ಮುಂಬೈ: ಮಹಾರಾಷ್ಟ್ರ(Maharashtra)ದಲ್ಲಿ ಹೊಸ ಸರ್ಕಾರ ರಚನೆಯು ಶಿವಸೇನೆ(Shiv Sena), ಕಾಂಗ್ರೆಸ್ (Congress) ಮತ್ತು ಎನ್ಸಿಪಿ(NCP)ಯನ್ನು ಅಚ್ಚರಿಗೊಳಿಸಿದೆ. ಈ ದೊಡ್ಡ ಹಿನ್ನಡೆಯ ನಂತರ, ಶರದ್ ಪವಾರ್(Sharad Pawar) ಅವರು ಪಕ್ಷದ ತುರ್ತು ಸಭೆ ಕರೆದಿದ್ದಾರೆ. ಮೂಲಗಳ ಪ್ರಕಾರ, ಶರದ್ ಪವಾರ್ ತನ್ನ ಎಲ್ಲ ಶಾಸಕರನ್ನು ಮಹಾರಾಷ್ಟ್ರದಿಂದ ಹೊರಗೆ ಕಳುಹಿಸಬಹುದು ಎಂದು ನಿರೀಕ್ಷಿಸಲಾಗಿದೆ. ಮಧ್ಯಾಹ್ನ 12.30 ಕ್ಕೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.
ಬಿಜೆಪಿ ನಾಯಕ ಗಿರೀಶ್ ಮಹಾಜನ್ ಅವರು ಎಲ್ಲಾ ಎನ್ಸಿಪಿ(NCP)ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ನಾವು ನಮ್ಮ ಬಹುಮತವನ್ನು ಸಾಬೀತುಪಡಿಸುತ್ತೇವೆ, ನಮಗೆ 170 ಶಾಸಕರ ಬೆಂಬಲವಿದೆ. ಅಜಿತ್ ಪವಾರ್ ಅವರು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಅವರು ತಮ್ಮ ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದ್ದಾರೆ. ಅಂದರೆ ನಮಗೆ ಎಲ್ಲಾ ಎನ್ಸಿಪಿ ಶಾಸಕರ ಬೆಂಬಲವಿದೆ ಎಂದಿದ್ದಾರೆ.
ಮಹಾರಾಷ್ಟ್ರದ ನಾಟಕೀಯ ಬೆಳವಣಿಗೆಯಲ್ಲಿ ರಾಜ್ಯಪಾಲ ಬಿ.ಎಸ್. ಕೋಶ್ಯರಿ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿಯಾಗಿ ಎನ್ಸಿಪಿ ಮುಖಂಡ ಅಜಿತ್ ಪವಾರ್ ಅವರಿಗೆ ಶನಿವಾರ ಬೆಳಿಗ್ಗೆ ಪ್ರಮಾಣ ವಚನ ಬೋಧಿಸಿದರು. ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಉಭಯ ನಾಯಕರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಯದಲ್ಲಿ, ಬಿಜೆಪಿ ಮತ್ತು ಎನ್ಸಿಪಿ ಮುಖಂಡರೊಂದಿಗೆ ಇತರ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಮಾಣವಚನ ಸ್ವೀಕಾರದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್(Devendra Fadnavis), ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಶಿವಸೇನೆ ಚುನಾವಣೆಯ ನಂತರ ಜನಾದೇಶವನ್ನು ತಿರಸ್ಕರಿಸಿದೆ ಎಂದು ಹೇಳಿದರು. ಶಿವಸೇನೆ ಇತರ ಕೆಲವು ಪಕ್ಷಗಳೊಂದಿಗೆ ಸರ್ಕಾರ ರಚಿಸಲು ಪ್ರಯತ್ನಿಸಿತು, ಈ ಕಾರಣದಿಂದಾಗಿ ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನು ಹೇರಲಾಯಿತು ಎಂದರು.
ಆದರೆ, ಈ ಮೂರು ಪಕ್ಷಗಳಿಗೆ ಸ್ಥಿರ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಮತ್ತು ರಾಜ್ಯದಲ್ಲಿ ಶಾಶ್ವತ ಸರ್ಕಾರ ನೀಡಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ. "ಅಜಿತ್ ಪವಾರ್(Ajit pawar) ಮತ್ತು ಇತರರ ಬೆಂಬಲದೊಂದಿಗೆ ನಾವು ರಾಜ್ಯಪಾಲರಿಗೆ ಶಾಸಕರ ಬೆಂಬಲ ಹೊಂದಿರುವ ಪಟ್ಟಿಯನ್ನು ಕಳುಹಿಸಿದ್ದೇವೆ. ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಫಡ್ನವೀಸ್ ಹೇಳಿದರು.
ಅದೇ ಸಮಯದಲ್ಲಿ ಮಾತನಾಡಿದ ಅಜಿತ್ ಪವಾರ್ ಅವರು ಪ್ರಸ್ತುತ ಸಮಯದಲ್ಲಿ ರಾಜ್ಯದಲ್ಲಿ ಶಾಶ್ವತ ಸರ್ಕಾರವನ್ನು ರಚಿಸುವ ಅವಶ್ಯಕತೆಯಿದೆ. ಚುನಾವಣಾ ಫಲಿತಾಂಶ ಬಂದಾಗಿನಿಂದ "ಸರ್ಕಾರ ರಚಿಸಲು ನಿರಂತರ ಮಾತುಕತೆಗಳಿಂದ ನಾನು ಬೇಸತ್ತಿದ್ದೇನೆ ಮತ್ತು ಅದಕ್ಕಾಗಿಯೇ ರಾಜ್ಯದಲ್ಲಿ ಶಾಶ್ವತ ಸರ್ಕಾರವನ್ನಾಗಿ ನೀಡಲು ನಾನು ಫಡ್ನವೀಸ್ ಅವರೊಂದಿಗೆ ಹೋಗಲು ನಿರ್ಧರಿಸಿದೆ" ಎಂದು ತಿಳಿಸಿದರು.