ಬೆಂಗಳೂರು: ರಾಮನಗರದಲ್ಲಿ ಚಿತ್ರ ನಗರಿ ನಿರ್ಮಾಣಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಮನಗರದಲ್ಲಿ ಚಿತ್ರನಗರಿ ನಿರ್ಮಾಣಕ್ಕಿಂತ ಮೈಸೂರಿನಲ್ಲೇ ಚಿತ್ರ ನಗರಿ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಹೊಸದಾಗಿ ಮಂಡಿಸಿರುವ ಬಜೆಟ್ ನಲ್ಲಿ ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರಿಸಿದ್ದೀರಿ. ಹೀಗಾಗಿ ನೀವೀಗ ಬಜೆಟ್ ನಲ್ಲಿ ಮಂಡಿಸಿರುವ ನಿರ್ಧಾರ ಮರುಪರಿಶೀಲಿಸಿ, ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ ಮಾಡಲು ಮುಂದಾಗಬೇಕು ಎಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
16 ಅರಮನೆಗಳು, 250ಕ್ಕೂ ಹೆಚ್ಚು ಲೋಕೇಶನ್ ಗಳು, ನದಿ, ನಾಳೆ, ಕಾಲುವೆ, ಬೆಟ್ಟ-ಗುಡ್ಡಗಳು ಚಿತ್ರೀಕರಣಕ್ಕೆ ಪ್ರಶಸ್ತವಾಗಿದೆ. ಅಲ್ಲದೆ, ಇದೀಗ ಮೈಸೂರಿನಲ್ಲಿ ವಿಮಾನ ನಿಲ್ದಾಣ ಸೌಲಭ್ಯವೂ ಇರುವುದರಿಂದ ಚಿತ್ರೀಕರಣಕ್ಕಾಗಿ ದೇಶ-ವಿದೇಶಗಳಿಂದ ಬರುವವರಿಗೆ ಅನುಕೂಲವಾಗಲಿದೆ. ಇದನ್ನೆಲಾ ಮನಗಂಡು ಹಿಂದಿನ ಕಾಂಗ್ರೆಸ್ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ನಿರ್ಣಯ ಕೈಗೊಂಡು ನೂರು ಎಕರೆ ಜಮೀನು ಮಂಜೂರು ಮಾಡಿತ್ತು. ಅಲ್ಲದೆ, ಬಜೆಟ್ ನಲ್ಲಿಯೂ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಇದನ್ನು ರಾಮನಗರಕ್ಕೆ ಸ್ಥಳಾಂತರಿಸಲು ಬಜೆಟ್'ನಲ್ಲಿ ಘೋಷಣೆ ಮಾಡಿರುವುದು ಸಮಂಜಸವಲ್ಲ ಎಂದು ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.