ನವದೆಹಲಿ: ಕಳೆದ ಹಲವು ತಿಂಗಳಿಂದ ಮೌನ ವಹಿಸಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮತ್ತೆ ಭುಗಿಲೇಳುವ ಸಾಧ್ಯತೆ ಇದೇ. ಇದಕ್ಕಾಗಿ ದೆಹಲಿಯಲ್ಲಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಕೇಂದ್ರ ಸರಕಾರದ ಗಮನಸೆಳೆಯಲು ದೆಹಲಿಯ ತಾಲ್ಕೊಟರಾ ಸ್ಟೇಡಿಯಂನಲ್ಲಿ ಡಿಸೆಂಬರ್ 10, 11 ಮತ್ತು 12 ರಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ದೆಹಲಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಚನ್ನಬಸವಾನಂದ ಸ್ವಾಮೀಜಿ, ಲೋಕಸಭಾ ಚುನಾವಣಾ ಒಳಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹಾಕುವ ಸಲುವಾಗಿ ಬೃಹತ್ ಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹರಾಷ್ಟ್ರ, ಗೋವಾ, ತಮಿಳುನಾಡಿನಿಂದ ಬಸವ ಅಭಿಮಾನಿಗಳು ಬರಲಿದ್ದಾರೆ ಎಂದು ತಿಳಿಸಿದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಸಿಗಬೇಕು ಎಂದು ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಕಡತವನ್ನು ಕಳುಹಿಸಿತ್ತು. ಆದರೆ, ಅದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಲಿಲ್ಲ. ಇದೀಗ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಕೋಲ್ಡ್ ಸ್ಟೋರೇಜ್ ನಲ್ಲಿಟ್ಟಿದೆ. ಹಾಗಾಗಿ ಮತ್ತೆ ಕೇಂದ್ರದ ಮೇಲೆ ಒತ್ತಡ ಹಾಕಿ ಹೋರಾಟ ಮುಂದುವರೆಸುವುದಾಗಿ ಇತ್ತೀಚೆಗಷ್ಟೇ ಮಾತೆ ಮಹಾದೇವಿ ಹೇಳಿದ್ದರು.