ಬೆಂಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಟಿ. ರವಿ ಪ್ರಯಾಣಿಸುತ್ತಿದ್ದ ಕಾರು ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಯುವಕರಿಬ್ಬರು ಸಾವಿಗೀಡಾಗಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಸಮೀಪದ ಊರ್ಕೇನಹಳ್ಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಸುನೀಲ್ ಕುಮಾರ್(27) ಮತ್ತು ಶಶಿಕುಮಾರ್(28) ಮೃತಪಟ್ಟಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಎರಡು ಕಾರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಕೆಲ ಸ್ನೇಹಿತರು ವಿರಾಮಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲು ನಿಲ್ಲಿಸಿ ಕೆಳಗಿಳಿದಿದ್ದರು. ಇದೇ ಮಾರ್ಗದಲ್ಲಿ ಬಂದ ಶಾಸಕ ಸಿ.ಟಿ. ರವಿ ಅವರಿದ್ದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಿ.ಟಿ. ರವಿ ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಬೇರೆ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.