ನವದೆಹಲಿ: ಪಾಕಿಸ್ತಾನದಲ್ಲಿ ಸಿಖ್ ಧರ್ಮಗುರು ಗುರುನಾನಕ್ ಅವರ ಜನ್ಮಸ್ಥಳವಾಗಿರುವ ನಾನಕಾನ ಸಾಹೀಬ್ ಗುರುದ್ವಾರದ ಮೇಲೆ ಸಾವಿರಾರು ಜನರು ನಡೆಸಿದ ಹಲ್ಲೆಯ ಒಂದು ದಿನದ ಬಳಿಕ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯನ್ನು ಖಂಡಿಸಿರುವ ಅವರು ಮೂಲಭೂತವಾದ ಅಪಾಯಕಾರಿಯಾಗಿದ್ದು ಕೇವಲ ಪ್ರೀತಿ ಮಾತ್ರ ಇದಕ್ಕೆ ಪ್ರತಿಕಾರವಾಗಿದೆ ಎಂದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಹುಲ್, "ನಾನಕಾನಾ ಸಾಹೀಬ್ ಮೇಲೆ ನಡೆದ ಹಲ್ಲೆ ನಿಂದನೀಯ ಕೃತ್ಯವಾಗಿದ್ದು, ಇದನ್ನು ಸ್ಪಷ್ಟವಾಗಿ ಖಂಡಿಸಲೇಬೇಕು. ಮೂಲಬೂತವಾದ ಒಂದು ಅಪಾಯಕಾರಿ ಮತ್ತು ಹಳೆ ವಿಷವಾಗಿದ್ದು, ಇದಕ್ಕೆ ಯಾವುದೇ ಗಡಿ ಇಲ್ಲ. ಪ್ರೀತಿ, ಪರಸ್ಪರ ಗೌರವ ಹಾಗೂ ತಿಳುವಳಿಕೆಗಳೇ ಇದರ ಪ್ರತಿಕಾರವಾಗಿವೆ" ಎಂದು ಹೇಳಿದ್ದಾರೆ.
ಗುರುದ್ವಾರದ ಮೇಲೆ ಆಕ್ರೋಶವ್ಯಕ್ತಪಡಿಸಿದ ಮುಸ್ಲಿಮರ ಗುಂಪು ಅದರ ಮೇಲೆ ಹಲ್ಲೆ ನಡೆಸಿದ ಒಂದು ದಿನದ ಬಳಿಕ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಲ್ಲೆಯ ವೇಳೆ ಸಿಖ್ ಸಮುದಾಯದ ಜನರು ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಹಲ್ಲೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅಲ್ಲಿನ ಸಾಂಪ್ರದಾಯಿಕ ಶಕ್ತಿಗಳು ದ್ವೇಷಪೂರಿತ ಘೋಷಣೆಗಳನ್ನು ಕೂಗಿ ಕಲ್ಲುತೂರಾಟ ನಡೆಸುತ್ತಿರುವುದು ಕಂಡುಬಂದಿದೆ.
ಈ ಘಟನೆಯ ಬಳಿಕ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಪಕ್ಷವನ್ನು ನಿರಂತರ ಗುರಿಯಾಗಿಸಿದೆ. ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ಧು ಅವರನ್ನು ಗುರಿಯಾಗಿಸಿರುವ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ, "ಇದುವರೆಗೂ ತಾವು ಈ ಹಲ್ಲೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವತಿಯಿಂದ ಯಾವುದೇ ಹೇಳಿಕೆ ಕೇಳಿಲ್ಲ. ಕಾಂಗ್ರೆಸ್ ಮುಖಂಡ ಸಿದ್ಧು ಪಾಜಿ ಎಲ್ಲಿ ತಲೆಮರೆಸಿಕೊಂಡಿದ್ದಾರೆ?, ಇಷ್ಟೆಲ್ಲಾ ಆದ ಬಳಿಕವೂ ಅವರು ISI ಮುಖ್ಯಸ್ಥನನ್ನು ತಬ್ಬಿಕೊಳ್ಳಲು ಮುಂದಾದರೆ, ಸಿದ್ಧು ಅವರ ಈ ವರ್ತನೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕು" ಎಂದಿದ್ದಾರೆ. ಮೀನಾಕ್ಷಿ ಲೇಖಿ ಅಷ್ಟೇ ಅಲ್ಲ ಟ್ವಿಟ್ಟರ್ ಮೇಲೆಯೂ ಕೂಡ ನೆಟ್ಟಿಗರು ಸಿದ್ಧು ಅವರ ಮೌನವನ್ನು ಪ್ರಶ್ನಿಸಿದ್ದಾರೆ. ಪಾಕಿಸ್ತಾನದಲ್ಲಿನ ನಾನಕಾನಾ ಸಾಹೀಬ್ ಮೇಲೆ ನಡೆದ ಹಲ್ಲೆಯ ಕುರಿತು ನವಜೋತ್ ಸಿಂಗ್ ಸಿದ್ಧು ಯಾವುದೇ ರೀತಿಯ ಹೇಳಿಕೆ ಇದುವರೆಗೂ ನೀಡಿಲ್ಲ ಎಂಬುದು ಇಲ್ಲಿ ಗಮನಾರ್ಹ.