ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಅವಸ್ಥೆ ಹಳೆ ಮುದುಕಿಗೆ ಶೃಂಗಾರ ಅನ್ನೋ ಸ್ಥಿತಿಗೆ ಬಂದು ತಲುಪಿವೆ. ಎಷ್ಟೇ ಸರೀ ಮಾಡಿದ್ರೂ ಕಳಪೆ ಕಾಮಗಾರಿಗೆ ಮುಕ್ತಿ ಸಿಗುತ್ತಿಲ್ಲ. ಬೆಂಗಳೂರಿನ ಹೃದಯ ಭಾಗದ ಕೆಂಪೇಗೌಡ ಬಸ್ ನಿಲ್ದಾಣವೇ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ.
ಮಾಧ್ಯಮಗಳ ಬಾಯಿ ಮುಚ್ಚಿಲು ಬಿಬಿಎಂಪಿ ಅಧಿಕಾರಿಗಳು ತೋರಿಕೆಗೆ ಕೆಲಸ ಮಾಡ್ತಾ ಇದ್ದಾರಾ ಅನ್ನೋ ಅನುಮಾನ ಮೂಡಿದೆ. ಇವತ್ತು ಗುಂಡಿ ಮುಚ್ಚುತ್ತೇವೆ, ನಾಳೆ ಮುಚ್ಚುತ್ತೇವೆ ಅಂತಾ ಬಿಎಂಟಿಸಿ ಅಧಿಕಾರಿಗಳು ಕಾಗಕ್ಕ ಗುಬ್ಬಕ್ಕನ ಕಥೆ ಹೇಳ್ತಾ ಇದ್ದಾರೆ. ಆದರೆ ಸಮಸ್ಯೆಗೆ ಇಂದಿಗೂ ಮುಕ್ತಿ ದೊರೆತಿಲ್ಲ. ಹೀಗಾಗಿ ಇಲ್ಲಿನ ಜನರು ಜೀವ ಕೈಲಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2 ಲಕ್ಷ ಕೋಟಿ ಬಂಡವಾಳ ಹೂಡಿಕೆ: ಸಿಎಂ ಬೊಮ್ಮಾಯಿ
ಬಸ್ ಒಳಗೆ ಕುಳಿತಿದ್ದವರು ಸಹ ಜೀವವನ್ನು ಅಂಗೈನಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಯಾಕಂದ್ರೆ ಬೃಹತ್ ಗುಂಡಿಗಳಿಗೆ ಬಸ್ ಚಕ್ರಗಳು ಇಳಿದು ಹತ್ತುವಾಗ ವಾಹನಗಳು ಡ್ಯಾನ್ಸ್ ಮಾಡುತ್ತವೆ. ಒಂದು ಕಡೆ ನಗರ ವ್ಯಾಪ್ತಿ ಗುಂಡಿ ಸಮಸ್ಯೆಯಿಂದ ಹೈರಾಣಾಗಿರುವ ಜನರು ಇನ್ನೊಂದು ಕಡೆ ಮೆಜೆಸ್ಟಿಕ್ ಭಾಗದಲ್ಲೂ ಗುಂಡಿ ಸಮಸ್ಯೆಯಿಂದ ಸುಸ್ತಾಗಿ ಹೋಗಿದ್ದಾರೆ.
ಗುಂಡಿ ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ಮುಂದಾದ್ರೂ ಮೆಜೆಸ್ಟಿಕ್‍ನಲ್ಲಿ ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ. ಗುಂಡಿ ಮುಚ್ಚಲು ಬೇರೆಡೆಯಿಂದ ಮಣ್ಣು ತಂದು ತೇಪೆ ಕೆಲಸ ಮಾಡಿ ಕೈ ತೊಳೆದುಕೊಳ್ಳಲಾಗಿದೆ. ಸಂಪೂರ್ಣವಾಗಿ ಗುಂಡಿ ಮುಚ್ಚುವ ಕೆಲಸಕ್ಕೆ ಕೈ ಹಾಕದೆ ಅಧಿಕಾರಿಗಳು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಗುಂಡಿಗಳಿರುವ ರಸ್ತೆಗಳಲ್ಲಿಯೇ ಪ್ರಯಾಣಿಕರು ಸಂಚರಿಸಬೇಕಾಗಿದ್ದು, ಪ್ರತಿದಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: ಗಡಿ ವಿವಾದ: ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ!
ಇತ್ತೀಚೆಗೆ ಬೆಂಗಳೂರಿನಲ್ಲಿ ಗುಂಡಿಗಳಿಗೆ ವಾಹನ ಸವಾರರು ಬಲಿಯಾಗುತ್ತಲೇ ಇದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ. ಸಿಲಿಕಾನ್ ಸಿಟಿ ಇದೀಗ ಗುಂಡಿಗಳ ಸಿಟಿ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ. ಇಲ್ಲಿನ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಕೈಜೋಡಿಸದ ಕಾರಣ ಜನರು ವಿಧಿ ಇಲ್ಲದೆ ಜೀವ ಕೈಲಿ ಹಿಡಿದುಕೊಂಡು ಸಂಚರಿಸಬೇಕಾದ ದುಸ್ಥಿತಿ ಬಂದೊದಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.