ಬೆಂಗಳೂರು: ಸಿದ್ದಗಂಗಾ ಶ್ರೀಗಳು ನಮ್ಮ ಗುರುಗಳು. ಅವರಿಗೆ ನಾವು ಅಗೌರವ ತೋರುತ್ತಿಲ್ಲ ಹಾಗೂ ಯಾವುದೇ ವಿಚಾರವನ್ನು ತಿರುಚುತ್ತಿಲ್ಲ. ವಾಸ್ತವ ವಿಚಾರಗಳನ್ನು, ಸತ್ಯವನ್ನು ಜನರಿಗೆ ತಿಳಿಸುವುದು ನಮ್ಮ ಉದ್ದೇಶ ಎಂದು ಲಿಂಗಾಯಿತ ಮುಖಂಡರು ಸಮಜಾಯಿಷಿ ನೀಡಿದ್ದಾರೆ.
ಜಲ ಸಂಪನ್ಮೂಲ ಸಚಿವ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಂ.ಬಿ. ಪಾಟೀಲ್ ಇತ್ತೀಚೆಗೆ ಸಿದ್ದಗಂಗಾ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದರು. ನಂತರ ಸಿದ್ದಗಂಗಾ ಶ್ರೀಗಳು ಲಿಂಗಾಯತ ಧರ್ಮದ ಪರ ಇದ್ದಾರೆ ಎಂದು ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ
ಸಚಿವ ವಿನಯ್ ಕುಲಕರ್ಣಿ, ಬಿ.ಆರ್.ಪಾಟೀಲ್, ಬಸವರಾಜ್ ಹೊರಟ್ಟಿ, ಜಾಮಧಾರ್, ಜಯಣ್ಣ ಮತ್ತಿತರರು ಇವತ್ತು ಸುದ್ದಿಗೋಷ್ಟಿ ಕರೆದು ಸಮಜಾಯಿಷಿ ನೀಡಿದರು.
ಸಿದ್ದಗಂಗಾ ಶ್ರೀಗಳಿಗೆ ನಾವು ಅಗೌರವ ತೋರುತ್ತಿಲ್ಲ. ಈ ವಿಚಾರವನ್ನು ತಿರುಚುತ್ತಿಲ್ಲ. ವಾಸ್ತವ ಸಂಗತಿಗಳನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಬೇರೆ ರಾಜಕೀಯ ವ್ಯಕ್ತಿಗಳು ಸಿದ್ಧಗಂಗಾ ಶ್ರೀಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹೇಳಿದರು.
ಸೆ.10ರಂದು ಸಿದ್ದಗಂಗಾ ಮಠದ ಆಸ್ಪತ್ರೆ ಉದ್ಘಾಟನೆಗೆ ಸಚಿವ ಎಂ.ಬಿ. ಪಾಟೀಲ್ ಹೋಗಿದ್ದರು. ಕಾರ್ಯಕ್ರಮದ ಬಳಿಕ ಪಾಟೀಲ್ ಬೆಂಗಳೂರಿನ ಕಡೆಗೆ ವಾಪಸ್ಸಾಗುತ್ತಿದ್ದರು. ಆಗ ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಕರೆ ಮಾಡಿ ಶ್ರೀಗಳನ್ನು ಭೇಟಿ ಮಾಡುವಂತೆ ತಿಳಿಸಿದರು. ಎಂ.ಬಿ. ಪಾಟೀಲ್ ವಾಪಸ್ ಹೋಗಿ ಸಿದ್ದಗಂಗಾ ಸ್ವಾಮಿಜಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ನಂತರ ಆ ಭೇಟಿ ವಿವರವನ್ನು ಎಂ.ಬಿ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು. ಮರುದಿನ, ಅಂದರೆ ಸೆ.11 ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ ನಾವು ಕೂಡ ಸಿದ್ದಗಂಗಾ ಮಠಕ್ಕೆ ಹೋಗುವುದಾಗಿ ತಿಳಿಸುತ್ತಾರೆ. ಆಗಲೂ ಎಂ.ಬಿ. ಪಾಟೀಲ್ ಹೇಳಿಕೆ ವಿವಾದ ಆಗಿರಲಿಲ್ಲ. ಆದರೆ ಮಹಾಸಭೆ ಪದಾಧಿಕಾರಿಗಳು ಹೋಗಿ ಬಂದ ನಂತರ ವಿವಾದ ಆಗುತ್ತೆ ಎಂದು ಪರೋಕ್ಷವಾಗಿ ಮಾಜಿ ಸಚಿವ ವಿ. ಸೋಮಣ್ಣ ಅವರ ಮೇಲೆ ಹಾಗೂ ವೀರಶೈವ ಮಹಾಸಭಾದ ವಿರುದ್ದ ಜಾಮಧಾರ್ ಹರಿಹಾಯ್ದರು.