬೇಕು ಎಂದು ಕೋರಿದೆ. ಅಷ್ಟೇ ಅಲ್ಲ ನಿಮ್ಮ ಮೊಬೈಲ್ ಸಂಖ್ಯೆಯನ್ನೂ ಸಹ ನವೀಕರಿಸಿ. '' ಎಂದು ಹೇಳಿದೆ.
ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಮತ್ತು ಚಿಪ್ ಕಾರ್ಡ್ ಗಳಲ್ಲಿ ವ್ಯತ್ಯಾಸ ಏನು?
ಚಿಪ್ ಆಧಾರಿತ ಕಾರ್ಡ್ಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ಗಳಿಗಿಂತ ಹೆಚ್ಚು ಸುರಕ್ಷಿತ ಡೇಟಾ ಎನ್ಕ್ರಿಪ್ಶನ್ ಮತ್ತು ಶೇಖರಣಾ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಪಾಯಿಂಟ್ ಆಫ್ ಸೇಲ್ ಸಾಧನದಲ್ಲಿ ವಹಿವಾಟಿಗೆ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಅನ್ನು ಸ್ವೈಪ್ ಮಾಡಲು ಮಾತ್ರ ಅಗತ್ಯವಿದೆ. ಇದಕ್ಕೆ ವಿರುದ್ಧವಾಗಿ, ಚಿಪ್ ಆಧಾರಿತ ಕಾರ್ಡ್ ಬಳಕೆಗೆ ಪಿನ್ ಕೂಡ ನಮೂದಿಸುವುದು ಅಗತ್ಯವಿದೆ.
RBI ಮಾರ್ಗಸೂಚಿಗಳ ಅನ್ವಯ ಈ ಬದಲಾವಣೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ಡಿಸೆಂಬರ್ 31, 2019 ರಂತೆ, ದೇಶಾದ್ಯಂತ ಬಹುತೇಕ ಎಲ್ಲಾ ಬ್ಯಾಂಕುಗಳು ತಮ್ಮ ಹಳೆಯ ಮ್ಯಾಗ್ನೆಟಿಕ್ ಕಾರ್ಡ್ಗಳ ಬದಲಾಗಿ ತಮ್ಮ ಗ್ರಾಹಕರಿಗೆ ಹೊಸ ಚಿಪ್ ಆಧಾರಿತ ಮ್ಯಾಗ್ನೆಟಿಕ್ ಕಾರ್ಡ್ ಗಳನ್ನು ವಿತರಿಸಿವೆ.
ಇಂಡಿಯಾ ಪೋಸ್ಟ್ ಉಳಿತಾಯ ಖಾತೆ ಬಗ್ಗೆ ತಿಳಿಯಿರಿ
ಭಾರತೀಯ ಪೋಸ್ಟ್ ನೆಟ್ವರ್ಕ್ ದೇಶಾದ್ಯಂತ ಹರಡಿದೆ. ಅಂಚೆ ಕಚೇರಿ ತನ್ನ ಉಳಿತಾಯ ಬ್ಯಾಂಕ್ ಖಾತೆಗೆ ವಾರ್ಷಿಕವಾಗಿ ಶೇ 4ರಷ್ಟು ಬಡ್ಡಿದರವನ್ನು ಪಾವತಿಸುತ್ತದೆ. ಅಂಚೆ ಕಚೇರಿ, ಉಳಿತಾಯ ಬ್ಯಾಂಕ್ ಖಾತೆಯೊಂದಿಗೆ ಎಟಿಎಂ ಕಾರ್ಡ್ಗಳನ್ನು ಸಹ ನೀಡುತ್ತದೆ. ಇಂಡಿಯಾ ಪೋಸ್ಟ್ ಪ್ರಕಾರ, ಒಂದು ದಿನದಲ್ಲಿ ಗರಿಷ್ಠ 25 ಸಾವಿರ ರೂ.ಗಳನ್ನು ಪೋಸ್ಟ್ ಆಫೀಸ್ ಎಟಿಎಂ ಕಾರ್ಡ್ನಿಂದ ನೀವು ಹಿಂಪಡೆಯಬಹುದು.