ಬೆಂಗಳೂರು: ಇನ್ನೇನು ದೀಪಾವಳಿ ಹಬ್ಬದ ಸಂಭ್ರಮದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದೆಲ್ಲೆಡೆ ಹಬ್ಬದ ಆಚರಣೆಗೆ ಭಾರದ ಸಿದ್ಧತೆ ಸಾಗಿರುವ ಬೆನ್ನಲ್ಲೇ, ಹಬ್ಬದ ವೇಳೆ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟ ಮಾಡಿದೆ.
ದೀಪಾವಳಿ ಹಬ್ಬದ ಸಂಬಂಧ ನವೆಂಬರ್ 5 ರಿಂದ ನವೆಂಬರ್ 8, 2018ರವರೆಗೆ ಪಟಾಕಿಗಳನ್ನು ರಾತ್ರಿ 8ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಲು ಸರ್ಕಾರ ಅನುಮತಿ ನೀಡಿದೆ. ಒಂದು ವೇಳೆ ಆದೇಶ ಪಾಲಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರಕಾರ ಜನತೆಗೆ ಎಚ್ಚರಿಕೆ ನೀಡಿದೆ.
ರಾಜ್ಯ ಸರಕಾರದ ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು
1. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ ಸರಣಿ ಸ್ಫೋಟಕ ಪಟಾಕಿಗಳನ್ನು ( Joined firecrackers (series crackers or laris)ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದು ನಿಷೇಧ.
2. ಸಿಡಿಮದ್ದು ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡುವುದು ಮತ್ತು ಅಧಿಕೃತವಾಗಿ ಪರವಾನಗಿ ಪಡೆದವರು ಸಿಡಿಮದ್ದು ಪಟಾಕಿಗಳನ್ನು ಈ ಆದೇಶಾನುಸಾರ ಮಾತ್ರ ಮಾರಾಟ ಮಾಡುವುದು.
3. ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಜಿಲ್ಲಾಡಳಿತದ ಎಲ್ಲಾ ಇಲಾಖೆಗಳು ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕರಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು.
4. ದೀಪಾವಳಿ ಹಬ್ಬದ ಸಂಬಂಧ ದಿನಾಂಕ 5 ನವೆಂಬರ್ ನಿಂದ 8 ನವೆಂಬರ್ 2018ರವರೆಗೆ ಪಟಾಕಿಗಳನ್ನು ರಾತ್ರಿ 8ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಿಡಿಸುವುದು.
5. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು 14 ದಿನಗಳ ಕಾಲ ಅಂದರೆ, ದೀಪಾವಳಿ ಹಬ್ಬ ಆರಂಭವಾಗುವ ಮೊದಲ 7 ದಿನ ಮತ್ತು ಹಬ್ಬರದ ನಂತರದ ಏಳು ದಿನ ಪಟಾಕಿ ಸಿಡಿಸುವುದರ ಬಗ್ಗೆ ಮೇಲ್ವಿಚಾರಣೆ ಮಾಡುವುದು.
6. ಎಲ್ಲ ಮಹಾನಗರ ಪಾಲಿಕೆಗಳು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಪಟಾಕಿಗಳನ್ನು ಸಾಮೂಹಿಕವಾಗಿ ಸಿಡಿಸುವುದರ ಬಗ್ಗೆ ಪರಿಶೀಲಿಸುವುದು
7. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯವರು ಸರ್ವೋಚ್ಛ ನ್ಯಾಯಾಲಯದ ಆದೇಶ ಪಾಲಿಸುವುದಕ್ಕೆ ಸೂಕ್ತ ಸಹಕಾರ ನೀಡುವುದು
8. ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಪಟಾಕಿ ಸಿಡಿತ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು.
ಇತ್ತೀಚೆಗಷ್ಟೇ ದೀಪಾವಳಿ ಹಾಗೂ ಇತರ ಹಬ್ಬಗಳಂದು ಪಟಾಕಿ ಸಿಡಿಸುವ ಬಗ್ಗೆ ಸಲ್ಲಿಸಿದ್ದ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪರಿಶೀಲನೆ ನಡೆಸಿದ್ದ ಸುಪ್ರೀಂ ಕೋರ್ಟ್, ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಹಬ್ಬಗಳಂದು ದಿನದಲ್ಲಿ ಕೇವಲ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಬೇಕು ಎಂದು ಹೆಲಿತ್ತಲ್ಲದೆ, ಆ ಅವಧಿಯನ್ನು ರಾಜ್ಯ ಸರ್ಕಾರಗಳು ಆಯಾ ರಾಜ್ಯಗಳ ಅನುಕೂಲಕ್ಕೆ ತಕ್ಕಂತೆ ನಿಗದಿಪಡಿಸಲು ಸೂಚನೆ ನೀಡಿತ್ತು.