ಶಿವಮೊಗ್ಗ: ಪ್ರವಾಹ ಪರಿಸ್ಥಿತಿಯ ಪರಿಶೀಲನೆಗಾಗಿ ಇಂದು ಶಿವಮೊಗ್ಗಕ್ಕೆ ಆಗಮಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಪ್ರವಾಹದಿಂದ ಉಂಟಾಗಿರುವ ನಷ್ಟದ ಬಗ್ಗೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಳಿಕ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಪ್ರವಾಹ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಗುಡ್ಡ ಕುಸಿದು, ತೋಟವೆಲ್ಲಾ ನೆಲಸಮವಾಗಿದೆ. ಸುಮಾರು 40 ಎಕರೆಗೂ ಹೆಚ್ಚು ಹೊಲ ಗದ್ದೆಗಳು ನೆಲಸಮವಾಗಿವೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಳೆ ಕಡಿಮೆಯಾದ ಬಳಿಕ, ನಾಲ್ಕೈದು ದಿನಗಳಲ್ಲಿ ಈ ಭಾಗದಲ್ಲಿ ಸರ್ವೇ ಮಾಡಿ ವರದಿ ನೀಡಲಿದ್ದಾರೆ. ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವರದಿಯನ್ನು ಆಧರಿಸಿ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಪ್ರವಾಹ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದರು. pic.twitter.com/MMUZefaONz
— CM of Karnataka (@CMofKarnataka) August 13, 2019
ಮುಂದುವರೆದು ಮಾತನಾಡಿದ ಅವರು, ಪ್ರವಾಹದಿಂದಾಗಿ ನಿರಾಶ್ರಿತರಾಗಿರುವ ಕುಟುಂಬಗಳ ಪುನರ್ವಸತಿಗೆ ಸರ್ಕಾರ ಬದ್ಧವಾಗಿದೆ. ಯಾರೂ ಸಹ ವದಂತಿಗಳಿಗೆ ಕಿವಿ ಕೊಡಬಾರದು. ರೈತರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾನಿದ್ದೇನೆ. ರೈತರಿಗಾಗಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲಿದೆ ಎಂದು ಭರವಸೆ ನೀಡಿದರು.
ಅಷ್ಟೇ ಅಲ್ಲದೆ, ಶಿವಮೊಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆಗಳ ಮರುನಿರ್ಮಾಣಕ್ಕೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಸಿಎಂ ಇದೇ ಸಂದರ್ಭದಲ್ಲಿ ಘೋಷಿಸಿದರು.